ವರ್ಷಕ್ಕೆ 42 ಲಕ್ಷ ಜನರನ್ನು ಸಾಯಿಸುತ್ತಿರುವ ಈ 'ಹಂತಕ' ಯಾರು ಗೊತ್ತೇ ?

Update: 2018-08-24 03:42 GMT

ಹೊಸದಿಲ್ಲಿ, ಆ. 24: ವಿಶ್ವಾದ್ಯಂತ ಹೊರಾಂಗಣ ವಾಯುಮಾಲಿನ್ಯದಿಂದಾಗಿ ಪ್ರತಿ ವರ್ಷ 42 ಲಕ್ಷ ಮಂದಿ ನಿರೀಕ್ಷಿತ ಆಯಸ್ಸಿಗೆ ಮುನ್ನವೇ ಸಾಯುತ್ತಿದ್ದಾರೆ. ಈ ಪೈಕಿ ಶೇಕಡ 60ರಷ್ಟು ಸಾವು ಹೃದಯಾಘಾತ ಮತ್ತು ಪಾರ್ಶ್ವವಾಯುವಿನಿಂದ ಸಂಭವಿಸುತ್ತಿದೆ ಎಂಬ ಆತಂಕಕಾರಿ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅಧ್ಯಯನ ಬಹಿರಂಗಪಡಿಸಿದೆ.

ಆದರೆ ಅಂತಿಮವಾಗಿ ಸೂಕ್ಷ್ಮ ದೂಳಿನ ಕಣಗಳು ಹೇಗೆ ಹೃದಯ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತವೆ ಎನ್ನುವುದನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಡಬ್ಲ್ಯುಎಚ್‌ಒ ವರದಿ ಹೇಳಿದೆ.

ಮಲಿನ ಗಾಳಿಯ ವಿವಿಧ ಅಂಶಗಳಾದ ಓಝೋನ್, ಸಾರಜನಕದ ಡೈಆಕ್ಸೈಡ್, ಇಂಗಾಲದ ಮೋನೋಕ್ಸೈಡ್, ಗಂಧಕದ ಡೈ ಆಕ್ಸೈಡ್‌ಗಳ ಪರಿಣಾಮವನ್ನು ವಿಶ್ಲೇಷಿಸಿರುವ ವಿಜ್ಞಾನಿಗಳು ಚಿಕ್ಕ ಮಾಲಿನ್ಯಕಾರಕ ಕಣಗಳು ದೇಹದ ರಕ್ತನಾಳ ವ್ಯವಸ್ಥೆಯನ್ನು ಹಾನಿಪಡಿಸುತ್ತವೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಜರ್ಮನಿ, ಇಂಗ್ಲೆಂಡ್ ಮತ್ತು ಅಮೆರಿಕದ ವಿಜ್ಞಾನಿಗಳು ಈ ಸಂಶೋಧನೆ ನಡೆಸಿದ್ದರು.

ಅತಿಸೂಕ್ಷ್ಮ ದೂಳಿನ ಕಣಗಳು (2.5 ಮೈಕ್ರಾನ್‌ಗಿಂತ ಚಿಕ್ಕ ಮಾಲಿನ್ಯಕಾರಕ ಕಣಗಳು) ವೈರಸ್‌ನ ಗಾತ್ರದಲ್ಲಿದ್ದು, ಶ್ವಾಸಕೋಶದ ಮೇಲೆ ದಾಳಿ ಮಾಡಿ ರಕ್ತ ಪರಿಚಲನೆ ವ್ಯವಸ್ಥೆಯ್ನು ಪ್ರವೇಶಿಸುತ್ತದೆ. ಇದು ರಕ್ತನಾಳಗಳ ಉರಿಯೂತಕ್ಕೆ ಕಾರಣವಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಇದು ಕೊಬ್ಬಿನ ಅಂಶ ಶೇಖರಣೆಗೆ ಕಾರಣವಾಗುತ್ತದೆ ಹಾಗೂ ರಕ್ತದ ಹರಿವನ್ನು ತಡೆಯುತ್ತದೆ. ಪರಿಣಾಮವಾಗಿ ಹೃದಯಾಘಾತ, ಹೃದಯ ವೈಫಲ್ಯ, ಅಸಹಜ ಹೃದಯ ಬಡಿತದಂಥ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದು ಹೇಳಿದ್ದಾರೆ.

2.5 ಪಿಎಂನಷ್ಟು ಸೂಕ್ಷ್ಮ ದೂಳಿನ ಕಣ ಹಾಗೂ ಸಾರಜನಕದ ಡೈ ಆಕ್ಸೈಡ್ ಡೀಸೆಲ್ ವಾಹನಗಳು ಉಗುಳುವ ಹೊಗೆಯಲ್ಲಿ ಇರುತ್ತವೆ. ಇದು ನರಮಂಡಲ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದರಿಂದ ಹೃದಯಸಂಬಂಧಿ ಸಮಸ್ಯೆಗಳಿಗೆ ನೇರ ಕಾರಣವಾಗುತ್ತದೆ ಎಂದು ಯೂರೋಪಿಯನ್ ಹಾರ್ಟ್ ಜರ್ನಲ್‌ನಲ್ಲಿ ಪ್ರಕಟವಾದ ವರದಿ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News