ತಪ್ಪು ಇಂಜೆಕ್ಷನ್ ನೀಡಿದ ಭದ್ರತಾ ಸಿಬ್ಬಂದಿ: ವೃದ್ಧೆ ಸಾವು

Update: 2018-08-21 03:43 GMT

ರಾಂಚಿ, ಆ. 21: ಭದ್ರತಾ ಸಿಬ್ಬಂದಿ ತಪ್ಪು ಇಂಜೆಕ್ಷನ್ ನೀಡಿದ ಪರಿಣಾಮ 70ರ ವೃದ್ಧೆ ಮೃತಪಟ್ಟಿರುವ ಘಟನೆ ಇಲ್ಲಿನ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ರಿಮ್ಸ್)ನಲ್ಲಿ ನಡೆದಿದೆ.

ಜ್ವರ ಮತ್ತು ಮಧುಮೇಹದಿಂದ ಬಳಲುತ್ತಿದ್ದ ಕಮಲಾದೇವಿ ಎಂಬಾಕೆಯನ್ನು ರಿಮ್ಸ್ ಆಸ್ಪತ್ರೆಗೆ ಕಳೆದ ಮಂಗಳವಾರ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಪ್ರವೀಣ್ ಓಝಾ ಎಂಬಾತ ಚುಚ್ಚುಮದ್ದು ನೀಡುತ್ತಿದ್ದ ಎಂದು ಕುಟುಂಬಸ್ಥರು ಆಪಾದಿಸಿದ್ದಾರೆ. ಭದ್ರತಾ ಸಿಬ್ಬಂದಿ ಇಂಜೆಕ್ಷನ್ ನೀಡುತ್ತಿದ್ದ ಬಗ್ಗೆ ಆಕ್ಷೇಪಿಸಿದರೂ, ಯಾವ ವೈದ್ಯರೂ ಕಿವಿಗೆ ಹಾಕಿಕೊಳ್ಳಲಿಲ್ಲ ಎನ್ನುವುದು ಕುಟುಂಬದವರ ಆರೋಪ. ರವಿವಾರ ಭದ್ರತಾ ಸಿಬ್ಬಂದಿ ತಪ್ಪಾಗಿ ಬೇರೆ ಇಂಜೆಕ್ಷನ್ ನೀಡಿದ್ದರಿಂದ ಮಹಿಳೆ ಮೃತಪಟ್ಟಿದ್ದಾರೆ ಎಂದು ದೂರಲಾಗಿದೆ.

ತಕ್ಷಣ ಭದ್ರತಾ ಸಿಬ್ಬಂದಿಯನ್ನು ವಜಾಗೊಳಿಸುವಂತೆ ರಿಮ್ಸ್ ಆಡಳಿತ ಆದೇಶಿಸಿದೆ. ಘಟನೆ ಬಗ್ಗೆ ತನಿಖೆ ನಡೆಸಲು ನಾಲ್ಕು ಮಂದಿ ಸದಸ್ಯರ ಸಮಿತಿ ರಚಿಸಲಾಗಿದೆ. "ವೈದ್ಯಕೀಯ ಅಧೀಕ್ಷಕ ಡಾ.ವಿವೇಕ್ ಕಶ್ಯಪ್ ನೇತೃತ್ವದ ಸಮಿತಿ 24 ಗಂಟೆಗಳ ಒಳಗಾಗಿ ವರದಿ ನೀಡಲಿದ್ದು, ಅದರ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ರಿಮ್ಸ್ ನಿರ್ದೇಶಕ ಡಾ. ಆರ್.ಕೆ.ಶ್ರೀವಾಸ್ತವ ಹೇಳಿದ್ದಾರೆ. ಕ್ರಮ ಕೈಗೊಂಡ ಬಗ್ಗೆ ವರದಿ ಸಲ್ಲಿಸುವಂತೆ ಗುತ್ತಿಗೆ ಆಧಾರದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ ಸಂಸ್ಥೆಗೆ ಸೂಚಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಆ ಘಟಕದ ಉಸ್ತುವಾರಿ ಹೊಂದಿದ್ದ ಲತಾ ಕುಮಾರಿ ಎಂಬ ನರ್ಸ್‌ಗೆ ಕೂಡಾ ಷೋಕಾಸ್ ನೋಟಿಸ್ ನೀಡಲಾಗಿದೆ. ಘಟನೆಯಿಂದ ಉದ್ರಿಕ್ತರಾದ ವೃದ್ಧೆಯ ಸಂಬಂಧಿಕರು ರಿಮ್ಸ್‌ಗೆ ನುಗ್ಗಿ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News