"ಜೀವಂತವಿದ್ದಾಗ ತಿರುಗಿ ನೋಡದ ಮೋದಿ, ವಾಜಪೇಯಿ ನಿಧನರಾದ ಬಳಿಕ ನಾಟಕ ಆಡುತ್ತಿದ್ದಾರೆ"

Update: 2018-08-24 13:56 GMT

ಕಲಬುರ್ಗಿ, ಆ 24: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಾವಿನ ವಿಚಾರದಲ್ಲಿ ಪ್ರಧಾನಿ ಮೋದಿ ನಾಟಕ ಮಾಡುತ್ತಿರುವುದನ್ನು ಮೊದಲು ನಿಲ್ಲಿಸಬೇಕು ಎಂದು ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಪೇಯಿ ಅವರು ಬದುಕಿದ್ದಾಗ ಮೋದಿ ಅವರನ್ನು ಎಷ್ಟು ಬಾರಿ ಭೇಟಿ ಮಾಡಿದ್ದಾರೆ. ಜೀವಂತ ಇರುವ ವೇಳೆ ಅವರ ಕಡೆ ತಿರುಗಿ ನೋಡದ ಮೋದಿ, ಅವರ ನಿಧನರಾದ ಬಳಿಕ ನಾಟಕ ಆಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.

‘ರಾಜಧರ್ಮ’ ಹೇಳಿಕೊಟ್ಟ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಎದುರಿಗೆ ಬಂದರೂ, ನಮಸ್ಕರಿಸಿದರೂ ತಿರುಗಿಯೂ ನೋಡದ ಪ್ರಧಾನಿ ಮೋದಿ, ವಾಜಪೇಯಿ ನಿಧನದ ಬಳಿಕ ಇನ್ನಿಲ್ಲದ ಪ್ರಹಸನ ನಡೆಸುತ್ತಿದ್ದಾರೆಂದ ಅವರು, ವಾಜಪೇಯಿ ಸಾವು ನಮಗೆ ಆಘಾತ ತಂದಿದೆ. ಆದರೆ, ನಾವು ಇದರಲ್ಲಿ ರಾಜಕೀಯ ಮಾಡಲು ಹೋಗುವುದಿಲ್ಲ. ಹಾಗೆಂದು ಪ್ರಧಾನಿ ಮೋದಿ ಮಾಡುವ ನಾಟಕಗಳನ್ನೆಲ್ಲಾ ನೋಡುತ್ತಾ ಕೂರುವುದಿಲ್ಲ ಎಂದ ಅವರು, ಆರೆಸೆಸ್ಸ್-ಬಿಜೆಪಿ ಜತೆ ಗುರುತಿಸಿಕೊಂಡಿದ್ದ ವಾಜಪೇಯಿ ಸರ್ವಧರ್ಮ ಸಹಿಷ್ಣುತೆಯಿಂದ ಬದುಕಿದರು. ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟಿದ್ದ ವ್ಯಕ್ತಿ ಎಂದು ಸ್ಮರಿಸಿದರು.

ಕೇರಳಕ್ಕೆ, ಕೇಂದ್ರ ಸರಕಾರ 2 ಸಾವಿರ ಕೋಟಿ ರೂ.ನೆರವು ನೀಡಿದ್ದರೆ, ಬೇರೆ ದೇಶಗಳಿಂದ ನೆರವು ಕೇಳುವ ಪ್ರಶ್ನೆಯೇ ಉದ್ಬವಿಸುತ್ತಿರಲಿಲ್ಲ ಎಂದ ಖರ್ಗೆ, ಕೇರಳ ಮಾದರಿಯಲ್ಲೆ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಗೂ ಕೇಂದ್ರ ಸರಕಾರ ನೆರವು ನೀಡಬೇಕು ಎಂದು ಆಗ್ರಹಿಸಿದರು.

ಕಲಬುರಗಿ ವಿಮಾನ ನಿಲ್ದಾಣದಿಂದ ಆ.26 ರಿಂದ ಪ್ರಾಯೋಗಿಕ ವಿಮಾನ ಹಾರಾಟ ಮಾಡಲಾಗುವುದು. ಸೇಡಂ ರಸ್ತೆಯ ಶ್ರೀನಿವಾಸ ಸರಡಗಿ ಬಳಿಯಿರುವ ವಿಮಾನ ನಿಲ್ದಾಣದ ಪ್ರಾಯೋಗಿಕ ಸಂಚಾರಕ್ಕಾಗಿ ಎಲ್ಲ ಸಿದ್ಧತೆಗಳು ಮುಗಿದಿದೆ. ಪ್ರಾಯೋಗಿಕ ಸಂಚಾರ ಮಾಡಲು ಭಾರತದ ವಿಮಾನಯಾನ ಪ್ರಾಧಿಕಾರ ಅನುಮತಿ ನೀಡಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News