ಚಿಕ್ಕಮಗಳೂರು: ಭೂ ಕುಸಿತ ಪ್ರದೇಶಕ್ಕೆ ಶಾಸಕ ಸಿ.ಟಿ ರವಿ ಭೇಟಿ

Update: 2018-08-24 11:48 GMT

ಚಿಕ್ಕಮಗಳೂರು,ಆ.24: ಮಲೆನಾಡು ಪ್ರದೇಶಗಳಲ್ಲಿ ಈ ಭಾರಿ ಹೆಚ್ಚು ಮಳೆಯಾಗಿ ಅಪಾರ ನಷ್ಟವಾಗಿದೆ ಎಂದು ಶಾಸಕ ಸಿ.ಟಿ.ರವಿ ಅವರು ಹೇಳಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಶಿರವಾಸೆ ಸಮೀಪದ ಸಿದ್ದಾಪುರ ಸರ್ವೆ ನಂ:340 ರಲ್ಲಿ ರೈತ ಎಸ್.ಪಿ.ಜಗದೀಶ್ ಅವರಿಗೆ ಸೇರಿದ ಸುಮಾರು 4 ಎಕರೆ ಜಮೀನಿನಲ್ಲಿದ್ದ ಅಡಿಕೆ, ಕಾಫಿ, ಮೆಣಸಿನ ತೋಟಕ್ಕೆ ಗುಡ್ಡ ಕುಸಿದು ಅಪಾರವಾಗಿ ಹಾನಿಯಾಗಿರುವ ಪ್ರದೇಶಕ್ಕೆ ಶುಕ್ರವಾರ ಶಾಸಕರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಂತ್ರಸ್ತ ರೈತರಿಗೆ ಸ್ವಾಂತ್ವನ ನೀಡಿ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು.

ಈ ಬಾರಿ ಮಳೆಯ ಪ್ರಮಾಣ ಹೆಚ್ಚಾದ್ದರಿಂದ ಪಶ್ಚಿಮ ಘಟ್ಟ ಮತ್ತು ಮಲೆನಾಡಿನಲ್ಲಿ ಬಹುತೇಕ ರಸ್ತೆ ಸೇತುವೆಗಳು ಹಾಗೂ ತೋಟದ ಮನೆಗಳಿಗೆ ಹಾನಿಯಾಗಿದೆ. ಇದಕ್ಕೆ ಅಧಿಕಾರಿಗಳು ನ್ಯಾಯಯುತವಾದ ಪರಿಹಾರವನ್ನು ದೊರಕಿಸಿಕೊಡಬೇಕಾಗಿದೆ ಎಂದ ಅವರು, ಇಂತಹ ಹಾನಿ ಪ್ರದೇಶಗಳಿಗೆ  ಮಾಹಿತಿ ತಿಳಿದ ತಕ್ಷಣ ಭೇಟಿ ನೀಡಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ನಿರ್ವಹಿಸಬೇಕಾಗಿದೆ. ಮಳೆಯಿಂದ ಮಡಿಕೇರಿಯಲ್ಲಾದ ಘಟನೆಗಳಿಗೆ ಕಾರಣವೇನೆಂಬುದು ತಜ್ಞರು ಈಗಾಗಲೇ ತಿಳಿಸಿರುವ ಕಾರಣ ಅದೇ ರೀತಿ ನಮ್ಮ ಜಿಲ್ಲೆಯಲ್ಲಿ ಆಗದಂತೆ ರೆಸಾರ್ಟ್, ಹೋಂ-ಸ್ಟೇಗಳಿಗೆ ಕಡಿವಾಣ ಹಾಕಿ ಪರಿಸರಕ್ಕೆ ಪೂರಕವಾಗಿ ಚಿಂತನೆಗಳನ್ನು ಚುರುಕುಗೊಳಿಸಬೇಕಾಗಿದೆ. ಸಿದ್ದಾಪುರ, ಬಿದುರುಗುಂಡಿ, ಶಿರವಾಸೆ, ಕಳವಾಸೆ ಈ ಭಾಗದಲ್ಲಿ 25 ವರ್ಷಗಳಿಂದ ಆಗದ ಮಳೆ ಈ ಬಾರಿ ಇಲ್ಲಿಯವರೆಗೆ 110 ಸೆ.ಮೀ. ಮಳೆಯಾಗಿರುವುದರಿಂದ ಈ ಅನಾಹುತಕ್ಕೆ ಕಾರಣವಾಗಿರಬಹುದೆಂದು ಹೇಳಿದರು.

ಮುತ್ತೋಡಿ ಸಮೀಪದ ಬಾಳೆಹಳ್ಳಿಯ ಸೇತುವೆ ಸಂಪೂರ್ಣವಾಗಿ ಕುಸಿದ ಪ್ರದೇಶಕ್ಕೂ ಭೇಟಿ ನೀಡಿ, ಮೇಲಿನ ಹುಲುವತ್ತಿ ಭಾಗದಲ್ಲಿ ರಸ್ತೆ, ತೋಟಗಳು ಹಾನಿಯಾಗಿರುವ ಸ್ಥಳಗಳಿಗೆ ಭೇಟಿ ನೀಡಿ ಸಂತ್ರಸ್ತ ರೈತರಿಗೆ ಧೈರ್ಯ ತುಂಬಿದರು.

ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಕವಿತ ಲಿಂಗರಾಜು, ಜಸಿಂತ ಅನಿಲ್ ಕುಮಾರ್, ತಾ.ಪಂ. ಅಧ್ಯಕ್ಷ ಜಯಣ್ಣ ಸದಸ್ಯರುಗಳಾದ ಸಿದ್ದಾಪುರ ರಮೇಶ್, ಸುರೇಶ್ ಮತ್ತಿತರ ಈ ಭಾಗದ ಜನ ಪ್ರತಿನಿಧಿಗಳು ಹಾಗೂ ತಹಶೀಲ್ದಾರ್ ನಂದಕುಮಾರ್, ತಾ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿದ್ದಪ್ಪ, ಕೃಷಿ ತೋಟಗಾರಿಕೆ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News