ಚೊಚ್ಚಲ ಹೆರಿಗೆಗಾಗಿ ಸೈಕಲ್ ನಲ್ಲಿ ಆಸ್ಪತ್ರೆಗೆ ತೆರಳಿದ ಸಚಿವೆ !

Update: 2018-08-21 10:41 GMT

ವೆಲ್ಲಿಂಗ್ಟನ್, ಆ. 21: ತಮ್ಮ ಚೊಚ್ಚಲ ಹೆರಿಗೆಗಾಗಿ ನ್ಯೂಝಿಲೆಂಡ್ ದೇಶದ ಮಹಿಳಾ ಖಾತೆಯ ಸಚಿವೆ ಜೂಲಿ ಆನ್ನೆ ಜೆಂಟರ್ ಅವರು ಸೈಕಲ್ ತುಳಿದುಕೊಂಡೇ ಆಸ್ಪತ್ರೆ ತಲುಪಿದ್ದಾರೆ.

ಪರಿಸರ ಪ್ರೇಮಿ ಹಾಗೂ ಸೈಕ್ಲಿಂಗ್ ನಲ್ಲಿ ಅತೀವ ಆಸಕ್ತಿ ಹೊಂದಿರುವ ಜೂಲಿ ರವಿವಾರ ತಮ್ಮ ನಿವಾಸದಿಂದ ಒಂದು ಕಿಮೀ ದೂರವಿರುವ ಆಕ್ಲೆಂಡ್ ಸಿಟಿ ಹಾಸ್ಪಿಟಲ್ ಗೆ ಸೈಕನ್ ಲ್ಲಿಯೇ ಪ್ರಯಾಣಿಸಲು ನಿರ್ಧರಿಸಿದ್ದರು.

‘‘ನಮ್ಮ ಕಾರಿನಲ್ಲಿ ನಮ್ಮ ಸಹಾಯಕರಿಗೆಲ್ಲಾ ಸ್ಥಳವಿಲ್ಲದೇ ಇದ್ದುದರಿಂದ ನಾನು ಮತ್ತು ನನ್ನ ಸಂಗಾತಿ ಸೈಕಲ್ ನಲ್ಲಿಯೇ ಆಸ್ಪತ್ರೆಗೆ ತೆರಳಲು ನಿರ್ಧರಿಸಿದೆವು. ಇದು ನನ್ನನ್ನು ಉತ್ತಮ ಮೂಡ್ ನಲ್ಲಿರುವಂತೆ ಮಾಡಿದೆ’’ ಎಂದು ತಮ್ಮ ಚಿತ್ರದೊಂದಿಗೆ ಜೂಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಆಕೆಯ ಈ ಸೈಕ್ಲಿಂಗ್ ಸಾಹಸವನ್ನು ಆಕೆಯ ಸಹೋದ್ಯೋಗಿಗಳೆಲ್ಲರೂ ಪ್ರಶಂಸಿಸಿದ್ದಾರೆ. ಆಕೆ ನ್ಯೂಝಿಲೆಂಡ್ ಸರಕಾರದಲ್ಲಿ ಮಹಿಳಾ ಖಾತೆಯಲ್ಲದೆ ಸಾರಿಗೆ ಖಾತೆಯ ಸಹಾಯಕ ಸಚಿವೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ನ್ಯೂಝಿಲೆಂಡ್ ಪ್ರಧಾನಿ ಜೆಸಿಂಡಾ ಆರ್ಡೆರ್ನ್ ಜೂನ್ ತಿಂಗಳಲ್ಲಿ ತಮ್ಮ ಚೊಚ್ಚಲ ಹೆರಿಗೆಯ ನಂತರ ಮತ್ತೆ ಕರ್ತವ್ಯ ವಹಿಸಿದ ಕೆಲವೇ ದಿನಗಳಲ್ಲಿ ಜೂಲಿ ಹೆರಿಗೆ ರಜೆಯ ಮೇಲೆ ತೆರಳಿದ್ದಾರೆ. ಪಾಕಿಸ್ತಾದ ಬೇನಝೀರ್ ಭುಟ್ಟೋ ನಂತರ ಅಧಿಕಾರದಲ್ಲಿರುವಾಗಲೇ ಮಗುವಿಗೆ ಜನ್ಮ ನೀಡಿದ ವಿಶ್ವದ ಎರಡನೇ ರಾಷ್ಟ್ರ ನಾಯಕಿಯಾಗಿದ್ದಾರೆ ಜೆಸಿಂಡಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News