ಮಲೆನಾಡಿನ ಅಲ್ಲಲ್ಲಿ ಭೂ ಕಂಪನ: ಹಲವೆಡೆ ಮನೆಗಳಿಗೆ ಹಾನಿ

Update: 2018-08-24 13:39 GMT

ಚಿಕ್ಕಮಗಳೂರು, ಆ.24: ಜಿಲ್ಲೆಯಾದ್ಯಂತ ವರುಣನ ಆರ್ಭಟ ಕಡಿಮೆಯಾಗಿದ್ದು, ಮಲೆನಾಡು ತಾಲೂಕುಗಳ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಮಳೆಯಾಗುತ್ತಿರುವುದನ್ನು ಹೊರತು ಪಡಿಸಿ ಧಾರಾಕಾರ ಮಳೆಯಾಗಿರುವ ಬಗ್ಗೆ ವರದಿಯಾಗಿಲ್ಲ. ಆದರೆ ಮಲೆನಾಡಿನಲ್ಲಿ ಮಳೆ ನಿಂತರೂ ಭೂ ಕುಸಿತವು ಇಲ್ಲಿನ ಬಡ ಜನರು, ರೈತಾಪಿ ಜನರನ್ನು ಬೆಂಬಿಡದೇ ಕಾಡುತ್ತಿದೆ.

ಕಳೆದೊಂದು ವಾರದ ಹಿಂದೆ ಮಲೆನಾಡನ್ನು ಬೆಚ್ಚಿ ಬೀಳಿಸಿದ್ದ ವರುಣಾರ್ಭಟ ಐದು ದಿನಗಳಿಂದ ತಣ್ಣಗಾಗಿದೆ. ಆದರೆ ಮಳೆಯಿಂದಾಗುತ್ತಿರುವ ಅವಾಂತರಗಳ ಸರಣಿ ಪ್ರತಿನಿತ್ಯ ಮುಂದುವರೆದಿವೆ. ಜಿಲ್ಲೆಯ ಕೊಪ್ಪ, ಶೃಂಗೇರಿ, ಎನ್.ಆರ್.ಪುರ ಹಾಗೂ ಮೂಡಿಗೆರೆ ತಾಲೂಕುಗಳ ವ್ಯಾಪ್ತಿಯಲ್ಲಿ ಭೂ ಕುಸಿತ, ರಸ್ತೆ ಕುಸಿದು ವಾಹನ ಸಂಚಾರಕ್ಕೆ ತೊಂದರೆ, ಮನೆಗಳಲ್ಲಿ ಬಿರುಕು, ಭೂ ಕಂಪನದಂತಹ ಪ್ರಾಕೃತಿಕ ವಿಕೋಪಗಳ ಸರಣಿ ಮುಂದುವರಿದಿದ್ದು, ಮಲೆನಾಡಿನ ಸಣ್ಣ ರೈತರು, ಬಡ ಜನತೆ ಇದರಿಂದ ಆತಂಕಕ್ಕೊಳಗಾಗಿದ್ದಾರೆ. 

ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಕೆಲವೆಡೆ ಸಾಧಾರಣ ಮಳೆಯಾಗಿದ್ದು, ಶುಕ್ರವಾರ ಬೆಳಗ್ಗಿನಿಂದ ಸಂಜೆವರೆಗೆ ತಾಲೂಕಿನಾದ್ಯಂತ ತುಂತುರು ಮಳೆಯಾದ ಬಗ್ಗೆ ವರದಿಯಾಗಿದೆ. ತಾಲೂಕಿನ ಬೊಗಸೆ ಗ್ರಾಮದಲ್ಲಿ ಕೃಷ್ಣಯ್ಯ ಎಂಬವರ ಮನೆ ಬಿರುಕು ಬಿಟ್ಟಿರುವ ಘಟನೆ ಶುಕ್ರವಾರ ವರದಿಯಾಗಿದ್ದು, ಮನೆಯ ಗೋಡೆಗಳು, ನೆಲ ಹಾಗೂ ಮನೆಯ ಮುಂಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಕುಟುಂಬದ ಸದಸ್ಯರು ಮನೆ ಕುಸಿದು ಬೀಳುವ ಭೀತಿಯಲ್ಲಿದ್ದಾರೆ. ಇನ್ನು ತಾಲೂಕು ವ್ಯಾಪ್ತಿಯ ಚಾರ್ಮಾಡಿಯಲ್ಲಿ ತುಂತುರು ಮಳೆ ಹಾಗೂ ಧಟ್ಟ ಮಂಜಿನ ವಾತಾವರಣದಿಂದಾಗಿ ವಾಹನಸಂಚಾರ ಪ್ರತಿದಿನ ದುಸ್ತವಾಗುತ್ತಿದೆ. 

ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ಶುಕ್ರವಾರ ಬೆಳಗ್ಗಿನಿಂದ ಸಂಜೆಯವರೆಗೆ ತಾಲೂಕು ವ್ಯಾಪ್ತಿಯ ಅಲ್ಲಲ್ಲಿ ತುಂತುರು ಮಳೆ ಸಾಮಾನ್ಯವಾಗಿತ್ತು. ತಾಲೂಕು ವ್ಯಾಪ್ತಿಯ ಹೆಗ್ಗಾರು, ಅಡಿಗೆಬೈಲು, ಹಿರೇಗದ್ದೆ ಗ್ರಾಮಗಳಲ್ಲಿ ಕೆಲ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಮನೆಯ ಸದಸ್ಯರು ಮನೆ ಕುಸಿತದ ಭೀತಿಯಲ್ಲಿ ದಿನಕಳೆಯುತ್ತಿದ್ದಾರೆ. ಇನ್ನು ತಾಲೂಕಿನ ಕೆಲವೆಡೆ ರಸ್ತೆಗಳ ಬದಿಯಲ್ಲಿ ಭೂ ಕುಸಿತ ಉಂಟಾಗಿರುವ ಘಟನೆಗಳೂ ವರದಿಯಾಗಿವೆ.

ಕೊಪ್ಪ ತಾಲೂಕು ವ್ಯಾಪ್ತಿಯಲ್ಲೂ ಶುಕ್ರವಾರ ಭೂ ಕುಸಿತ, ಮನೆಗಳಲ್ಲಿ ಬಿರುಕು ಉಂಟಾದ ಬಗ್ಗೆ ವರದಿಯಾಗಿದೆ. ತಾಲೂಕಿನ ಸೋಮೇಶ್ವರ ಖಾನ್ ಎಂಬಲ್ಲಿ 8 ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಮನೆಯ ಸಮೀಪದಲ್ಲೇ ಭೂ ಕುಸಿತವಾಗಿ ಕಾಫಿ ತೋಟಕ್ಕೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಭೂ ಕುಸಿತದ ವೇಳೆ ಮನೆಯಲ್ಲಿದ್ದ ಪಾತ್ರೆ, ಸಾಮಾನು ಸರಂಜಾಮುಗಳು ನೆಲಕ್ಕುರುಳಿವೆ. ತಾಲೂಕಿನ ಮೇಗುಂದಾ, ಕೊವೆ, ಬಸರಿಕಟ್ಟೆ, ದೂಬ್ಲಾ ಗ್ರಾಮಗಳ ವ್ಯಾಪ್ತಿಯಲ್ಲೂ ಮನೆಗಳಲ್ಲಿ ಬಿರುಕು ಹಾಗೂ ಪ್ರಾಕೃತಿಕ ಅವಘಡಗಳು ನಿರಂತರವಾಗಿ ನಡೆಯುತ್ತಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಸದ್ಯ ಮಳೆಯಾರ್ಭಟ ಕಡಿಮೆಯಾಗಿದೆಯಾದರೂ ಭೂ ಕುಸಿತ, ಭೂ ಕಂಪನ, ಮನೆಗಳಲ್ಲಿ ಬಿರುಕಿನಂತಹ ಘಟನೆಗಳಿಗೆ ಜನತೆ ರೋಸಿ ಹೋಗಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನೆರವಿನ ಹಸ್ತಕ್ಕಾಗಿ ಕಾಯುತ್ತಿದ್ದಾರೆ.

ಮಲೆನಾಡು ಭಾಗಗಳಲ್ಲಿ ಮಳೆ ಕ್ಷೀಣಗೊಂಡ ಬೆನ್ನಲ್ಲೇ ಕೃಷಿ ಚಟಿವಟಿಕೆಗಳು ಭರದಿಂದ ಸಾಗಿವೆ. ಕಾಫಿ ತೋಟಗಳಲ್ಲಿ ಕಸಿ ಕೆಲಸ, ಔಷಧ ಸಿಂಪಡಣೆ ಕೆಲಸ ಬಿರುಸುಗೊಂಡಿದ್ದರೆ, ಅಡಿಕೆ ತೋಟಗಳಲ್ಲಿ ಕೊಳೆ ರೋಗಕ್ಕೆ ಔಷಧ ಸಿಂಪಡಣೆ ಚಟುವಟಿಕೆ ಬಿರುಸಿನಿಂದ ನಡೆಯುತ್ತಿದೆ. ಭತ್ತದ ಗದ್ದೆಗಳಲ್ಲಿ ನಾಟಿ ಕೆಲಸ ಬಹುತೇಕ ಅಂತಿಮ ಹಂತದಲ್ಲಿದೆ. ಮಲೆನಾಡು ಭಾಗದಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದರಿಂದ ಅತೀವೃಷ್ಟಿಗೆ ಕಾಫಿ, ಕಾಳು ಮೆಣಸು, ಅಡಿಕೆ ಫಸಲು ಬಹುತೇಕ ನೆಲಕ್ಕಚ್ಚಿರುವುದರಿಂದ ರೈತರು, ಬೆಳೆಗಾರರು ಸರಕಾರದ ಪರಿಹಾರಕ್ಕಾಗಿ ಎದುರು ನೋಡುವ ಸ್ಥಿತಿ ಬಂದೊದಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News