ಕೇರಳ ಪ್ರವಾಹ: ಕೇಡು ಬಗೆಯುವ ಎಂಟು ಸುಳ್ಳುಸುದ್ದಿಗಳು

Update: 2018-08-22 14:07 GMT

ಕೇರಳ ನೆರೆ ಬಗ್ಗೆ ಸಮಾಜ ಮಾಧ್ಯಮಗಳಲ್ಲಿ ದುರುದ್ದೇಶಪೂರ್ವಕ ಸುಳ್ಳುಸುದ್ದಿಗಳು, ವದಂತಿಗಳು ಪ್ರವಾಹದೋಪಾದಿಯಲ್ಲಿ ಹರಿದಾಡುತ್ತಿವೆ. ಇದು ಪರಿಹಾರ ಮತ್ತು ಪುನರ್ವಸತಿ ಕಾರ್ಯಾಚರಣೆಗಳಿಗೆ ಭಾರಿ ಹಾನಿಯುಂಟು ಮಾಡುತ್ತಿವೆ. ಈ ಸಂದೇಶಗಳ ಹಿಂದಿರುವ ವ್ಯಕ್ತಿಗಳು ಮತ್ತು ಅದನ್ನು ಪಸರಿಸುವ ವ್ಯಕ್ತಿಗಳು ತಿಳಿದೋ, ತಿಳಿಯದೆಯೋ, ಇತರ ರಾಜ್ಯಗಳ ಜನ ಸಹಾಯಹಸ್ತ ಚಾಚುವುದನ್ನು ತಡೆಯುತ್ತಿದ್ದಾರೆ. ಪರಿಣಾಮವಾಗಿ, ಹಿಂದೆ ಸಹಾಯ ಮಾಡುವ ಇಂಗಿತ ವ್ಯಕ್ತಪಡಿಸಿದ ಹಲವು ಮಂದಿ ಪರಿಹಾರ ಕಾರ್ಯಗಳಿಗೆ ದೇಣಿಗೆ ನೀಡಲು ಹಿಂದೇಟು ಹಾಕುತ್ತಿದ್ದಾರೆ.

ಈ ಸುಳ್ಳು ಪ್ರತಿಪಾದನೆಗಳಿಗೆ ಉತ್ತರ ನೀಡುವ ಮೂಲಕ, ದೇಶದ ಸಹ ಪ್ರಜೆಗಳ ಮನಸ್ಸಿನಲ್ಲಿ ಮೂಡಿರುವ ಅನುಮಾನಗಳನ್ನು ತೊಡೆದು ಹಾಕುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಿದೆ.

‘ಸಂತ್ರಸ್ತರಲ್ಲಿ ಬಹುತೇಕ ಮಂದಿ ಶ್ರೀಮಂತ, ಮಧ್ಯಮ ವರ್ಗದ ಕುಟುಂಬಗಳು ಹಾಗೂ ನೆರವು ನೀಡುವ ಅಗತ್ಯವಿಲ್ಲ’

ಈ ಪ್ರತಿಪಾದನೆಗೆ ಯಾವುದೇ ಅಂಕಿ ಅಂಶಗಳ ಹಿನ್ನೆಲೆ ಇಲ್ಲ. ಆಗಸ್ಟ್ 20ರಂದು ಸರ್ಕಾರ ನೀಡಿದ ಪತ್ರಿಕಾ ವಿವರಣೆಯಲ್ಲಿ ಹೇಳಿದಂತೆ 10 ಲಕ್ಷಕ್ಕೂ ಅಧಿಕ ಮಂದಿ 5000ಕ್ಕೂ ಹೆಚ್ಚು ಶಿಬಿರಗಳಿಗೆ ಕಳೆದ ಕೆಲ ದಿನಗಳಲ್ಲಿ ಬಂದಿದ್ದಾರೆ. ಕುಟ್ಟಂಡ್‌ನಂಥ ಪ್ರದೇಶಗಳಲ್ಲಿ ಶೇ.97ಕ್ಕಿಂತಲೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ. ಸರಿಸುಮಾರು ಒಟ್ಟೊಟ್ಟಿಗೆ ರಾಜ್ಯದ 14 ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಏರುತ್ತಿರುವ ಪ್ರವಾಹಕ್ಕೆ ಬಡವರು, ಶ್ರೀಮಂತರು ಎಂಬ ಭೇದವಿಲ್ಲ. ಬಹುಶಃ ಶ್ರೀಮಂತರು ಸುರಕ್ಷಿತ ಸ್ಥಳಗಳಲ್ಲಿರುವ ತಮ್ಮ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದರೆ, ಬಡವರಿಗೆ ಸರ್ಕಾರ ವ್ಯವಸ್ಥೆಗೊಳಿಸಿದ ಪರಿಹಾರ ಶಿಬಿರಗಳು ಸೂರು ಒದಗಿಸಿವೆ.

ಕೇಂದ್ರ ಸರ್ಕಾರದ 2011ರ ಸಾಮಾಜಿಕ- ಆರ್ಥಿಕ ಮತ್ತು ಜಾತಿಗಣತಿ, ಕೇರಳ ಕುಟುಂಬಗಳ ಆರ್ಥಿಕ ಸ್ಥಿತಿಗತಿಯ ಚಿತ್ರವಣವನ್ನು ತೆರೆದಿಟ್ಟಿದೆ. ರಾಜ್ಯದ ಸುಮಾರು ಶೇಕಡ 71ರಷ್ಟು ಗ್ರಾಮೀಣ ಕುಟುಂಬಗಳಿಗೆ, ಕುಟುಂಬದ ಆಧಾರಸ್ತಂಭವಾಗಿರುವವರು ಮಾಸಿಕ 5000 ರೂಪಾಯಿಗಿಂತ ಕಡಿಮೆ ಆದಾಯ ತಂದುಕೊಡುತ್ತಿದ್ದಾರೆ. ರಾಜ್ಯದ ಜಿಲ್ಲೆಗಳ ಪೈಕಿ, ವಯನಾಡಿನಲ್ಲಿ ಈ ಪ್ರಮಾಣ ಗರಿಷ್ಠ ಅಂದರೆ ಶೇಕಡ 79.67 ರಷ್ಟಿದೆ. ಮಲಪ್ಪುರಂ (75.55) ಮತ್ತು ಪಾಲಕ್ಕಾಡ್ (74.38) ನಂತರದ ಸ್ಥಾನಗಳಲ್ಲಿವೆ. ಇವು ಮೂರು ಪ್ರವಾಹದಿಂದ ಗರಿಷ್ಠ ಹಾನಿಗೀಡಾಗಿರುವ ಜಿಲ್ಲೆಗಳು.

ಚೆಂಗನೂರಿನ ಶೇಕಡ 66ರಷ್ಟು ಕುಟುಂಬಗಳಿಗೆ ಪ್ರಮುಖ ಆದಾಯ ಗಳಿಸುವ ವ್ಯಕ್ತಿಯ ಗರಿಷ್ಠ ಮಾಸಿಕ ಆದಾಯ 5000 ರೂಪಾಯಿ ಅಥವಾ ಅದಕ್ಕಿಂತಲೂ ಕಡಿಮೆ. ರನ್ನ ಜಿಲ್ಲೆಯಲ್ಲಿ ಈ ಪ್ರಮಾಣ ಶೇಕಡ 67.12, ಮೀನಚಿಲ ತಾಲೂಕಿನಲ್ಲಿ (ಪಾಳ) ಇದು ಶೇಕಡ 64.82 ಮತ್ತು ಅಲೆಪ್ಪಿಜಿಲ್ಲೆಯಲ್ಲಿ ಇದು ಶೇಕಡ 69.14.

ಈ ಅಂಕಿ ಅಂಶಗಳ ಮೇಲೆ ಕಣ್ಣು ಹಾಯಿಸಿದಾಗ, ಬಹುತೇಕ ಜನ ಶ್ರೀಮಂತರಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಈ ಎಲ್ಲರಿಗೂ ಯಾವುದೇ ಅಥವಾ ಅವರು ಪಡೆಯಬಹುದಾದ ಎಲ್ಲ ನೆರವಿನ ಅಗತ್ಯವೂ ಇದೆ.

'ಕೇರಳಕ್ಕೆ ಹಣ ಬೇಕಾಗಿಲ್ಲ'

ಆರಂಭಿಕ ನಷ್ಟದ ಅಂದಾಜಿನಂತೆ ರಾಜ್ಯದಲ್ಲಿ ಪ್ರವಾಹದಿಂದಾದ ಹಾನಿ ಸುಮಾರು 20000 ಕೋಟಿ ರೂಪಾಯಿ. ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ದೇಣಿಗೆ ರೂಪದಲ್ಲಿ ಸಂದಾಯವಾದ ಹಣವನ್ನು ಕೇವಲ ಪರಿಹಾರ ಶಿಬಿರಗಳಲ್ಲಿರುವ ಸಂತ್ರಸ್ತರಿಗೆ ಆಹಾರಧಾನ್ಯಗಳನ್ನು ಖರೀದಿಸಲು ವೆಚ್ಚ ಮಾಡುವುದು ಮಾತ್ರವಲ್ಲದೇ, ರಾಜ್ಯದ ಮೂಲಸೌಕರ್ಯವನ್ನು ಯಥಾಸ್ಥಿತಿಗೆ ತರಲು ಕೂಡಾ ವೆಚ್ಚ ಮಾಡಬೇಕಾಗುತ್ತದೆ. ಕೃಷಿ, ಕೈಗಾರಿಕೆ ಮತ್ತು ಮೂಲಸೌಕರ್ಯ ವಲಯಗಳಿಗೆ ಪ್ರವಾಹದಿಂದಾಗಿ ಭಾರಿ ಹಾಯಾಗಿದೆ. ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ನೀಡುವ ದೇಣಿಗೆಯನ್ನು ಪ್ರವಾಹದ ನೀರು ಇಳಿದ ಬಳಿಕ ಈ ವಲಯಗಳ ಪುನರ್ ನಿರ್ಮಾಣ ಮತ್ತು ಪುನರುತ್ಥಾನಕ್ಕೆ ಬಳಸಲಾಗುತ್ತದೆ.

ಪರಿಸ್ಥಿತಿಯ ತೀವ್ರತೆಯನ್ನು ಅರ್ಥ ಮಾಡಿಕೊಂಡು ಭಾರತ ಸರ್ಕಾರ, ಕೇಂದ್ರೀಯ ನೆರವನ್ನು 100 ಕೋಟಿ ರೂಪಾಯಿಗಳಿಂದ 600 ಕೋಟಿ ರೂಪಾಯಿಗೆ ಹೆಚ್ಚಿಸಿದೆ. ಬಹಳಷ್ಟು ರಾಜ್ಯ ಸರ್ಕಾರಗಳು ಕೂಡಾ ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ನೆರವು ನೀಡುತ್ತಿವೆ. ಇದು ಹಾಯ ಅಗಾಧತೆಯ ಸೂಛಕ. ಕೇರಳಕ್ಕೆ ಖಂಡಿತವಾಗಿಯೂ ನೆರವಿನ ಅಗತ್ಯವಿದೆ.

'ಈಗಾಗಲೇ ಕಳುಹಿಸಿದ ವಸ್ತುಗಳು ನಿರುಪಯುಕ್ತವಾಗಿ ರಾಶಿ ಬಿದ್ದಿವೆ'

ಸ್ವಯಂಸೇವಾ ಸಂಸ್ಥೆಗಳ ವಿಶೇಷ ಪ್ರಯತ್ನಗಳಿಂದಾಗಿ, ದೇಶದ ಎಲ್ಲೆಡೆಗಳಿಂದ ಪರಿಹಾರ ಸಾಮಗ್ರಿಗಳು ಹರಿದು ಬರಲಾರಂಭಿಸಿವೆ. ಇವುಗಳನ್ನು ಜಿಲ್ಲಾ ಕೇಂದ್ರಗಳಲ್ಲಿರುವ ಸಂಗ್ರಹ ಕೇಂದ್ರಗಳಲ್ಲಿ ದಾಸ್ತಾನು ಮಾಡಿ, ಪರಿಹಾರ ಶಿಬಿರಗಳಿಗೆ ಮತ್ತು ಸಂಕಷ್ಟಕ್ಕೀಡಾದ ಜನತೆಯ ಮನೆಗಳಿಗೆ ಕಳುಹಿಸಲಾಗುತ್ತಿದೆ. ಇಂಥ ಸಂಗ್ರಹ ಕೇಂದ್ರಗಳನ್ನು ಸರ್ಕಾರಿ ವ್ಯವಸ್ಥೆಯೇ ನಿರ್ವಹಿಸುತ್ತಿದ್ದು, ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲೇ ನಡೆಯುತ್ತಿದೆ. ಸರಕುಗಳು ನಿಧಾನವಾಗಿ ಬರಲಾರಂಭಿಸಿದ್ದು, ಸಂಗ್ರಹ ಕೇಂದ್ರಗಳಲ್ಲಿ ದಾಸ್ತಾನು ಹೆಚ್ಚುತ್ತಿದೆ. ಇದನ್ನು ವಸ್ತುಗಳು ರಾಶಿಬಿದ್ದಿದ್ದು, ಕೊಳ್ಳುವವರೇ ಇಲ್ಲ ಎಂದು ಬಿಂಬಿಸುವುದು ಸರಿಯಲ್ಲ.

ಆಹಾರ ಮತ್ತು ಔಷಧವಷ್ಟೇ ಬೇಕು; ಅದು ಸಾಕಷ್ಟು ದಾಸ್ತಾನು ಇದೆ

ಪರಿಹಾರ ಶಿಬಿರಗಳಲ್ಲಿರುವ ಜನಕ್ಕೆ ಆಹಾರ, ಕುಡಿಯುವ ನೀರು, ನೈರ್ಮಲ್ಯ ಸೌಲಭ್ಯ, ಔಷಧಿ, ಹೊದಿಕೆ, ಉಡುಪು, ಒಳ ಉಡುಪು, ಸ್ಯಾಟರಿ ನ್ಯಾಪ್ಕಿನ್, ಶಿಶು ಆಹಾರ, ಮಕ್ಕಳ ಬಟ್ಟೆ ಬರೆ ಮತ್ತಿತರ ಎಲ್ಲ ಅಗತ್ಯ ಸಾಮಗ್ರಿಗಳ ಅಗತ್ಯವೂ ಇದೆ. ಜನ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಎಲ್ಲವನ್ನೂ ಬಿಟ್ಟು ಉಟ್ಟಬಟ್ಟೆಯಲ್ಲಿ ಓಡುವಂಥ ಸ್ಥಿತಿಯನ್ನು ಪ್ರವಾಹ ತಂದೊಡ್ಡಿದೆ. ಕೊರತೆ ಇರುವ ವಸ್ತುಗಳ ಬಗ್ಗೆ ಪರಿಹಾರ ಶಿಬಿರಗಳು ಸಂಗ್ರಹ ಕೇಂದ್ರಕ್ಕೆ ಮಾಹಿತಿ ನೀಡುತ್ತಿವೆ. ಕಾಲಕಾಲಕ್ಕೆ ಅಗತ್ಯ ವಸ್ತುಗಳನ್ನು ಒದಗಿಸುವುದು ತೀರಾ ಮುಖ್ಯ. ಈ ಮೂಲಕ ಶಿಬಿರಗಳಲ್ಲಿ ಮತ್ತಷ್ಟು ಅಧ್ವಾನವಾಗದಂತೆ ನೋಡಿಕೊಳ್ಳುವುದು ಅಗತ್ಯ. ಸ್ವಯಂಸೇವಕರು ಮತ್ತು ಸಂಘ ಸಂಸ್ಥೆಗಳ ಅವಿರತ ಶ್ರಮದ ಹೊರತಾಗಿಯೂ, ಹಲವು ಪರಿಹಾರ ಶಿಬಿರಗಳಲ್ಲಿ ಆಹಾರ, ಕುಡಿಯುವ ನೀರು, ನೈರ್ಮಲ್ಯ ವ್ಯವಸ್ಥೆ, ಔಷಧ, ಹೊದಿಕೆ ಮತ್ತು ಉಡುಪು ಸಾಮಗ್ರಿಗಳ ಕೊರತೆ ಇದೆ. ಈ ಪೂರೈಕೆಯನ್ನು ಹೆಚ್ಚಿಸಬೇಕಾದ ಅಗತ್ಯವಿದೆ.

'ಸ್ವಯಂಸೇವಾ ಸಂಸ್ಥೆಗಳಿಗೆ ದೇಣಿಗೆ ನೀಡಿ; ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ಬೇಡ'

ಕೇರಳ ಸರ್ಕಾರ ಜನರಿಗೆ ನೆರವಾಗುತ್ತಿಲ್ಲ ಎಂಬ ದುರುದ್ದೇಶಪೂರಿತ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಪ್ರವಾಹದಿಂದ ಹಾಗೀಡಾಗಿರುವ ಸಂತ್ರಸ್ತರ ಪುನರ್ವಸತಿಗೆ ಹಲವು ಸ್ವಯಂಸೇವಾ ಸಂಸ್ಥೆಗಳು ಶ್ಲಾಘನೀಯ ಕಾರ್ಯ ಮಾಡುತ್ತಿದ್ದರೂ, ಈ ಪ್ರಯತ್ನಗಳಲ್ಲಿ ಸರ್ಕಾರ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವುದು ತಪ್ಪು. ಕೇಂದ್ರ ಸರ್ಕಾರ, ಸಶಸ್ತ್ರ ಪಡೆಗಳು ಮತ್ತು ಎನ್‌ಡಿಆರ್‌ಎಫ್ ನೆರವಿನೊಂದಿಗೆ ಸರ್ಕಾರದ ವತಿಯಿಂದ ಪರಿಹಾರ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ.

ಕೇರಳದಾದ್ಯಂತ ಪರಿಹಾರ ಕಾರ್ಯಾಚರಣೆಯಲ್ಲಿ ಯಾವುದೇ ಅಧಿಕೃತ ಸಂಘ ಸಂಸ್ಥೆಗಳ ಹೆಸರಿಲ್ಲದೇ ಮೀನುಗಾರರು ರ್ವಹಿಸಿದ ಪಾತ್ರದ ಬಗ್ಗೆ ಹೃದಯಂಗಮ ವರದಿಗಳು ಬರುತ್ತಿವೆ. ಈ ಮೀನುಗಾರರು ತಮ್ಮ ದೋಣಿಗಳನ್ನು ತೊಂದರೆಗೀಡಾದ ಸ್ಥಳಗಳಿಗೆ ಒಯ್ದು, ಪರಿಹಾರ ಪಡೆಗಳನ್ನು ಯೋಜಿಸುವ ಮುನ್ನವೇ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

'ಎಲ್ಲ ರಸ್ತೆಗಳು ಮುಚ್ಚಿವೆ, ದೇಣಿಗೆ ಸಂತ್ರಸ್ತರಿಗೆ ತಲುಪದು'

ಸಂಗ್ರಹ ಕೇಂದ್ರಗಳಿಗೆ ಪರಿಹಾರ ಸಾಮಗ್ರಿಗಳನ್ನು ಒಯ್ಯಲು ಸೇನಾ ಟ್ರಕ್ ಮತ್ತು ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತಿದೆ. ಇದಲ್ಲದೇ ಪ್ರವಾಹದಿಂದ ಕೆಲ ರಸ್ತೆಗಳು ಬ್ಲಾಕ್ ಆಗಿದ್ದರೂ, ರಸ್ತೆ ಮತ್ತು ರೈಲು ಸಂಚಾರ ಬಹುತೇಕ ಯಥಾಸ್ಥಿತಿಗೆ ಮರಳಿದೆ. ಪರಿಹಾರ ಸಾಮಗ್ರಿಗಳನ್ನು ತೊಂದರೆಗೀಡಾದ ಪ್ರದೇಶಗಳಿಗೆ ಒಯ್ಯಲಾಗುತ್ತಿದ್ದು, ಇವು ಗಮ್ಯಸ್ಥಾನಕ್ಕೆ ಸೂಕ್ತವಾಗಿ ತಲುಪುವಂತೆ ಮಾಡುವಲ್ಲಿ ಜಿಲ್ಲಾಡಳಿತ ಸಕ್ರಿಯವಾಗಿ ತೊಡಗಿಸಿಕೊಂಡಿದೆ.

'ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ನೆರವಾಗಬೇಡಿ, ಅದು ದುರ್ಬಳಕೆಯಾಗುತ್ತದೆ'

ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಯನ್ನು ಕೇರಳದ ಹಣಕಾಸು ಕಾರ್ಯದರ್ಶಿ ನಿರ್ವಹಿಸುತ್ತಾರೆ. ರಾಜ್ಯ ಕಂದಾಯ ಇಲಾಖೆ ಮೇಲ್ವಿಚಾರಣೆ ವಹಿಸುತ್ತದೆ. ಕಂದಾಯ ಕಾರ್ಯದರ್ಶಿ ಹೊರಡಿಸುವ ಸರ್ಕಾರಿ ಆದೇಶಗಳಿಗೆ ಅನುಗುಣವಾಗಿ ಮಾತ್ರ ಈ ನಿಧಿಯನ್ನು ಹಣಕಾಸು ಕಾರ್ಯದರ್ಶಿ ಬಳಸಬಹುದಾಗಿದೆ. ಈ ಇಡೀ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿದ್ದು, ಇದರ ವಿವರಗಳು ಆನ್‌ಲೈನ್‌ನಲ್ಲಿ ಲಭ್ಯ. ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಯು ಮಾಹಿತಿ ಹಕ್ಕು ಕಾಯ್ದೆಯಡಿ ಬರುವುದರಿಂದ, ನಿಧಿ ಬಳಕೆ ಬಗ್ಗೆ ಸಾರ್ವಜಕರು ಮಾಹಿತಿಗಳನ್ನು ಪಡೆಯಲು ಅವಕಾಶವಿದೆ. ಇದು ಸಂಪೂರ್ಣ ಪಾರದರ್ಶಕ.

ದೇಶಾದ್ಯಂತ ಹಲವು ಸರ್ಕಾರಗಳು, ಪಕ್ಷಭೇದ ಮರೆತು ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ಸಾರ್ವಜಕರು ದೇಣಿಗೆ ನೀಡುವಂತೆ ಕೋರುತ್ತಿರುವುದು, ನಿಧಿಯ ಅಧಿಕೃತತೆಯ ಸೂಚಕ. ಇದನ್ನು ಮುಖ್ಯಮಂತ್ರಿ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಬೇಕು ಬೇಡಗಳಿಗೆ ಅನುಗುಣವಾಗಿ ಬಳಸುವಂತಿಲ್ಲ.

'ಪರಿಹಾರ ಕಾರ್ಯಾಚರಣೆ ಹೆಸರಲ್ಲಿ ಹಗರಣ'

ಇಂಥ ವಿಕೋಪ ಪರಿಸ್ಥಿತಿಯಲ್ಲೂ ದುರ್ಲಾಭ ಪಡೆಯುವ ಕೆಲ ನಿರ್ಲಜ್ಜ ಕೀಟಗಳಿರಬಹುದು. ಆದರೆ ಬಹುತೇಕ ಸಂಘ ಸಂಸ್ಥೆಗಳಿಗೆ ಇದು ಅನ್ವಯಿಸುವುದಿಲ್ಲ. ಇದಕ್ಕಾಗಿಯೇ ದೇಣಿಗೆ ನೀಡುವ ಮುನ್ನ ಆಯಾ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ನಿರ್ಧರಿಸುವುದು ಸೂಕ್ತ. ಸಂತ್ರಸ್ತರಿಗೆ ನೇರವಾಗಿ ತಲುಪುವ ಉದ್ದೇಶದಿಂದ ಹಣಕಾಸು ದೇಣಿಗೆ ನೀಡುವ ಒಂದು ಪಾರದರ್ಶಕ ಮಾರ್ಗವೆಂದರೆ, ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ನೇರವಾಗಿ ದೇಣಿಗೆ ನೀಡುವುದು (ಖಾತೆ ಸಂಖ್ಯೆ: 67319948232. ಖಾತೆ ಹೆಸರು: ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿ. ಐಎಫ್‌ಎಸ್‌ಸಿ: ಎಸ್‌ಬಿಐಎನ್0070028). ಮೇಲೆ ಹೇಳಿದಂತೆ ಇದನ್ನು ಸಾರ್ವಜಕವಾಗಿ ಪರಿಶೋಧಿಸಲಾಗುತ್ತದೆ ಹಾಗೂ ಇದು ಪಾರದರ್ಶಕ ನಿಧಿ.

ವಸ್ತು ರೂಪದಲ್ಲಿ ಕೊಡುಗೆ ನೀಡಲು ಬಯಸುವ ವ್ಯಕ್ತಿಗಳು, ಸಂಸ್ಥೆಗಳ ಹಿನ್ನೆಲೆಯನ್ನು ಪರಿಶೀಲಿಸುವ ಮೂಲಕ ಇವು ಜನರಿಗೆ ತಲುಪುತ್ತದೆ ಎಂದು ಖಾತ್ರಿಪಡಿಸಿಕೊಳ್ಳುವುದು ಸೂಕ್ತ. ವಿವಿಧ ಜಿಲ್ಲಾಧಿಕಾರಿಗಳು ನಿರ್ವಹಿಸುವ ಫೇಸ್‌ಬುಕ್‌ ಪುಟಗಳು, ದೃಢೀಕೃತ ಮಾಹಿತಿಯ ಒಳ್ಳೆಯ ಮೂಲಗಳು. ಕೆಲವೊಂದು ವಸ್ತುಗಳು ನಿರ್ಲಜ್ಜ ವ್ಯಕ್ತಿಗಳ ಕೈಗೆ ಸಿಕ್ಕರೂ, ಬಹುತೇಕ ಪ್ರಮಾಣವನ್ನು ಸಂತ್ರಸ್ತರ ಪರಿಹಾರಕ್ಕೆ ನೀಡಲಾಗುತ್ತದೆ.

ಕೇರಳದ ಪುನರ್ ನಿರ್ಮಾಣಕ್ಕೆ ಯಾವ ದೇಣಿಗೆಯೂ ತೀರಾ ದೊಡ್ಡದೂ ಅಲ್ಲ; ತೀರಾ ಚಿಕ್ಕದೂ ಅಲ್ಲ

ಕಳೆದ ಒಂದು ತಿಂಗಳಿಂದ ರಾಜ್ಯಕ್ಕೆ ವಿಪತ್ತು ಹಾನಿ ಮಾಡಿದ್ದರೆ, ದೇಶದ ಗಮನಕ್ಕೆ ಇದು ಬಂದದ್ದು ಕಳೆದ ಕೆಲ ದಿನಗಳ ಹಿಂದೆ. ಇದಾದ ಬಳಿಕ ಸಿಕ್ಕಿದ ಸ್ಪಂದನೆ ಅದ್ಭುತ. ಗರಿಷ್ಠ ನೆರವು ಹರಿದು ಬರಬಹುದಾದ ಮುಂದಿನ ವಾರ ಅತ್ಯಂತ ಪ್ರಮುಖ. ಪರಿಹಾರ ಪ್ರಯತ್ನಗಳನ್ನು ಕೀಳಂದಾಜು ಮಾಡುವ ಸುಳ್ಳು ಸುದ್ದಿ ಮತ್ತು ಸಮಾಜ ಮಾಧ್ಯಮ ಸಂದೇಶಗಳನ್ನು ಬಯಲುಗೊಳಿಸಬೇಕಾಗಿದೆ.  ನಾಗರಿಕರಿಗೆ ನಾವು ಕಳಕಳಿಯಿಂದ ಮಾಡಿಕೊಳ್ಳುವ ಮನವಿಯೆಂದರೆ, ಕೇರಳಕ್ಕೆ ಆಗಿರುವ ಹಾನಿಯ ಪ್ರಮಾಣದ ಬಗ್ಗೆ, ಅದರಿಂದ ಜನರಿಗೆ ಆಗಿರುವ ತೊಂದರೆಯನ್ನು ನಗಣ್ಯಗೊಳಿಸುವಂಥ ಧ್ವನಿಗಳ ಬಗ್ಗೆ ಗಮನ ಹರಿಸಿ.

(ಮಿನೇಶ್ ಮ್ಯಾಥ್ಯೂ ಕೇರಳ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸ್ವಯಂಸೇವಕ. ಈ ಲೇಖನವನ್ನು ಮ್ಯಾಥ್ಯೂ, ಇತರ ಸ್ವಯಂಸೇವಕರಾದ ಸೆರೀನ್ ಮೊಹ್ಮದ್, ಜೆರ್ರಿಮೆಲ್ ಜಾರ್ಜ್ ಜಾಕೋಬ್, ಕವಿತಾ ರಾಮಚಂದ್ರನ್, ಉಲ್ಲಾಸ್ ಟಿ.ಎಸ್ ಮತ್ತು ಅಕೀಬ್ ಜಮಾಲ್, ಶ್ರುತಿ ನೋಬಲ್, ಅಭಿದಾ, ವಿಷ್ಣು, ಮುತ್ತುಕುಟ್ಟಿ, ಅಮಲ್, ವೈಶಾಖ್, ವರುಣ್, ನಿಬು, ಹರೀಶ್, ಅಂಜನಾ, ವಿಷ್ಣು, ಗೋಕುಲ್ ಮತ್ತು ರಿಚರ್ಡ್ ಅವರೊಂದಿಗೆ ಬರೆದಿದ್ದಾರೆ)

ಕೃಪೆ: thewire.in

Writer - ಮಿನೇಶ್ ಮ್ಯಾಥ್ಯೂ

contributor

Editor - ಮಿನೇಶ್ ಮ್ಯಾಥ್ಯೂ

contributor

Similar News