ಮಹಾತ್ಮಾ ಗಾಂಧೀಜಿಯನ್ನು ‘ಮೋಹನ್ ಚಂದ್’ ಎಂದ ಅರ್ನಬ್ ಗೋಸ್ವಾಮಿ

Update: 2018-08-24 10:11 GMT

ಹೊಸದಿಲ್ಲಿ, ಆ.24: ‘ರಿಪಬ್ಲಿಕ್ ಟಿವಿ’ಯಲ್ಲಿ ಆಗಸ್ಟ್ 22ರಂದು ‘ನ್ಯೂಸ್ ಅವರ್’ ಕಾರ್ಯಕ್ರಮದ ಚರ್ಚೆಯಲ್ಲಿ ಅರ್ನಬ್ ಗೋಸ್ವಾಮಿ  ಮಾತನಾಡುತ್ತಾ ಮಹಾತ್ಮಾ ಗಾಂಧಿಯವರನ್ನು ‘ಮೋಹನಚಂದ್ ಕರಮ್ ಚಂದ್ ಗಾಂಧಿ’ ಎಂದು ತಪ್ಪಾಗಿ ಹೇಳಿದ್ದು, ಅಂಬೇಡ್ಕರ್ ಯಾವತ್ತೂ ಹೇಳದೇ ಇದ್ದ ಮಾತನ್ನು ಅಂಬೇಡ್ಕರ್ ಹೇಳಿದ್ದು ಎಂದು ಪ್ರಮಾದವೆಸಗಿದ್ದಾರೆ.

ಆಗಸ್ಟ್ 22ರಂದು ‘ರಿಪಬ್ಲಿಕ್ ಟಿವಿ’ಯಲ್ಲಿ ‘ವಾಟ್ಸ್ ರಾಂಗ್ ವಿದ್ ಚಾಂಟಿಂಗ್ ಭಾರತ್ ಮಾತಾ ಕಿ ಜೈ' ಎಂಬ ಶೀರ್ಷಿಕೆಯ ಮೇಲೆ ಚರ್ಚೆ ಏರ್ಪಡಿಸಲಾಗಿತ್ತು, ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರು ಇತ್ತೀಚೆಗೆ ಈ ಘೋಷಣೆಯನ್ನು ಕೂಗಿದ್ದಕ್ಕೆ ಈದ್ ಪ್ರಾರ್ಥನಾ ಸಭೆಯ ಸಂದರ್ಭ ಅವರನ್ನು ಹಲವರು ನಿಂದಿಸಿದ್ದರ ಹಿನ್ನೆಲೆಯಲ್ಲಿ ಈ ಚರ್ಚಾ ಕಾರ್ಯಕ್ರಮ ನಡೆದಿತ್ತು.

ಚರ್ಚೆಯಲ್ಲಿ ಮಾತನಾಡಿದ ಅರ್ನಬ್ ಗೋಸ್ವಾಮಿ, ಭಾರತ್ ಮಾತಾ ಕಿ ಜೈ ಘೋಷಣೆಯು ಆರೆಸ್ಸೆಸ್ ಸಂಚು ಎಂಬ ವಾದವನ್ನು ಕೆಲವರು ತೇಲಿ ಬಿಟ್ಟಿದ್ದರೆಂದು ಹೇಳಿದರು. ನಂತರ ಚರ್ಚೆಯಲ್ಲಿ ಭಾಗವಹಿಸಿದ್ದ ಪ್ರೊ. ವಿಶ್ವೇಶ್ವರ್ ರಾವ್ ಅವರನ್ನುದ್ದೇಶಿಸಿ, “ಮೋಹನ್‍ಚಂದ್ ಕರಮ್ ಚಂದ್ ಗಾಂಧಿ ಆರೆಸ್ಸೆಸ್ ಸದಸ್ಯರಾಗಿದ್ದರೇ?'' ಎಂದು ಪ್ರಶ್ನಿಸಿದ್ದಾರೆ. ಗಾಂಧೀಜಿ ವಾರಣಾಸಿಯಲ್ಲಿ 1936ರಲ್ಲಿ ಭಾರತ್ ಮಾತಾ ದೇವಳ ಉದ್ಘಾಟಿಸಿದ್ದರೆಂಬುದನ್ನು ಮುಂದಿಟ್ಟುಕೊಂಡು ಅವರ ರಾಷ್ಟ್ರೀಯವಾದಿಯಾಗಿದ್ದರೆಂದು ಬಿಂಬಿಸುವ ಪ್ರಯತ್ನ ನಡೆಸಿದ್ದರೂ ಈ ಸಂದರ್ಭ ಮಹಾತ್ಮ ಅವರನ್ನು ಮೋಹನದಾಸ್ ಕರಮ್ ಚಂದ್ ಎನ್ನುವ ಬದಲು ಮೋಹನ್‍ಚಂದ್ ಎಂದು ಬಿಟ್ಟರು.

“ನಮ್ಮ ದೇಶಭಕ್ತಿಯನ್ನು ಸಾಬೀತು ಪಡಿಸಲು ಭಾರತ್ ಮಾತಾ ಕಿ ಜೈ ಕೂಗಬೇಕೆಂದೇನು ಇಲ್ಲ” ಎಂದು ಪ್ರೊ. ರಾವ್ ಹೇಳಿದಾಗ ಅರ್ನಬ್ ಪ್ರತಿಕ್ರಿಯಿಸಿ “ಭಾರತ್ ಮಾತಾ ಕಿ ಜೈ ಘೋಷಣೆ ಇಡೀ ದೇಶದಲ್ಲಿ ವಿದ್ಯುತ್ ಸಂಚಾರ ಮೂಡಿಸಿದೆ. ಹೀಗಿರುವಾಗ ನಾನು ಇಂಡಿಯಾ ಮಾತಾ ಕಿ ಜೈ ಹೇಳಿದರೆ ಅದು ಅಷ್ಟೊಂದು ಸ್ಫೂರ್ತಿದಾಯಕವಾಗದು,'' ಎಂದು ಅಂಬೇಡ್ಕರ್ ಹೇಳಿದ್ದರೆಂದು ಹೇಳಿದರು.

ಆದರೆ ವಾಸ್ತವವಾಗಿ ಅಂಬೇಡ್ಕರ್ ಅವರು ಹೀಗೆ ಹೇಳಿರಲೇ ಇಲ್ಲ. ಡಾ.ರಾಜ್ ಕುಮಾರ್ ಅವರ 2008ರಲ್ಲಿ ಪ್ರಕಟವಾದ `ಅಂಬೇಡ್ಕರ್ ಆ್ಯಂಡ್ ಹಿಸ್ ರೈಟಿಂಗ್ಸ್: ಎ ಲುಕ್ ಫಾರ್ ದಿ ನ್ಯೂ ಜನರೇಶನ್'  ಕೃತಿಯಲ್ಲಿ  ಮೇಲಿನಂಶಗಳು ಉಲ್ಲೇಖಗೊಂಡಿದ್ದರೂ ಅದು ಅಂಬೇಡ್ಕರ್ ಅವರ ಮಾತುಗಳಾಗಿರಲಿಲ್ಲ. ಬದಲಾಗಿ ಲೇಖಕರ ಅಭಿಪ್ರಾಯವಾಗಿತ್ತು. ಇಂಡಿಯಾ ಹೆಸರನ್ನು ಭಾರತಕ್ಕೆ ಆಂಗ್ಲರು ನೀಡಿದ್ದು ಎಂದು ಕೃತಿಯಲ್ಲಿ ಬರೆಯಲಾಗಿದೆಯಲ್ಲದೆ ‘ಭರತವರ್ಷ’ ಎಂಬುದನ್ನೂ ಉಲ್ಲೇಖಿಸಿ ಭಾರತದ ಬದಲು ಇಂಡಿಯಾ ಎಂದು ಭಾರತ್ ಮಾತಾ ಕಿ ಜೈ ಘೋಷಣೆಯಲ್ಲಿ ಬಳಸಿದರೆ ಸರಿಯಾಗದು ಎಂಬುದನ್ನೂ ಲೇಖಕರು ಹೇಳಿಕೊಂಡಿದ್ದರು.

ಮಹಾತ್ಮಾ ಗಾಂಧೀಜಿಯವರನ್ನು ‘ಮೋಹನ್ ಚಂದ್’ ಎಂದು ಅರ್ನಬ್ ಹೇಳಿರುವುದು ಬಾಯ್ತಪ್ಪಿನಿಂದಾಗಿದ್ದರೂ ಅಂಬೇಡ್ಕರ್ ಅವರದ್ದಲ್ಲದ ಮಾತನ್ನು ಅಂಬೇಡ್ಕರ್ ಮಾತುಗಳು ಎಂದು ಅರ್ನಬ್ ಹೇಳಿರುವುದು ರಾಷ್ಟ್ರೀಯವಾದಕ್ಕೆ ಸಂಬಂಧಿಸಿದ ಚರ್ಚೆಯಲ್ಲಿ ಮೇಲುಗೈ ಸಾಧಿಸುವ ಉದ್ದೇಶದಿಂದಲ್ಲದೆ ಮತ್ತಿನ್ನೇನಲ್ಲ ಎಂಬುದು ಸ್ಪಷ್ಟ.

ಕೃಪೆ: www.altnews.in

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News