ಶಿರಾಡಿ ಘಾಟ್‍ ಸಂಚಾರ ಬಂದ್ ಹಿಂದೆ ಭಾರೀ ಭ್ರಷ್ಟಾಚಾರ: ಆರೋಪ

Update: 2018-08-24 12:20 GMT

ಸಕಲೇಶಪುರ,ಆ.24: ಶಿರಾಡಿ ಘಾಟ್‍ನಲ್ಲಿ ಆಗಿರುವ ಸಣ್ಣಪುಟ್ಟ ಅವಘಡಗಳನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ರಸ್ತೆ ದುರಸ್ತಿಗೆ ಕೊಟ್ಯಾಂತರ ರೂಪಾಯಿಗಳು ಖರ್ಚಾಗುತ್ತದೆ ಎಂದು ಹೇಳಿ ಈ ಭಾಗದ ಸಂಚಾರ ಬಂದ್ ಮಾಡಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುವ ಮೂಲಕ ಭಾರೀ ಭ್ರಷ್ಟಾಚಾರ ನಡೆಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಶಿರಾಡಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಸಂಜಿತ್ ಶೆಟ್ಟಿ ಆರೋಪಿಸಿದರು.

ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿ ನಡೆಸಿದ ಅವರು, ಈ ಭಾಗದಲ್ಲಿ ಸುರಿದ ಭಾರಿ ಮಳೆಗೆ ಕೆಲವೆಡೆ ಗುಡ್ಡ ಕುಸಿದು ಹೆದ್ದಾರಿ ಮೇಲೆ ಮಣ್ಣು ಕುಸಿದಿದೆ. ಇದನ್ನು ಕೆಲವೇ ಗಂಟೆಗಳಲ್ಲಿ ತೆರವು ಮಾಡಬಹುದು. ಅಲ್ಲದೆ ರಸ್ತೆಯ ಇಕ್ಕೆಲಗಳಲ್ಲಿ ಬಿರುಕು ಉಂಟಾಗಿದ್ದು, ಅವುಗಳನ್ನೂ ಸಹ ಶೀಘ್ರವಾಗಿ ದುರಸ್ತಿ ಮಾಡಬಹುದು. ಆದರೆ ಇಷ್ಟು ಸಣ್ಣ ಕೆಲಸಗಳನ್ನು ಮಾಡಲು ವಾಹನ ಸಂಚಾರವನ್ನೇ ಬಂದ್ ಮಾಡುವ ಅಗತ್ಯವಿರಲಿಲ್ಲ. ಅಧಿಕಾರಿಗಳು ಈ ಭಾಗದ ರಸ್ತೆ ಸಂಚಾರವನ್ನು ಇನ್ನೂ ಐದು ತಿಂಗಳು ಆರಂಭಿಸಲು ಸಾಧ್ಯವಿಲ್ಲ ಎಂದು ಹೇಳಿದ್ದು ಮತ್ತು ಆರು ಕೋಟಿಗೂ ಹೆಚ್ಚು ಹಣ ಬೇಕಾಗುತ್ತದೆ ಎಂದು ಹೇಳಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದರು.

ಸರ್ಕಾರದ ಹಣವನ್ನು ಲೂಟಿ ಮಾಡುವ ಉದ್ದೇಶದಿಂದ ಕೆಲ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿರುವುದು ಕಂಡು ಬಂದಿದ್ದು, ಕೂಡಲೆ ಹಾಸನ ಹಾಗೂ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಗಳು ಸ್ಥಳ ಪರಿಶಿಲನೆ ನಡೆಸಿ ಭ್ರಷ್ಟಾಚಾರ ನಡೆಯದಂತೆ ನೋಡಿಕೊಳ್ಳಬೇಕು. ಸೆಪ್ಟೆಂಬರ್ ಮೊದಲ ವಾರದೊಳಗೆ ಶಿರಾಡಿ ರಸ್ತೆಯ ದುರಸ್ತಿ ಮುಗಿಸಿ ಸಂಚಾರ ಮುಕ್ತಗೊಳಿಸದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಮುಂದೆ ಆಗಬಹುದಾದ ಬೆಳವಣಿಗೆಗೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈಲ್ವೆಪ್ರಯಾಣಿಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಆಳ್ವ ಮಾತನಾಡಿ, ಬೆಂಗಳುರು-ಮಂಗಳೂರು ಮಾರ್ಗದ ನಡುವೆ ಸಂಪರ್ಕ ಬೆಸೆಯಲು ಶಿರಾಡಿ ಮಾರ್ಗ ಏಕೈಕ ದಾರಿಯಾಗಿದ್ದು, ಈ ಸಂಚಾರವನ್ನು ನೆಪವೊಡ್ಡಿ ಬಂದ್ ಮಾಡಲಾಗಿದೆ. ಹಲವು ವರ್ಷಗಳ ತಮ್ಮ ಹೋರಾಟದ ಫಲವಾಗಿ ಆರಂಭವಾಗಿದ್ದ ರೈಲು ಸಂಚರವೂ ಗುಡ್ಡ ಕುಸಿತದಿಂದ ಬಂದ್ ಆಗಿದೆ. ಈ ನಡುವೆ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ರೋಗಿಗಳನ್ನು ಮಂಗಳೂರಿಗೆ ಕರೆದೊಯ್ಯಲು ಹರಸಾಹಸ ಪಡುವಂತಾಗಿದೆ. ಅತ್ತ ಚಾರ್ಮಡಿ ಘಾಟ್ ಸಂಚಾರವೂ ತೀರಾ ದುಸ್ತರವಾಗಿದೆ. ಪರಿಸ್ಥಿತಿ ಹೀಗಿರುವಾಗ ಯಾರದೋ ಬೇಳೆ ಬೇಯಿಸಿಕೊಳ್ಳಲು ಸಾರ್ವಜನಿಕರಿಗೆ ತೊಂದರೆ ಕೊಡುವ ರೀತಿಯಲ್ಲಿ ಶಿರಾಡಿ ಸಂಚಾರ ಬಂದ್ ಮಾಡಿರುವುದು ಖಂಡನಾರ್ಹ. ಕೂಡಲೆ ಈ ಭಾಗದ ಸಂಚಾರ ಆರಂಭಿಸದಿದ್ದರೆ ಹೋರಾಟ ಅನಿವಾರ್ಯವಾಗಿರುತ್ತದೆ ಎಂದರು.

ಪತ್ರಿಕಾಗೊಷ್ಟಿಯಲ್ಲಿ ಮಲೆನಾಡು ಹಿತರಕ್ಷಣಾ ವೇದಿಕೆ ಸಂಚಾಲಕ ದಕ್ಷಿಣ ಕನ್ನಡದ ಕಿಶೋರ್ ಶಿರಡಿ, ಯತೀಶ್ ಕುಮಾರ್ ಗುಂಡ್ಯ, ಕುಮಾರ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News