ಕೊಡಗು ಪ್ರಕೃತಿ ವಿಕೋಪ: 10 ಸಾವಿರ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆಗೆ ಮನವಿ

Update: 2018-08-24 12:46 GMT

ಮಡಿಕೇರಿ, ಆ.24 : ಕೊಡಗು ಜಿಲ್ಲೆಯಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪದಲ್ಲಿ 34 ಗ್ರಾಮಗಳು ಸಂಪೂರ್ಣವಾಗಿ ರಸ್ತೆ ಸಂಪರ್ಕ ಕಳೆದುಕೊಂಡಿದ್ದು, ನೂರಾರು ಕುಟುಂಬಗಳು ಮನೆ, ಆಸ್ತಿ ಕಳೆದುಕೊಂಡು ನಿರಾಶ್ರಿತಗೊಂಡಿವೆ. ಜಿಲ್ಲೆಯು ಕೃಷಿ ಪ್ರಧಾನ ಜಿಲ್ಲೆಯಾಗಿರುವುದರಿಂದ ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರಕಾರದಿಂದ 10 ಸಾವಿರ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಜನಪ್ರತಿನಿಧಿಗಳು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಗಮನಸೆಳೆದರು.

ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಮೇರೆಗೆ ಶುಕ್ರವಾರ ಕೊಡಗು ಜಿಲ್ಲೆಗೆ ಭೇಟಿ ನೀಡಿ ಪ್ರಕೃತಿ ವಿಕೋಪಕ್ಕೆ ತುತ್ತಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ನಗರದ ಜಿಲ್ಲಾಡಳಿತ ಭವನದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಕೇಂದ್ರ ಸಚಿವರಿಗೆ ಮಾಹಿತಿ ನೀಡಿದರು.

ಆರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು, ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಕುರಿತು ಹಾಗೂ ಕೈಗೊಂಡ ಪರಿಹಾರ ಕಾರ್ಯಗಳ ಮಾಹಿತಿ ನೀಡಿದರು. ಈ ಸಂದರ್ಭ ಅವರು ಸ್ಥಳೀಯರ ಸಹಕಾರ, ರಕ್ಷಣಾ ತಂಡಗಳ ಕಾರ್ಯಾಚರಣೆಗಳ ಕುರಿತು ವಿವರಿಸಿ, ಇದುವರೆಗೆ 3140 ಮಂದಿಯನ್ನು ವಿವಿಧ ರಕ್ಷಣಾ ತಂಡಗಳು ಹಾಗೂ ಸ್ಥಳೀಯರು ರಕ್ಷಿಸಿದ್ದಾರೆ. 10 ಮಂದಿ ಸಾವಿಗೀಡಾಗಿದ್ದು, 8 ಮಂದಿ ನಾಪತ್ತೆಯಾಗಿದ್ದಾರೆ. ಪ್ರಾಥಮಿಕ ಅಂದಾಜಿನ ಪ್ರಕಾರ ಸುಮಾರು ಒಂದು ಸಾವಿರ ಕೋಟಿ ರೂ.ಗಳ ಹಾನಿ ಸಂಭವಿಸಿರಬಹುದೆಂದು ವಿವರಿಸಿದರು. ಮುಂದಿನ ದಿನಗಳಲ್ಲಿ ಸಂಪರ್ಕ ಕಳೆದುಕೊಂಡಿರುವ ಗ್ರಾಮಗಳಿಗೆ ಸಂಪರ್ಕ ರಸ್ತೆ ನಿರ್ಮಾಣ, ಮನೆ ಕಳೆದುಕೊಂಡವರಿಗೆ ವಸತಿ ವ್ಯವಸ್ಥೆ, ವಿದ್ಯುದೀಕರಣಕ್ಕೆ ಮೊದಲ ಆದ್ಯತೆ ನೀಡಲಾಗುವುದೆಂದು. 

ಶಾಸಕ ಕೆ.ಜಿ ಬೋಪಯ್ಯ ಮಾತನಾಡಿ, ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನ 34 ಗ್ರಾಮಗಳು ರಸ್ತೆ ಸಂಪರ್ಕವನ್ನು ಕಳೆದುಕೊಂಡಿವೆ. ಈ ಪ್ರದೇಶಗಳಲ್ಲಿ ಜೆಸಿಬಿ ಬಳಸಿ ರಸ್ತೆ ನಿರ್ಮಿಸಬೇಕಿದ್ದು, ಜೆಸಿಬಿ ತೆರಳಲಾಗದ ಪ್ರದೇಶಗಳಲ್ಲಿ ಸಣ್ಣ ಹಿಟಾಚಿಗಳನ್ನು ಬಳಸಿ ರಸ್ತೆ ನಿರ್ಮಿಸಬೇಕಿದೆ ಎಂದು ಸಲಹೆ ಮಾಡಿದರು.

ಕೊಡಗು ಕಾಫಿ, ಕರಿಮೆಣಸು, ಭತ್ತ  ಬೆಳೆಯುವ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಪ್ರಸಕ್ತ ನಿರಾಶ್ರಿತರಾಗಿರುವ ಕುಟುಂಬಗಳು ಕೃಷಿಯನ್ನೇ ನಂಬಿ ಜೀವನ ನಡೆಸುವವರಾಗಿದ್ದಾರೆ. ಇಲ್ಲಿ ಕೈಗಾರಿಕೆಗಳು ಇಲ್ಲದಿರುವುದರಿಂದ ಉದ್ಯೋಗ ಕಲ್ಪಿಸುವುದು ಅಸಾಧ್ಯವಾಗಿದ್ದು, ಅವರಿಗೆ ಕೃಷಿ ಯೋಗ್ಯ ಜಮೀನನ್ನೇ ನೀಡಬೇಕಿದೆ. ಈ ನಿಟ್ಟಿನಲ್ಲಿ ಸುಮಾರು 10 ಸಾವಿರ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‍ನ್ನು ಕೊಡಗಿಗೆ ನೀಡಬೇಕು ಎಂದು ಮನವಿ ಮಾಡಿದರು.

ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ಕೊಡಗು ಜಿಲ್ಲೆಯನ್ನು ರಾಷ್ಟ್ರೀಯ ಪ್ರಾಕೃತಿಕ ವಿಕೋಪ ಪೀಡಿತ ಜಿಲ್ಲೆ ಎಂದು ಘೋಷಿಸುವುದರೊಂದಿಗೆ ಜಿಲ್ಲೆಗೆ ಹೆಚ್ಚಿನ ಅನುದಾನವನ್ನು ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ರಕ್ಷಣಾ ಸಚಿವರು ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಕೊಡಗು-ಮೈಸೂರು ಕ್ಷೇತ್ರದ ಸಂಸದ ಪ್ರತಾಪ್‍ಸಿಂಹ ಮಾತನಾಡಿ, ತಾನು ರಕ್ಷಣಾ ಸಚಿವರನ್ನು ಸಂಪರ್ಕಿಸಿದ ಸಂದರ್ಭ, ನಿರ್ಮಲಾ ಸೀತಾರಾಮನ್ ಅವರು, ಸ್ವತಃ ಕೊಡಗಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಇಂಗಿತ ವ್ಯಕ್ತಪಡಿಸಿದ್ದರಲ್ಲದೆ, ಇದೀಗ ಪ್ರಧಾನಿಯವರ ಸೂಚನೆ ಮೇರೆಗೆ ಅವರ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿ ಇಲ್ಲಿಗೆ ಆಗಮಿಸಿದ್ದಾರೆ. ಇದಕ್ಕಾಗಿ ಕೊಡಗಿನ ಜನತೆಯ ಪರವಾಗಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರುಗಳು ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಪ್ರದೇಶಗಳಿಗೆ ಭೇಟಿ ಅಲ್ಲಿನ ವಸ್ತುಸ್ಥಿತಿಗಳನ್ನು ಸಚಿವರ ಗಮನಕ್ಕೆ ತಂದಿದ್ದು, ಈ ಸಂಕಷ್ಟಕ್ಕೆ ಎಲ್ಲರೂ ಸೇರಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ತಿಳಿಸಿದರಲ್ಲದೆ, ಕೆಲವು ಮಾಧ್ಯಮಗಳು ಆತಂಕ ಸೃಷ್ಟಿಸುವುದನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಟ್ಟಾಗಿ ಕೊಡಗು ಜಿಲ್ಲೆಯನ್ನು ಕಟ್ಟಬೇಕಾಗಿದ್ದು, ಕೇಂದ್ರ ಸರಕಾರ ಕೊಡಗಿನ ಅಭಿವೃದ್ಧಿಗೆ ಹೆಚ್ಚಿನ ನೆರವನ್ನು ನೀಡಬೇಕು ಎಂದು ಕೋರಿದರು. ಇಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಪರಿಹಾರ ಕಾರ್ಯಗಳನ್ನು ನಡೆಸಿರುವಂತೆ ಮುಂದೆಯೂ ಈ ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ.ಹರೀಶ್ ಅವರು ಜಿಲ್ಲೆಯಲ್ಲಿ ಸುಮಾರು 2ಸಾವಿರ ಕಿ.ಮೀ.ನಷ್ಟು ಗ್ರಾಮೀಣ ರಸ್ತೆಗಳು ಹಾನಿಗೊಳಗಾಗಿದ್ದು, ಕೇಂದ್ರ ಸರಕಾರ ಹೆಚ್ಚಿನ ಅನುದಾನ ನೀಡುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ನೆರವಾಗಬೇಕು ಎಂದು ಹೇಳಿದರು.

ಜನಪ್ರತಿನಿಧಿಗಳ ಅಹವಾಲು ಆಲಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಪ್ರದೇಶಗಳನ್ನು ತಾನು ಕಣ್ಣಾರೆ ಕಂಡಿದ್ದು, ಪ್ರಸಕ್ತ ಮೈಸೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಹೊರತಾಗಿ ಇತರ ಯಾವುದೇ ಸಂಪರ್ಕ ರಸ್ತೆಗಳು ಇಲ್ಲ. ಇಲ್ಲಿನ ವಾಸ್ತವ ಸ್ಥಿತಿಗತಿಗಳ ಬಗ್ಗೆ ಪ್ರಧಾನಿ, ಗೃಹ ಸಚಿವರು ಹಾಗೂ ರಸ್ತೆ ಸಂಪರ್ಕದ ಕುರಿತು ನಿತಿನ್ ಗಡ್ಕರಿ ಅವರುಗಳ ಗಮನ ಸೆಳೆಯುವುದಾಗಿ ನುಡಿದರು.

ಈ ಸಂದರ್ಭ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ ಪನ್ನೇಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News