ರಾಜ್ಯ ಸಭಾ ಚುನಾವಣೆಯಲ್ಲಿ ನೋಟಾ ಬಳಕೆಗೆ ಅವಕಾಶ ಇಲ್ಲ: ಸುಪ್ರೀಂ ಕೋರ್ಟ್

Update: 2018-08-21 07:30 GMT

ಹೊಸದಿಲ್ಲಿ, ಆ.21: ರಾಜ್ಯಸಭಾ ಚುನಾವಣೆಯಲ್ಲಿ ನೋಟಾ ಬಳಕೆಗೆ ಚುನಾವಣಾ ಆಯೋಗ ಅವಕಾಶ ನೀಡಿರುವುದನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

ಗುಜರಾತ್ ನಲ್ಲಿ ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿ ಚುನಾವಣಾ ಆಯೋಗ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಗುಜರಾತ್ ವಿಧಾನಸಭೆಯ ಮುಖ್ಯ ಸಚೇತಕ ಶೈಲೇಶ್ ಮನುಭಾಯ್ ಪಾರ್ಮರ್  ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ , ನ್ಯಾಯಮೂರ್ತಿ  ಎ.ಎಂ.ಖಾನ್ವಿಲ್ಕರ್ ಮತ್ತು ನ್ಯಾಯಮೂರ್ತಿ ಡಿ.ವೈ ಚಂದ್ರಾಚೂಡ್ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ರಾಜ್ಯಸಭೆ ಚುನಾವಣೆಯಲ್ಲಿ ನೋಟಾಕ್ಕೆ ಅವಕಾಶ ನೀಡಿದರೆ ರಾಜ್ಯಗಳ ಪ್ರಾತಿನಿಧ್ಯಕ್ಕೆ ಧಕ್ಕೆ ಉಂಟಾಗಲು ಅವಕಾಶ ನೀಡಿದಂತಾಗುತ್ತದೆ. ಈ ಕಾರಣದಿಂದಾಗಿ ರಾಜ್ಯಸಭೆಯಲ್ಲಿ  ನೋಟಾ ಚಲಾವಣೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಲೋಕಸಭಾ ಚುನಾವಣೆಯಲ್ಲಿ ನೋಟಾ ವೋಟು ಚಲಾವಣೆಗೆ ಸುಪ್ರಿಂ ಕೋರ್ಟ್  2013ರಲ್ಲಿ ಅವಕಾಶ ನೀಡಿತ್ತು. 2014ರಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ  ನೋಟಾ ಮತ ಚಲಾವಣೆಗೆ ಚುನಾವಣಾ ಆಯೋಗ ಅವಕಾಶ ನೀಡಿತ್ತು.  ಆದರೆ ಕಾಂಗ್ರೆಸ್ ಗುಜರಾತ್ ನಲ್ಲಿ ಕಳೆದ ವರ್ಷ ರಾಜ್ಯಸಭಾ ಚುನಾವಣೆಯ ವೇಳೆ ನೋಟಾ ಬಳಕೆಯನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟ್ ಮೊರೆ ಹೋಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News