ನಾಪತ್ತೆಯಾಗಿರುವವರ ಶೋಧ ಕಾರ್ಯ ತೀವ್ರ: ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು

Update: 2018-08-24 11:02 GMT

ಮಡಿಕೇರಿ, ಆ.24 : ಜಿಲ್ಲೆಯಲ್ಲಿ ಮಹಾಮಳೆಯಿಂದ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಇದುವರೆಗೆ ಒಟ್ಟು 10 ಮಂದಿ ಸಾವಿಗೀಡಾಗಿದ್ದು, 9 ಮಂದಿ ನಾಪತ್ತೆಯಾಗಿದ್ದಾರೆ. ಇವರಲ್ಲಿ ನಾಲ್ವರು ಬದುಕಿ ಉಳಿದಿರುವ ಸಾಧ್ಯತೆ ತೀರಾ ಕಡಿಮೆ ಇದೆ. ನಾಪತ್ತೆಯಾಗಿರುವವರ ಶೋಧ ಕಾರ್ಯವನ್ನು ತೀವ್ರಗೊಳಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ತಿಳಿಸಿದರು.

ಶುಕ್ರವಾರ ನಗರದ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪ್ರಕೃತಿ ವಿಕೋಪಕ್ಕೆ ತುತ್ತಾದವರ ನೆರವಿಗಾಗಿ ಪೊಲೀಸ್ ಇಲಾಖೆ ವತಿಯಿಂದ ಸಿಬ್ಬಂದಿಗಳ ಒಂದು ದಿನದ ವೇತನವಾದ ಸುಮಾರು 5.85 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುವುದು ಎಂದು ಘೋಷಿಸಿದರು.

ಜಿಲ್ಲೆಯಲ್ಲಿ ಆ.15ರ ಬಳಿಕ ಸುರಿದ ಮಹಾಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೂ ಕುಸಿತದಲ್ಲಿ ಸಿಲುಕಿದವರ ರಕ್ಷಣೆಗೆ ಪೊಲೀಸ್ ಇಲಾಖೆ ಆ.16ರಿಂದಲೇ ತಕ್ಷಣದಿಂದಲೇ ಕಾರ್ಯಪ್ರವೃತ್ತವಾಗಿದ್ದು, ಸೇನೆ ಸೇರಿದಂತೆ ವಿವಿಧ ರಕ್ಷಣಾ ತಂಡಗಳು ಹಾಗೂ ಸ್ಥಳೀಯರ ನೆರವಿನಿಂದ ಸುಮಾರು 1738 ಮಂದಿಯನ್ನು ರಕ್ಷಿಸಿ ಪರಿಹಾರ ಕೇಂದ್ರಗಳಿಗೆ ರವಾನಿಸಲಾಗಿದೆ. ಭೂಕುಸಿತದಿಂದ ಮಣ್ಣಿನಡಿ ಸಿಲುಕಿ ಸುಮಾರು 10 ಮಂದಿ ಸಾವಿಗೀಡಾಗಿದ್ದು, ಅವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ 9 ಮಂದಿ ನಾಪತ್ತೆಯಾಗಿದ್ದು, ನಾಪತ್ತೆಯಾಗಿದ್ದ ಮಹಿಳೆಯೊಬ್ಬರನ್ನು ಗುರುವಾರ ಪತ್ತೆ ಮಾಡಲಾಗಿದೆ. ಅಂದು ಸಂಜೆ ಕಾಲೂರು ಗ್ರಾಮದಲ್ಲಿ ತಾಯಿ-ಮಗ ಹೊಳೆ ದಾಟುತ್ತಿದ್ದ ಸಂದರ್ಭ ಸುಮಾರು 7 ವರ್ಷದ ಗಗನ್ ಗಣಪತಿ ಎಂಬ ಬಾಲಕ  ತಾಯಿಯ ಕೈಜಾರಿ ನೀರು ಪಾಲಾಗಿದ್ದಾನೆ. ಆತನ ಮೃತದೇಹಕ್ಕಾಗಿ ಶುಕ್ರವಾರ ಶೋಧ ಕಾರ್ಯ ನಡೆಸಲಾಗಿದೆ ಎಂದು ವಿವರಿಸಿದರು.

ಇನ್ನುಳಿದ 8 ಮಂದಿಯ ಪೈಕಿ ಕಾಟಗೇರಿಯ ಗಿಲ್ಬರ್ಟ್ ಮೆಂಡೋನ್ಸ(59) ಜೋಡುಪಾಲದ ಗೌರಮ್ಮ(53) ಮಂಜುಳಾ (15) ಅವರು ಬದುಕಿ ಉಳಿದಿರುವ ಸಾಧ್ಯತೆ ತೀರಾ ಕಡಿಮೆ ಇದ್ದು, ಅವರು ಮಣ್ಣಿನಡಿ ಸಿಲುಕಿ ಇಲ್ಲವೇ ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಹೆಚ್ಚಿರುವುದರಿಂದ ಅವರ ಮೃತದೇಹಕ್ಕಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಕೃತಿ ವಿಕೋಪದಿಂದ ಸಾವಿಗೀಡಾದವರಲ್ಲಿ ಕಾಟಗೇರಿಯ ಅಮ್ಮವ್ವ (79)ಅವರು ವಿದ್ಯುತ್ ಕಂಬ ಬಿದ್ದು ವಿದ್ಯುತ್ ಪ್ರವಹಿಸಿ ಸಾವಿಗೀಡಾದರೆ, ಮಣ್ಣಿನಡಿ ಸಿಲುಕಿ ಸಾವಿಗೀಡಾದ ಅದೇ ಗ್ರಾಮದ ವೆಂಕಟರಮಣ (49) ಹಾಗೂ ಕೆಎಸ್‍ಆರ್‍ಪಿ ಸಿಬ್ಬಂದಿ ಯಶವಂತ್ ಅವರ ಮೃತದೇಹವನ್ನು ಆ.16ರಂದು ಪತ್ತೆ ಮಾಡಲಾಗಿದ್ದು, ಪವನ್(36) ಎಂಬವರ ಮೃತದೇಹವನ್ನು ಆ.22ರಂದು ಹೊರತೆಗೆಯಲಾಗಿದೆ. ಇದರೊಂದಿಗೆ ಮುಕ್ಕೋಡ್ಲು ಗ್ರಾಮದ ಪಣಿ ಯರವರ ಮುತ್ತ ಎಂಬವರ ಮೂರು ವಾರದ ಮಗು ಭೂಕುಸಿತದ ಸಂದರ್ಭ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗ ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟಿದೆ ಎಂದರು.

ಜೋಡುಪಾಲದ ನಿವಾಸಿ ಬಸಪ್ಪ (56) ಹಾಗೂ ಅವರ ಪುತ್ರಿ ಮೋನಿಷಾ(24) ಎಂಬವರುಗಳು ಭೂಕುಸಿತಕ್ಕೆ ಸಿಲುಕಿ ಸಾವಿಗೀಡಾಗಿದ್ದು, ಅವರ ಮೃತದೇಹವನ್ನು ಆ.18ರಂದು ಪತ್ತೆ ಮಾಡಲಾಗಿದ್ದು, ಹೆಮ್ಮೆತ್ತಾಳು ಗ್ರಾಮದ  ಚಂದ್ರಾವತಿ(66) ಹಾಗೂ ಅವರ ಪುತ್ರ ಉಮೇಶ್ ರೈ(36) ಎಂಬವರು ಕೂಡ ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದು, ಅವರ ಮೃತದೇಹವನ್ನು ಆ.22ರಂದು ಹಾಗೂ ಹೆಬ್ಬೆಟ್ಟಗೇರಿಯ ಉಮ್ಮವ್ವ (76) ಎಂಬವರ ಮೃತದೇಹವನ್ನು ಆ.23ರಂದು ಪತ್ತೆಮಾಡಲಾಗಿದೆ ಎಂದು ನೀಲಮಣಿ ರಾಜು ಮಾಹಿತಿ ನೀಡಿದರು.

ಉಳಿದಂತೆ ಹೆಬ್ಬೆಟ್ಟಗೇರಿಯ ಚಂದ್ರಪ್ಪ (58) ಹೆಬ್ಬಾಲೆಯ ಹೆಚ್.ಆರ್. ಹರೀಶ್ ಕುಮಾರ್, ಮೂವತ್ತೊಕ್ಲುವಿನ ಮುಕ್ಕಾಟಿರ ಸಾಬು ಉತ್ತಪ್ಪ(62) ಹಾಡಗೇರಿಯ ಫ್ರಾನ್ಸಿಸ್ ಮೊಂತೆರೋ, ಮಕ್ಕಂದೂರು ಉದಯಗಿರಿಯ  ಬಾಬು(56) ಎಂಬವರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದ್ದು, ಅವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಇಲಾಖೆ ಹಾಗೂ ಇತರ ರಕ್ಷಣಾ ತಂಡಗಳ ಸಹಾಯದಿಂದ ಆ.17ರಂದು 873, ಆ.18 ರಂದು 661, ಆ.19 ರಂದು 181, 20 ರಂದು 20 ಹಾಗೂ 23 ರಂದು 3 ಮಂದಿ ಸೇರಿದಂತೆ 1738 ಮಂದಿಯನ್ನು ರಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು, ರಕ್ಷಣಾ ಕಾರ್ಯದಲ್ಲಿ ಸ್ಥಳೀಯರ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಭೂ ಕುಸಿತಕ್ಕೊಳಗಾಗಿರುವ ಪ್ರದೇಶಗಳಲ್ಲಿ ಡ್ರೋನ್ ಬಳಸಿ ಶೋಧ ಕಾರ್ಯವನ್ನು ನಡೆಸಲಾಗುತ್ತಿದ್ದು, ಇನ್ನೂ ಮನುಷ್ಯರು ಹಾಗೂ ಸಾಕುಪ್ರಾಣಿಗಳು ಸಿಲುಕಿಕೊಂಡಿರುವ ಬಗ್ಗೆ ಶೋಧ ನಡೆಸಲಾಗುತ್ತಿದೆ. ಈಗಾಗಲೇ ಭೂ ಕುಸಿತವಾಗಿರುವ ಪ್ರದೇಶಗಳಲ್ಲಿ ಮಣ್ಣು ಸಡಿಲಗೊಂಡಿರುವುದರಿಂದ ಮತ್ತೆ ಕುಸಿತಗಳಾಗುವ ಸಾಧ್ಯತೆಗಳಿವೆ. ಕುಸಿತಕ್ಕೊಳಗಾಗಿರುವ ಪ್ರದೇಶಗಳಿಗೆ ತೆರಳುತ್ತಿರುವ ಸಂತ್ರಸ್ತರು ಕೂಡ ಏಕಾಂಗಿಗಳಾಗಿ ಹೋಗದೆ ತಂಡವಾಗಿ ಹೋಗುವುದು ಸೂಕ್ತ ಎಂದು ಹೇಳಿದ ಅವರು, ಎಲ್ಲಾ ರಕ್ಷಣಾ ತಂಡಗಳು ಇನ್ನೂ ಇಲ್ಲೇ ಬೀಡು ಬಿಟ್ಟಿದ್ದು, ಯಾವುದೇ ತಂಡಗಳನ್ನು ವಾಪಾಸ್ ಕಳುಹಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಸ್ಥಳೀಯ ಸೇನಾಧಿಕಾರಿ ಕರ್ನಲ್ ಮಾದಪ್ಪ ಅವರ ನೇತೃತ್ವದಲ್ಲಿ ಗರುಡ ಪಡೆಯ 25 ಮಂದಿ ಹಾಗೂ ಎಸ್‍ಡಿಆರ್‍ಎಫ್‍ನ ಸಿಬ್ಬಂದಿಗಳು ಮಣ್ಣಿನಡಿ ಸಿಲುಕಿರಬಹುದಾದ ಹಾಗೂ ನದಿಗಳಲ್ಲಿ ಕೊಚ್ಚಿ ಹೋಗಿರಬಹುದಾದವರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದು, ಪರಿಹಾರ ಕೇಂದ್ರಗಳಲ್ಲಿರುವ ಮಹಿಳೆಯರ ರಕ್ಷಣೆಗಾಗಿ ಕೆಎಸ್‍ಆರ್‍ಪಿಯ ಮಹಿಳಾ ಸಿಬ್ಬಂದಿಗಳನ್ನು ಕರೆಸಿಕೊಳ್ಳಲಾಗಿದೆ. 

ಪ್ರಕೃತಿ ವಿಕೋಪದಲ್ಲಿ ನಿರಾಶ್ರಿತರಾದವರಿಗೆ ವಿವಿಧ ಸಂಘಸಂಸ್ಥೆಗಳು, ದಾನಿಗಳು, ಸ್ಥಳೀಯರು ಸ್ಥರ್ಯ ತುಂಬುವ ಕಾರ್ಯ ಮಾಡುತ್ತಿದ್ದು, ಇದರೊಂದಿಗೆ ಸರಕಾರದ ವತಿಯಿಂದಲೂ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಪುನರ್ವಸತಿ ಮತ್ತಿತರ ಕಾರ್ಯಗಳಿಗೆ ಇನ್ನೂ 2-3 ತಿಂಗಳು ಬೇಕಾಗಬಹುದಾಗಿದ್ದು, ಪೊಲೀಸ್ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.
ಈ ಸಂದರ್ಭ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ  ಶರತ್‍ಚಂದ್ರ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News