ಒಂದು ವರ್ಷದೊಳಗೆ ಮೈದಾಳ ಕೆರೆಗೆ ಹೇಮಾವತಿ ನೀರು: ಶಾಸಕ ಗೌರಿಶಂಕರ್

Update: 2018-08-23 18:37 GMT

ತುಮಕೂರು,ಆ.23: ಮುಂದಿನ ಒಂದು ವರ್ಷದ ಅವಧಿಯಲ್ಲಿ ಬುಗುಡನಹಳ್ಳಿ ಕೆರೆಯಿಂದ ಮೈದಾಳ ಕೆರೆಗೆ ಹೇಮಾವತಿ ನೀರು ಹರಿಸುವುದು ಶತಸಿದ್ಧ ಎಂದು ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್ ಭರವಸೆ ನೀಡಿದ್ದಾರೆ.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ, ದುರ್ಗದಹಳ್ಳಿ ಸರಕಾರಿ ಶಾಲಾ ಕಟ್ಟಡದ ಶಿಲಾನ್ಯಾಸ, ಕದರನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ರೈತರ ಜಮೀನಿಗೆ ತೆರಳಿ ಬೆಳೆ ವೀಕ್ಷಣೆ, ಊರ್ಡಿಗೆರೆ ರೈತ ಸಂಪರ್ಕ ಕೇಂದ್ರದಲ್ಲಿ ರಸಗೊಬ್ಬರ, ಬಿತ್ತನೆ ಬೀಜ, ಕೃಷಿ ಪರಿಕರಗಳ ವಿತರಣೆ, ಕದರನಹಳ್ಳಿ ತಾಂಡ್ಯದಲ್ಲಿ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ ಶಿಲಾನ್ಯಾಸ ಹಾಗೂ ತಿಮ್ಮನಾಯಕನಹಳ್ಳಿಯಲ್ಲಿ ನೂತನ ಸರಕಾರಿ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು,  ಇಲ್ಲಿಯವರೆಗೂ ಗ್ರಾಮಾಂತರ ಕ್ಷೇತ್ರದಲ್ಲಿ ರಾಜಕಾರಣ ಮಾಡಿದ ಯಾರೂ ಬುಗುಡನಹಳ್ಳಿ ಕೆರೆಯಿಂದ ಮೈದಾಳ ಕೆರೆಗೆ ಹೇಮಾವತಿ ನೀರು ಹರಿಸಿಲ್ಲ. ಮುಂದಿನ 1 ವರ್ಷದಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ತರಲಾಗುವುದೆಂದರು.

ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಸರಕಾರಿ ಶಾಲೆಗಳ ಅಭಿವೃದ್ಧಿಗಾಗಿ, ಹಳೇ ಶಾಲೆಗಳ ದುರಸ್ಥಿಗೆ, ಹೊಸ ಶಾಲಾ ಕಟ್ಟಡದ ನಿರ್ಮಾಣಕ್ಕಾಗಿ ಶಿಕ್ಷಣ ಸಚಿವರಿಗೆ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿರವರಿಗೆ ಅನುದಾನ ಬಿಡುಗಡೆಗೆ ಪ್ರಸ್ಥಾವನೆ ಸಲ್ಲಿಸಲಾಗಿದೆ. ತಿಮ್ಮನಾಯಕನಹಳ್ಳಿ ಗ್ರಾಮವನ್ನು ದತ್ತು ಪಡೆದು ಹೈಟೆಕ್ ಗ್ರಾಮವನ್ನಾಗಿ ನಿರ್ಮಿಸಲಾಗುವುದು ಎಂದು ಇದೇ ವೇಳೆ ಘೋಷಿಸಿದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಈ ಬಾರಿ 1385 ಕುಟುಂಬಗಳಿಗೆ 10 ಕೋಟಿ 18 ಲಕ್ಷ ಹೆಚ್ಚುವರಿ ಅನುದಾನ ನೀಡುವಂತೆ ಸಚಿವರಿಗೆ ಮನವಿ ಮಾಡಿದ್ದೇನೆ. ಗ್ರಾಮಾಂತರ ಕ್ಷೇತ್ರದಲ್ಲಿ 50 ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ 6 ಕೋಟಿ, 50 ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ 6 ಕೋಟಿ, ಅನುದಾನ ದೊರಕಿಸಲು ಸರಕಾರಕ್ಕೆ ಪ್ರಸ್ಥಾವನೆ ಸಲ್ಲಿಸಿರುವುದಾಗಿ ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು

ಮುಖ್ಯಮಂತ್ರಿ ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಮಾಡದಿದ್ದರೆ ಗ್ರಾಮಾಂತರ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ 1000 ಕೋಟಿ ಅನುದಾನ ತರುವ ನಿರೀಕ್ಷೆ ಹೊಂದಿದ್ದೆ. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಮಾಡಿ ಜನಪರ ಕಾಳಜಿ ಮೆರೆದಿದ್ದಾರೆ. ಹಾಗಾಗಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಒತ್ತಡ ಹಾಕುವುದು ಕಷ್ಟಸಾಧ್ಯ. ಆದ್ದರಿಂದ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಲು ಪ್ರಸ್ಥಾವನೆ ಸಲ್ಲಿಸುವುದು ಹಾಗೂ ಎಸ್.ಸಿ.ಪಿ, ಟಿ.ಎಸ್.ಪಿ. ಯೋಜನೆಯಡಿ ಗ್ರಾಮಾಂತರ ಕ್ಷೇತ್ರದ ಕಾಲೋನಿಗಳ ಸಮಗ್ರ ಅಭಿವೃದ್ಧಿಗಾಗಿ 200 ಕೋಟಿ ರೂ. ಗಳ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿಸಿದರು.

ಈ ವೇಳೆ ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಸುವರ್ಣಗಿರಿಕುಮಾರ್, ಕಾರ್ಯಧ್ಯಕ್ಷ ದುರ್ಗದಹಳ್ಳಿ ರಮೇಶ್, ಜೆಡಿಎಸ್ ಮುಖಂಡರಾದ ಬೆಳಗುಂಭ ವೆಂಕಟೇಶ್, ಮಾಜಿ ಎಪಿಎಂಸಿ ಅಧ್ಯಕ್ಷ ವಿಜಯ್‍ಕುಮಾರ್, ಹರಳೂರು ಸುರೇಶ್ ಹಾಗೂ ಜೆಡಿಎಸ್ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News