ಲಂಚ ಸ್ವೀಕಾರ: ಎಸಿಬಿ ಬಲೆಗೆ ಬಿದ್ದ ಗ್ರಾ.ಪಂ. ಉಪಾಧ್ಯಕ್ಷ

Update: 2018-08-23 18:40 GMT

ಶಿವಮೊಗ್ಗ, ಆ. 23: ನಿವೇಶನ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ವ್ಯಕ್ತಿಯೋರ್ವರಿಂದ ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಪಂಚಾಯತ್ ಉಪಾಧ್ಯಕ್ಷನೋರ್ವನನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದ ಪೊಲೀಸರು ಬಂಧಿಸಿರುವ ಘಟನೆ ಗುರುವಾರ ಶಿವಮೊಗ್ಗ ನಗರದಲ್ಲಿ ನಡೆದಿದೆ. 

ನಗರದ ಹೊರವಲಯ ನಿದಿಗೆ ಗ್ರಾ.ಪಂ. ಉಪಾಧ್ಯಕ್ಷ ಆರ್.ಕುಮಾರ್ ಎಸಿಬಿ ಬಲೆಗೆ ಬಿದ್ದವರೆಂದು ಗುರುತಿಸಲಾಗಿದೆ. ಮಹಾನಗರ ಪಾಲಿಕೆ ಕಚೇರಿ ಸಮೀಪ ಇವರು ಲಂಚ ಸ್ವೀಕರಿಸುವ ವೇಳೆ, ಎಸಿಬಿ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ. 

ಘಟನೆ ಹಿನ್ನೆಲೆ: ಶಿವಮೊಗ್ಗ ನಗರದ ನಿವಾಸಿಯಾದ ರಾಮಕೃಷ್ಣ ಎಂಬುವರು ತಂದೆಯ ಹೆಸರಿನಲ್ಲಿದ್ದ ನಿವೇಶನದ ಖಾತೆಯನ್ನು ತಮ್ಮ ಹೆಸರಿಗೆ ಬದಲಾವಣೆ ಕೋರಿ ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಖಾತೆ ಬದಲಾವಣೆ ಮಾಡಿಕೊಡಬೇಕಾದರೆ 45 ಸಾವಿರ ರೂ. ಲಂಚ ನೀಡುವಂತೆ ಉಪಾಧ್ಯಕ್ಷ ಕುಮಾರ್ ಡಿಮ್ಯಾಂಡ್ ಮಾಡಿದ್ದರು ಎನ್ನಲಾಗಿದೆ. 

ಈ ಕುರಿತಂತೆ ರಾಮಕೃಷ್ಣರವರು ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಎಸಿಬಿ ಪೊಲೀಸರ ನಿರ್ದೇಶನದಂತೆ, ಪಿರ್ಯಾದಿ ರಾಮಕೃಷ್ಣರವರು ಮಧ್ಯಾಹ್ನ ಕುಮಾರ್ ರವರಿಗೆ 30 ಸಾವಿರ ರೂ. ನೀಡಲು ಮುಂದಾಗಿದ್ದರು. ಈ ವೇಳೆ ಲಂಚದ ಹಣದ ಸಮೇತ ಎಸಿಬಿ ಪೊಲೀಸರು ಕುಮಾರ್ ರವರನ್ನು ವಶಕ್ಕೆ ಪಡೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News