ಚಿಕ್ಕಮಗಳೂರು: ಜಿಲ್ಲಾದ್ಯಂತ ಸಂಭ್ರಮದ ವರಮಹಾಲಕ್ಷ್ಮೀ ಪೂಜೆ

Update: 2018-08-24 11:43 GMT

ಚಿಕ್ಕಮಗಳೂರು, ಆ.24: ಜಿಲ್ಲೆಯಾದ್ಯಂತ ಶುಕ್ರವಾರ ಸಂಭ್ರಮ-ಸಡಗರದಿಂದ ವರಮಹಾಲಕ್ಷ್ಮೀ ಪೂಜಾ ಹಬ್ಬವನ್ನು ಆಚರಿಸಲಾಯಿತು.

ಚಿಕ್ಕಮಗಳೂರು ನಗರದಲ್ಲಿ ಹಿಂದೂ ಧರ್ಮೀಯರು ತಮ್ಮ ವ್ಯಾಪಾರ ವಹಿವಾಟುಗಳನ್ನು ಬಹುತೇಕ ಸ್ಥಗಿತಗೊಳಿಸಿ ಅಂಗಡಿ, ಮುಂಗಟ್ಟುಗಳಲ್ಲಿ ಮುಂಜಾನೆ ಶ್ರದ್ಧಾ ಭಕ್ತಿಯಿಂದ ವರಮಹಾಲಕ್ಷ್ಮಿಯ ಪೂಜೆ ಸಲ್ಲಿಸಿದರು. ಮಹಿಳೆಯರು ತಮ್ಮ ನೆರೆಹೊರೆಯ ಮಹಿಳೆಯರನ್ನು ಪೂಜೆಗೆ ಆಹ್ವಾನಿಸಿ ಬಾಗಿನ ನೀಡುತ್ತಿದ್ದ ದೃಶ್ಯಗಳು ನಗರದಲ್ಲಿ ಸಾಮಾನ್ಯವಾಗಿತ್ತು. 

ಇನ್ನು ನಗರದ ಬೋಳರಾಮೇಶ್ವರ ದೇವಾಲಯ, ಕಾಮಧೇನು ದೇವಾಲಯಗಳಲ್ಲಿ ಮುಂಜಾನೆ ಮಹಿಳೆಯರು ತಮ್ಮ ಕುಟುಂಬದ ಸದಸ್ಯರು, ಮಕ್ಕಳೊಂದಿಗೆ ಸರತಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು. ಹಬ್ಬದ ಹಿನ್ನೆಲೆಯಲ್ಲಿ ನಗರದ ಬಹುತೇಕ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಎಂದಿಗಿಂತ ಅಧಿಕವಾಗಿತ್ತು. ಪೂಜೆ ಅಂಗವಾಗಿ ನಗರದ ಹೂವಿನ ಮಾರುಕಟ್ಟೆ, ತರಕಾರಿ ಮಾರುಕಟ್ಟೆಗಳಲ್ಲಿ ನಾಗರಿಕರು ಭರದಿಂದ ವ್ಯಾಪಾರ ಮಾಡುತ್ತಿದ್ದ ದೃಶ್ಯಗಳೂ ಕಂಡು ಬಂದವು. 

ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಬಹುತೇಕ ಹಿಂದೂ ಧರ್ಮೀಯರ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಶುಕ್ರವಾರ ಚಿಕ್ಕಮಗಳೂರು ತಾಲೂಕಿನಾದ್ಯಂತ ಮಳೆ ಪೂರ್ಣ ಪ್ರಮಾಣದಲ್ಲಿ ಬಿಡುವು ನೀಡಿದ್ದರಿಂದ ಎಲ್ಲೆಡೆ ಹಬ್ಬದ ಸಂಭ್ರಮ, ಸಡಗರ ಕಂಡು ಬಂತು. ಬಿಸಿಲಿನ ವಾತಾವರಣ ಹಬ್ಬಕ್ಕೆ ವಿಶೇಷ ಕಳೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News