ಸುಮತೀಂದ್ರ ನಾಡಿಗ ಮೂರು ಭೇಟಿ ಎರಡು ನೆನಪು

Update: 2018-08-20 18:50 GMT

ಬೆಂಗಳೂರಿನ ಒಂದು ಖಾಸಗಿ ಪದವಿಪೂರ್ವ ಕಾಲೇಜಿಗೆ ಉಪನ್ಯಾಸಕ ಹುದ್ದೆಗೆ ನಾನು ಅರ್ಜಿ ಸಲ್ಲಿಸಲು ಹೋದಾಗ ಅಲ್ಲಿಗೆ ನಾಡಿಗರು ಕೂಡ ಬಂದಿದ್ದರು. ಅವರು ಅದೇ ಹುದ್ದೆಗೆ ಓರ್ವ ಅಭ್ಯರ್ಥಿಯಾಗಿದ್ದರು. ನಾನೇ ಪದವಿ ಕಾಲೇಜಿನ ಬದಲಾಗಿ ಪದವಿ ಪೂರ್ವ ಕಾಲೇಜಿಗೆ ಸೇರಲು ಹಿಂಜರಿಯುತ್ತಿರುವಾಗ ಅಮೆರಿಕದಲ್ಲಿ ಪ್ರಾಧ್ಯಾಪಕರಾಗಿದ್ದವರೇ ನನ್ನ ಜೊತೆ ಪದವಿ ಪೂರ್ವ ಕಾಲೇಜಿಗೆ ಅರ್ಜಿ ಗುಜರಾಯಿಸುವ ಸ್ಥಿತಿ ನೋಡಿದಾಗ ಬೆಂಗಳೂರಿನಲ್ಲಿ ನೌಕರಿ ಸಿಗುವುದು ಸುಲಭವಿಲ್ಲ ಅಂದುಕೊಂಡೆ. ಅಲ್ಲದೆ ಅಮೆರಿಕದಿಂದ ಬಂದಂತಹವರೇ ಇರುವಾಗ ನನಗೆ ಇನ್ನೆಲ್ಲಿಯ ಚಾನ್ಸ್ ಎಂದೂ ಅನ್ನಿಸಿತ್ತು.
ಆದರೆ ನಾಡಿಗ ಮತ್ತು ನಾನು ಇಬ್ಬರೂ-ಮತ್ತೆ ಪುನಃ ಸಮಾನ ವ್ಯಸನಿಗಳಾದೆವು: ನಮಗಿಬ್ಬರಿಗೂ ಆ ನೌಕರಿ ದೊರೆಯಲಿಲ್ಲ. ಮೊದಲೇ ನಿಗದಿ ಆಗಿದ್ದವರೊಬ್ಬರು ನೇಮಕಗೊಂಡರು.


‘‘ಸುಮತೀಂದ್ರ ನಾಡಿಗ ಇನ್ನಿಲ್ಲ’’ ಎಂದು ಪತ್ರಿಕೆಗಳಲ್ಲಿ ಓದಿದಾಗ ‘ಅಯ್ಯೋ, ನಾಡಿಗರಿಗೆ ಅಷ್ಟು ಬೇಗ ಸಾಯುವಷ್ಟು ವಯಸ್ಸಾಗಿ ಬಿಟ್ಟಿತೇ?’ ಅಂತ ನನ್ನಷ್ಟಕ್ಕೇ ಹೇಳಿಕೊಂಡೆ. ಸುದ್ದಿಯನ್ನು ಮೊದಲು ಓದಿದ ನನ್ನ ಪತ್ನಿ ಶಾಂತಾ, ‘‘ನೋಡಿ ನಾಡಿಗರು ಹೋದರಂತೆ’’ ಅಂದಾಗ ಒಂದು ಕ್ಷಣ ಏನೂ ತೋಚಲಿಲ್ಲ. ಅವಳಿಗೆ ನಾಡಿಗರ ಸಾವಿನ ಸುದ್ದಿ ಕನ್ನಡದ ಇತರ ಸಾಹಿತಿಗಳ ಸಾವಿನ ಸುದ್ದಿಗಿಂತ ಹೆಚ್ಚು ಮುಖ್ಯವಾಗಲು ಒಂದು ಕಾರಣ ಇತ್ತು. ನಲ್ವತ್ತನಾಲ್ಕು ವರ್ಷಗಳ ಹಿಂದೆ ನಾಡಿಗರು ಬೆಂಗಳೂರಿನ ಜರ್ನಲಿಸ್ಟ್ ಕಾಲನಿಯಲ್ಲಿದ್ದ ನಮ್ಮ ಮನೆಗೆ ಬಂದಿದ್ದರು. ಅವಳು ಅವರನ್ನು ಮುಖತಃ ಭೇಟಿಯಾದದ್ದು ಅದು ಮೊದಲ ಬಾರಿ ಮತ್ತು ಕೊನೆಯ ಬಾರಿ ಕೂಡ.

 1974ರ ಮೇ ತಿಂಗಳಲ್ಲಿ, ಮದುವೆಯಾಗಿ ಕೆಲವೇ ದಿನಗಳ ಬಳಿಕ, ನಾವು ಆ ಮನೆಗೆ, (ಆಗ ದುಬಾರಿ ಎನ್ನಬಹುದಾಗಿದ್ದ) ತಿಂಗಳೊಂದರ 150 ರೂಪಾಯಿ ಬಾಡಿಗೆ ನೀಡಲು ಒಪ್ಪಿಅಲ್ಲಿ ಸಂಸಾರ ಹೂಡಿದ್ದೆವು. ಆ ದಿನಗಳಲ್ಲಿ ನಾನೂ ನಾಡಿಗರೂ ಸಮಾನವ್ಯಸನಿಗಳಾಗಿದ್ದೆವು: ಅವರು ಮತ್ತು ನಾನು ನಿರುದ್ಯೋಗಿಗಳಾಗಿದ್ದೆವು. ಅದಾಗಲೇ ಎರಡು ವರ್ಷಗಳ ಕಾಲ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡಿದ್ದರೂ, ನನ್ನ ಪತ್ನಿ ಬೆಂಗಳೂರಿನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರಿಂದ ನಾನೂ ಬೆಂಗಳೂರಿನಲ್ಲೇ ನೌಕರಿಗಾಗಿ ಅಲೆಯುತ್ತಿದ್ದೆ.

ಆಗಷ್ಟೇ ಅಮೆರಿಕದಿಂದ ಮರಳಿದ್ದ ನಾಡಿಗರು ಕೂಡ ನೌಕರಿಯ ಹುಡುಕಾಟದಲ್ಲಿದ್ದರು. ಬೆಂಗಳೂರಿನ ಒಂದು ಖಾಸಗಿ ಪದವಿಪೂರ್ವ ಕಾಲೇಜಿಗೆ ಉಪನ್ಯಾಸಕ ಹುದ್ದೆಗೆ ನಾನು ಅರ್ಜಿ ಸಲ್ಲಿಸಲು ಹೋದಾಗ ಅಲ್ಲಿಗೆ ನಾಡಿಗರು ಕೂಡ ಬಂದಿದ್ದರು. ಅವರು ಅದೇ ಹುದ್ದೆಗೆ ಓರ್ವ ಅಭ್ಯರ್ಥಿಯಾಗಿದ್ದರು. ನಾನೇ ಪದವಿ ಕಾಲೇಜಿನ ಬದಲಾಗಿ ಪದವಿ ಪೂರ್ವ ಕಾಲೇಜಿಗೆ ಸೇರಲು ಹಿಂಜರಿಯುತ್ತಿರುವಾಗ ಅಮೆರಿಕದಲ್ಲಿ ಪ್ರಾಧ್ಯಾಪಕರಾಗಿದ್ದವರೇ ನನ್ನ ಜೊತೆ ಪದವಿ ಪೂರ್ವ ಕಾಲೇಜಿಗೆ ಅರ್ಜಿ ಗುಜರಾಯಿಸುವ ಸ್ಥಿತಿ ನೋಡಿದಾಗ ಬೆಂಗಳೂರಿನಲ್ಲಿ ನೌಕರಿ ಸಿಗುವುದು ಸುಲಭವಿಲ್ಲ ಅಂದುಕೊಂಡೆ. ಅಲ್ಲದೆ ಅಮೆರಿಕದಿಂದ ಬಂದಂತಹವರೇ ಇರುವಾಗ ನನಗೆ ಇನ್ನೆಲ್ಲಿಯ ಚಾನ್ಸ್ ಎಂದೂ ಅನ್ನಿಸಿತ್ತು.
ಆದರೆ ನಾಡಿಗ ಮತ್ತು ನಾನು ಇಬ್ಬರೂ-ಮತ್ತೆ ಪುನಃ ಸಮಾನ ವ್ಯಸನಿಗಳಾದೆವು: ನಮಗಿಬ್ಬರಿಗೂ ಆ ನೌಕರಿ ದೊರೆಯಲಿಲ್ಲ. ಮೊದಲೇ ನಿಗದಿ ಆಗಿದ್ದವರೊಬ್ಬರು ನೇಮಕಗೊಂಡರು.

 ಇದಾಗಿ ಕೆಲವು ದಿನಗಳ ಬಳಿಕ ಗಾಂಧಿ ಬಝಾರ್‌ನಲ್ಲಿ ಅಚಾನಕ್ಕಾಗಿ ಎರಡನೆಯ ಬಾರಿಗೆ ನಾಡಿಗರು ಸಿಕ್ಕಿದ್ದರು. ನನ್ನ ಬಳಿ ಇದ್ದ ಅದ್ಯಾವುದೋ ನೌಕರಿಯ ಜಾಹೀರಾತಿರಬೇಕು; ‘‘ಅದನ್ನು ಕೊಡುತ್ತೇನೆ ನೀವೂ ಅಪ್ಲಿಕೇಷನ್ ಹಾಕಿ ಸರ್’’ ಎಂದು ಹೇಳಿ ಅದನ್ನು ನೀಡಲೆಂದು ಅವರನ್ನು ನನ್ನ ಜರ್ನಲಿಸ್ಟ್ ಕಾಲನಿಯ ಮನೆಗೆ ಕರೆದುಕೊಂಡು ಹೋದೆ.

ದಾರಿಯುದ್ದಕ್ಕೂ ನಾವು ಏನು ಮಾತಾಡಿದ್ದೇವೆಂದು ಈಗ ನೆನಪಾಗುತ್ತಿಲ್ಲ. ಆದರೆ ನಮ್ಮ ಆ ಎರಡು ಭೇಟಿಗಳಲ್ಲೂ ನಾಡಿಗರು ಟಿಪ್‌ಟಾಪ್ ಆಗಿ ಸೂಟು ಧರಿಸಿದ್ದರು. ಅವರ ಬಲಗೈಯಲ್ಲೊಂದು ಬ್ರೀಫ್ ನೇತಾಡುತ್ತಿತ್ತು. ಕೆಲವು ಸಮಯದ ಬಳಿಕ ಅವರು ಬಸವನಗುಡಿಯ ಕೆನರಾ ಬ್ಯಾಂಕ್ ಪಕ್ಕದಲ್ಲಿ ಒಂದು ಪುಸ್ತಕದ ಅಂಗಡಿ ತೆರೆದರು. ಬಸವನಗುಡಿಯಲ್ಲಿ ಅವರ ಅಂಗಡಿಯಿಂದ ವಾಕಿಂಗ್ ಡಿಸ್ಟೆನ್ಸ್‌ನಲ್ಲಿ ಶಾಂತಾಳ ಅಣ್ಣನ ಮನೆ ಇದ್ದುದರಿಂದ ಅಲ್ಲಿಗೆ ಹೋಗುವಾಗ ಆಗಾಗ ಅವರ ಅಂಗಡಿಯ ಮುಂದೆ ಹೋಗುತ್ತಿದ್ದ ನನಗೆ ಆಗೊಮ್ಮೆ ಈಗೊಮ್ಮೆ ಅಲ್ಲಿಗೆ ತನ್ನ ಕವನ ಹೊತ್ತು ಬರುತ್ತಿದ್ದ ರಾಮಚಂದ್ರ ದೇವ ನಾಡಿಗರ ಬಗ್ಗೆ, ಅವರ ಕಾವ್ಯದ ಬಗ್ಗೆ ಹೇಳುತ್ತಿದ್ದ. ದೇವ ಮೈಸೂರಿನಲ್ಲಿ ಎಂ.ಎ. ಇಂಗ್ಲಿಷ್ ವಿಭಾಗದಲ್ಲಿ ನನ್ನ ಸಹಪಾಠಿಯಾಗಿದ್ದವ.

ನಾನು ಮೈಸೂರಿಗೆ ಎಂ.ಎ. ಓದಲು ಹೋಗುವ ಮೊದಲೇ ನನಗೆ ನಾಡಿಗರ ಪರಿಚಯವಾಗಿದ್ದು ಅವರು ಗೋಪಾಲಕೃಷ್ಣ ಅಡಿಗರ ಕಾವ್ಯದ ಬಗ್ಗೆ ಬರೆದಿದ್ದ ವಿಮರ್ಶಾ ಪುಸ್ತಕದ ವಿಷಯದಲ್ಲಿ ನಡೆದಿದ್ದ ಒಂದು ಜಗಳದ ಮೂಲಕ!. ಆ ಜಗಳ ಹೀಗೆ ನಡೆದಿತ್ತು. ಮಂಗಳೂರಿನ ಮಂಗಳ ಗಂಗೋತ್ರಿಯಲ್ಲಿ ಬಿ.ಎ. ವಿವೇಕ ರೈಯವರು ಕನ್ನಡ ದ್ವಿತೀಯ ಎಂ.ಎ. ತರಗತಿಯ ವಿದ್ಯಾರ್ಥಿಯಾಗಿದ್ದಾಗ, ನನ್ನ ಬಾಲ್ಯದ ಗೆಳೆಯ ಕೆ.ಎಸ್. ಕೆದ್ಲಾಯ ಪ್ರಥಮ ಎಂ.ಎ. ವಿದ್ಯಾರ್ಥಿ. ಆತ ಅಡಿಗರ ಕಾವ್ಯವನ್ನೋದಿ ಅದಾಗಲೇ ಅಜ್ಜ ನೆಟ್ಟ ಆಲದ ಮರ ಅಂತೇನೂ ಒಂದು ಕವನ ಗೀಚಿದ್ದ. ಅದನ್ನು ನನಗೆ ತೋರಿಸಿ, ‘ಹೇಗಿದೆ?’ ಅಂತ ಕೇಳಿದ್ದ. ಕಾವ್ಯದ ಬಗ್ಗೆ ಆಗ ಸಾಕಷ್ಟು ಅಜ್ಞಾನಿಯಾಗಿದ್ದ ನಾನು ‘‘ಒಳ್ಳೆಯದಾಗಿದೆ ಪತ್ರಿಕೆಗೆ ಕಳುಹಿಸು’’ ಎಂದಿದ್ದೆ. ಆತ ಹಾಗೆಯೇ ಮಾಡಿದ. ಅದು ಪ್ರಕಟವೂ ಆಯಿತು.

ಆ ಕವನ ಬರೆಯುವ ಮೊದಲು ಅವ ನನ್ನಿಂದ, ನಾನು ವಿದ್ಯಾರ್ಥಿ ಯಾಗಿದ್ದ ಉಡುಪಿಯ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜಿನ ಲೈಬ್ರರಿಯಿಂದ ಅಡಿಗರ ಕಾವ್ಯದ ವಿಮರ್ಶೆಯ ನಾಡಿಗರ ‘ಅಡಿಗರು ಮತ್ತು ನವ್ಯ ಕಾವ್ಯ’ ತರಿಸಿಕೊಂಡಿದ್ದ. ಅದನ್ನು ಅವ ಓದಿದ ಬಳಿಕ ಉಡುಪಿಯ ಒಂದು ಟೈಲರ್ ಅಂಗಡಿಯ ದೊಡ್ಡ ಮೇಜಿನ ಡ್ರಾಯರ್‌ನಲ್ಲಿ ಇಟ್ಟಿದ್ದ. ಆ ಅಂಗಡಿ ಆ ದಿನಗಳಲ್ಲಿ ನಮ್ಮ ಭೇಟಿಯ, ಹರಟೆಯ ಕೇಂದ್ರವಾಗಿತ್ತು. ಪುಸ್ತಕವನ್ನು ಲೈಬ್ರರಿಗೆ ಹಿಂದಿರುಗಿಸಬೇಕೆಂದು ಕೆಲವು ದಿನಗಳ ಬಳಿಕ ಡ್ರಾಯರ್‌ಗೆ ಕೈಹಾಕಿದಾಗ ಕೈಗೆ ಪುಸ್ತಕ ಸಿಗಲಿಲ್ಲ. ಅದು ಎಲ್ಲಿಗೆ ಹೋಯಿತು? ಯಾರು ಅದನ್ನು ತೆಗೆದುಕೊಂಡು ಹೋಗಿರಬಹುದು? ಎಂದು ನಾನು ಮತ್ತು ಕೆದ್ಲಾಯ ಎಷ್ಟು ಯೋಚಿಸಿದರೂ ನಮಗೆ ಪರಿಹಾರ ಸಿಗಲಿಲ್ಲ. ಅಡಿಗರ ಕಾವ್ಯವನ್ನು, ಅದರಲ್ಲೂ ಆ ಕಾವ್ಯದ ಮೇಲಣ ವಿಮರ್ಶೆಯನ್ನು ನಿನಗೆ ಜ್ಞಾನಪೀಠ ಪ್ರಶಸ್ತಿ ನೀಡುತ್ತೇವೆ ಎಂದರೂ ಓದುವ ಮನುಷ್ಯ ಅಂಗಡಿಯ ಆಸುಪಾಸಿನಲ್ಲಿ, ಅಲ್ಲಿಗೆ ಬರುವ ಗಿರಾಕಿಗಳಲ್ಲಿ ಇರಲಿಲ್ಲ. ಪುಸ್ತಕ ಹಿಂದಿರುಗಿಸದೆ ಇದ್ದರೆ ಲೈಬ್ರರಿಗೆ ಪುಸ್ತಕದ ಮೊತ್ತವನ್ನು ನಾನೇ ಪಾವತಿಸಬೇಕು. ಇದೊಳ್ಳೆ ಕಥೆಯಾಯಿತಲ್ಲ ಅಂತ ನಾವು ಅಂದುಕೊಳ್ಳುತ್ತಿರುವಾಗ...

 ಆ ಅಂಗಡಿಗೆ ಬರುತ್ತಿದ್ದ ಒಬ್ಬ ಮನುಷ್ಯ ನಮ್ಮ ಪರದಾಟ ನೋಡಿ ‘‘ಆ ಪುಸ್ತಕನಾ? ಅವೆನ್ ಯಾನ್ ಪಸೊಂದು ಪೋತೆ’’ (ಆ ಪುಸ್ತಕವೇ? ಅದನ್ನು ನಾನು ತೆಗೆದುಕೊಂಡು ಹೋಗಿದ್ದೇನೆ) ಎಂದ. ಕೆದ್ಲಾಯನಿಗೆ ಸಿಟ್ಟು ನೆತ್ತಿಗೇರಿತು. ‘‘ನೀನ್ಯಾಕೆ ಅದನ್ನು ಕೊಂಡು ಹೋದಿ? ಅದು ನಿನಗೆ ಅರ್ಥವಾಗುವ ಪುಸ್ತಕವೇ?’’ ಎಂದು ಎಗರಾಡಿದ. ಆ ಮನುಷ್ಯನೂ ತಾನೇನು ಜಗಳ ಕಲೆಯಲ್ಲಿ ನಿಮಗಿಂತ ಕಡಿಮೆ ಇಲ್ಲ ಎನ್ನುವಂತೆ ವಾದ ಮಾಡಿದ. ‘‘ಅದೊಂದು ಕತೆ ಪುಸ್ತಕ ಇರಬಹುದೆಂದು ನಾನು ಕೊಂಡು ಹೋದೆ. ಈಗ ತಡವಾಗಿಯಾದರೂ ಹಿಂದೆ ತಂದಿದ್ದೇನಲ್ಲ!’’ ಎಂದು ಅವ ಏರಿದ ಸ್ವರದಲ್ಲೇ ವಾದಿಸಿದ. ಮಧ್ಯಪ್ರವೇಶಿಸಿದ ಟೈಲರ್ ಕದನ ನಿರತ ಉಭಯ ಪಕ್ಷಗಳನ್ನು ಸಮಾಧಾನ ಪಡಿಸಿ ನಮ್ಮ ಜಗಳಕ್ಕೆ ಮಂಗಳ ಹಾಡಿದ.

ಕಾವ್ಯಪ್ರಿಯರಾದ, ಕಾವ್ಯವನ್ನೇ ಉಸಿರಾಡುತ್ತಿದ್ದರು ಎಂದರೂ ತಪ್ಪಾಗದ ನಾಡಿಗರು ನೆನಪಾದಾಗೆಲ್ಲ ಅಡಿಗರ ಕಾವ್ಯದ ಬಗ್ಗೆ, ಅವರು ಬರೆದ ಪುಸ್ತಕದ ಬಗ್ಗೆ ನಡೆದ ಆ ಒಂದು ಜಗಳ ನನಗೆ ನೆನಪಾಗುತ್ತಿರುತ್ತದೆ.

ಮುಂದೆ ಎಷ್ಟೋ ವರ್ಷಗಳು ಉರುಳಿದವು. ಕಾಸರಗೋಡಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯ ವತಿಯಿಂದ ನಡೆದ ಒಂದು ಸಾಹಿತ್ಯ ಕಮ್ಮಟಕ್ಕೆ ಚಿನ್ನಾ ಕಾಸರಗೋಡು ನನ್ನನ್ನು ಆಹ್ವಾನಿಸಿದ್ದರು. ಉಡುಪಿಯ ರಂಗಭೂಮಿಯ ನಾಟಕ ಕಾರ್ಯಕ್ರಮವೊಂದು ನಡೆಯುವ ಮೊದಲು ಚಿನ್ನಾ ನೀಡಿದ ಏಕಪಾತ್ರಾಭಿನಯದಲ್ಲಿ, ಸ್ನಾನದ ಕೋಣೆಯಲ್ಲಿ ನಲ್ಲಿ ನೀರು ಏಕಾಏಕಿ ನಿಂತು ಹೋದಾಗ ಮೈತುಂಬ ಸೋಪ್ ಹಚ್ಚಿಕೊಂಡ ಮನುಷ್ಯ ನಡೆಸುವ ಒದ್ದಾಟವನ್ನು ರಂಗದ ಮೇಲೆ ಅದ್ಭುತವಾಗಿ ಪ್ರದರ್ಶಿಸಿ ಉಡುಪಿಯ ಕಲಾಸಕ್ತರ ಮನ ಗೆದ್ದಿದ್ದ ಚಿನ್ನಾ ತನ್ನ ಹಾಸ್ಯ ಪೂರಿತ ಮಾತುಗಳಿಗೆ, ಸಿನೆಮಾ, ನಾಟಕಕ್ಕೆ ಸಂಬಂಧಿಸಿದ ಅನೆಕ್‌ಡೋಟ್‌ಗಳ ಅಭಿವ್ಯಕ್ತಿಗೆ ಹೆಸರಾದವರು. ಅವರ ಆಹ್ವಾನವನ್ನು ತಿರಸ್ಕರಿಸಲಾಗದೆ ನಾನು ಕಾಸರಗೋಡಿಗೆ ಹೋದಾಗ ನನಗೆ ಅಲ್ಲಿ ಒಂದು ಸಿಹಿಯಾದ ಆಶ್ಚರ್ಯ ಕಾದಿತ್ತು: ಸುಮತೀಂದ್ರ ನಾಡಿಗರು ಆ ಕಾರ್ಯಕ್ರಮಕ್ಕೆ ಬಂದಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗ ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯರಾಗಿದ್ದ ಮತ್ತು ಮೈಸೂರಿನಲ್ಲಿ ಡಿ. ಬನುಮಯ್ಯ ಕಾಲೇಜಿನಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಕೆ. ಎನ್. ಶಿವತೀರ್ಥನ್ ಕೂಡ ಬಂದಿದ್ದರು.

ಕಮ್ಮಟ ಕಾರ್ಯಕ್ರಮಗಳೆಲ್ಲ ಮುಗಿದು ಸಂಜೆಯಾಯಿತು. ರಾತ್ರಿ ಊಟಕ್ಕೆ ಮೊದಲು ನಮ್ಮನ್ನು ಚಿನ್ನಾ ಉಳಿಸಿಕೊಂಡಿದ್ದ ಹೋಟೆಲ್ನ ಒಂದು ಕೋಣೆಯಲ್ಲಿ ನಾವೆಲ್ಲ ಸೇರಿದ್ದೆವು. ಕರಾವಳಿ ಕರ್ನಾಟಕದ ಪ್ರಸಿದ್ಧ ಸಾಪ್ತಾಹಿಕ ಒಂದರ ಉಪ ಸಂಪಾದಕರೊಬ್ಬರು ಕೂಡಾ ನಮ್ಮ ಜೊತೆ ಇದ್ದರು. ಇನ್ನು ಕೆಲವರು ಪತ್ರಕರ್ತರೂ ಅಲ್ಲಿ ಸೇರಿದ್ದರು. ನಿಧಾನವಾಗಿ ಪಾರ್ಟಿಯ ರಂಗೇರುತ್ತಿತ್ತು.

ಕನ್ನಡ ಸಾಹಿತ್ಯದ ಕೆಲವು ಪ್ರಮುಖ ಲೇಖಕರ ಬಗ್ಗೆ ಮಾತುಗಳು, ಇನ್ನೇನೋ ಹರಟೆ, ವೈಯಕ್ತಿಕ ನೆನಪುಗಳು ಮಾತಿನ ಮಧ್ಯೆ ಬಂದು ಹೋಗುತ್ತಿದ್ದವು. ನಾನು ನಾಡಿಗರ ಪಕ್ಕ ಕೂತಿದ್ದೆ. ‘‘ಮತ್ತೇನು ವಿಶೇಷ, ಹೇಗಿದ್ದೀರಿ ಸಾರ್’’ ಎಂದೆಲ್ಲ ಉಭಯ ಕುಶಲೋಪರಿಯೂ ನಡೆಯಿತು. ಮಾತಿನ ಮಧ್ಯೆ ‘‘ಞ ಟ್ಞ ಜಿ ಛ್ಞಿಠಿಛ್ಟಿಜ್ಞಿಜ ಜಿ ಠಿಛಿಛ್ಞಿಜಛಿ’’ ಎಂದು ನಾಡಿಗರು ಹೇಳಿದ್ದು ಇನ್ನೂ ನನ್ನ ಮನಸ್ಸಿನಲ್ಲಿ ಹಸಿರಾಗಿಯೇ ಇದೆ.
ಆಮೇಲೆ ಅವರ ‘ಬೊಕ್ಕ ತಲೆಯ ನರ್ತಕಿ’ ಬಗ್ಗೆ ಯಾರೋ ಕೇಳಿದರು. ನಾಟಕದತ್ತ ತಿರುಗಿದ ಹರಟೆ ಕನ್ನಡದ ಸಮಕಾಲೀನ ನಾಟಕಕಾರತ್ತ ಹೊರಳಿತು. ಚಂದ್ರಶೇಖರ ಕಂಬಾರರ ನಾಟಕಗಳ ಬಗ್ಗೆಯೂ ಮಾತು ಬಂತು. ‘‘ಕಂಬಾರರ ನಾಟಕದ ಬಗ್ಗೆ ನಿಮಗೇನು ಅನ್ನಿಸುತ್ತದೆ?’’ ಅಂತ ಒಬ್ಬರು ಕೇಳಿದರು. ಆಗ ಮುಗುಳ್ನಗುತ್ತಲೇ ಮಾತಾಡುತ್ತಿದ್ದ, ತುಂಬಾ ಖುಷಿಯಲ್ಲಿದ್ದ ನಾಡಿಗರು ಒಂದು ದ್ವಿಪದಿ ಹೇಳಿದರು. ಅವರು ಆ ದ್ವಿಪದಿಯನ್ನು ಇತರ ಹಲವು ಸಾಹಿತ್ಯ ಮಿತ್ರರ ಕೂಟಗಳಲ್ಲೂ, ಖಾಸಗಿ ಗೋಷ್ಠಿಗಳಲ್ಲೂ ಹೇಳಿರದೆ ಇರಲಾರರು. ಅದರ ಅಂತ್ಯ ಪ್ರಾಸ ಓದುಗರ ಕಲ್ಪನೆಗೆ ಬಿಟ್ಟ ವಿಷಯ. ಅದನ್ನಿಲ್ಲಿ ಹೇಳುತ್ತಾ ನಾಡಿಗರನ್ನು ನಾನು ತುಂಬಾ ಆತ್ಮೀಯತೆಯಿಂದ ಜ್ಞಾಪಿಸಿ ಕೊಳ್ಳುತ್ತಿದ್ದೇನೆ.

‘‘ಕಂಬಾರ ಬರಿತಾನ ನಾಟಕ ಅದು ಸಮಾನ ನನ್ನ.....’’
 ಈ ಸಾಲುಗಳನ್ನು ಅವರಿಂದ ಕೇಳಿಸಿ ಕೊಂಡಿರುವವರಿಗೆ ಅವರ ಕಾವ್ಯಾತ್ಮಕ ತುಂಟತನ, ಅವರ ರಸಿಕತೆಯ ಕಾವ್ಯ ಪ್ರಜ್ಞೆ, ಅವರ ಹಾಸ್ಯದ ಲಯ ಮತ್ತು ಸಹಜೀವಿ ಕವಿಗಳನ್ನು ಕಿಚಾಯಿಸುವ ಕವಿ ಸಹಜ ಪ್ರವೃತ್ತಿಯ ಪರಿಚಯವಿರದಿರಲಾರದು.
‘‘ನ ಸ್ವರ್ಗೋ ನ ರಸಾತಲಂ’’ (ಸ್ವರ್ಗವೂ ಇಲ್ಲ ನರಕವೂ ಇಲ್ಲ) ಎಂದವ ಯಾವ ಅರ್ಥದಲ್ಲಿ ಹಾಗೆ ಹೇಳಿದನೋ. ನಾಡಿಗರಂತೂ ಕಾವ್ಯ ಸ್ವರ್ಗದಲ್ಲಿ ವಿಹರಿಸಿ ಕಾವ್ಯವನ್ನೇ ಬದುಕಿ ಬಾಳಿದವರು. ಅವರ ನೆನಪಿಗೆ ಇದು ನನ್ನ ಶ್ರದ್ಧಾಂಜಲಿ.

(bhaskarrao599@gmail.com)
             

Writer - ಡಾ. ಬಿ. ಭಾಸ್ಕರ ರಾವ್

contributor

Editor - ಡಾ. ಬಿ. ಭಾಸ್ಕರ ರಾವ್

contributor

Similar News