ಎಲ್ಲ ವಿದ್ಯಾರ್ಥಿಗಳಿಗೆ ಎನ್ನೆಸೆಸ್ ಕಡ್ಡಾಯಕ್ಕೆ ಚಿಂತನೆ: ಡಾ.ಜಿ.ಪರಮೇಶ್ವರ್

Update: 2018-08-24 13:47 GMT

ಬೆಂಗಳೂರು, ಆ. 24: ಸ್ನಾತಕೋತ್ತರ, ಪದವಿ, ಪದವಿ ಪೂರ್ವ ಸಹಿತ ಎಲ್ಲ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನೆ(ಎನ್ನೆಸೆಸ್)ಯಲ್ಲಿ ತೊಡಗಿಸಿಕೊಳ್ಳಲು ಎನ್ನೆಸೆಸ್ ಕಡ್ಡಾಯಗೊಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಡಿಸಿಎಂ ಹಾಗೂ ಕ್ರೀಡಾ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಷ್ಟ್ರೀಯ ಸೇವಾ ಯೋಜನಾ ಸಲಹಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎನ್ನೆಸೆಸ್‌ಗೆ ಹೆಚ್ಚಾಗಿ ಬಡ ಮತ್ತು ಮಧ್ಯಮದ ವರ್ಗದ ವಿದ್ಯಾರ್ಥಿಗಳೇ ಸೇರುತ್ತಾರೆ. ಅನುಕೂಲಸ್ಥ ವಿದ್ಯಾರ್ಥಿಗಳು ಇದರಿಂದ ದೂರು ಉಳಿಯುತ್ತಿದ್ದಾರೆ. ಎಲ್ಲ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಿದಾಗ ಸಂಸ್ಕೃತಿ, ಉತ್ತಮ ನಡವಳಿಕೆ ರೂಢಿಸಿಕೊಳ್ಳುವ ದೃಷ್ಟಿಯಿಂದ ಎನ್ನೆಸೆಸ್ ಕಡ್ಡಾಯಗೊಳಿಸುವುದು ಸೂಕ್ತ ಎಂದು ಅಭಿಪ್ರಾಯವಿದೆ. ಹೀಗಾಗಿ ಸಮಾಲೋಚನೆ ನಡೆಸಿ ಎನ್ನೆಸೆಸ್ ಕಡ್ಡಾಯಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು ಎಂದರು.

ಬದಲಾವಣೆ ಅಗತ್ಯ: ಎನ್ನೆಸೆಸ್ ಜಾರಿಗೆ ಬಂದು 50 ವರ್ಷಗಳಾಗುತ್ತಿದ್ದು, ಯುವಕರು ಭವಿಷ್ಯವನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಸಂಪೂರ್ಣ ಬದಲಾವಣೆ ಅಗತ್ಯ. ನಮ್ಮ ಸಂಸ್ಕೃತಿ, ರಾಷ್ಟ್ರೀಯತೆಯೊಂದಿಗೆ ಕಾನೂನು, ಕೌಶಲ್ಯಾಭಿವೃದ್ಧಿ, ಉದ್ಯೋಗದ ಬಗ್ಗೆಯೂ ಅರಿವು ಮೂಡಿಸಬೇಕು ಎಂದು ಅವರು ಸಲಹೆ ನೀಡಿದರು. ರಾಷ್ಟ್ರೀಯ ಸೇವಾ ಯೋಜನೆ ಕಾರ್ಯ ಚಟುವಟಿಕೆಗಳನ್ನು ಮತ್ತಷ್ಟು ಬಲಿಷ್ಟ ಗೊಳಿಸಬೇಕು. ಜೊತೆಗೆ ಎಲ್ಲ ವಿದ್ಯಾರ್ಥಿಗಳನ್ನು ಇದರಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಕ್ರೀಡೆ, ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಸಮನ್ವಯತೆಯಿಂದ ಸಮಿತಿ ರಚಿಸಿ, ಅಗತ್ಯ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ವಿದ್ಯಾರ್ಥಿಗಳ ನೆರವು: ಕೊಡಗಿನ ನಿರಾಶ್ರಿತರ ನೆರವಿಗೆ ಮಂಗಳೂರು, ಮೈಸೂರು ಸೇರಿ ಆ ಭಾಗದ ಎನ್ನೆಸೆಸ್ ವಿದ್ಯಾರ್ಥಿಗಳು ಧಾವಿಸಿದ್ದು, ಸ್ವಚ್ಛತೆ ಹಾಗೂ ಪುನರ್ವಸತಿ ಕಾರ್ಯದಲ್ಲಿ ತೊಡಗಿದ್ದಾರೆ ಎಂದ ಅವರು, ಎನ್ನೆಸೆಸ್ ವಿದ್ಯಾರ್ಥಿಗಳ ಪಾಲ್ಗೊಳ್ಳುವ ಬಗ್ಗೆ ಎಲ್ಲ ವಿವಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಡಾ.ರಜನೀಶ್ ಗೋಯೆಲ್, ಎನ್ನೆಸೆಸ್‌ನ ಅಧಿಕಾರಿ ಡಾ.ಗಣನಾಥ ಶೆಟ್ಟಿ ಎಕ್ಕಾರು, ಪ್ರಾಂತೀಯ ನಿರ್ದೇಶಕ ಡಿ.ಕಾರ್ತಿಕೇಯನ್ ಸೇರಿದಂತೆ ವಿಶ್ವ ವಿದ್ಯಾಲಯಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

‘ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನೇ ಯುವ ಸಮೂಹ ಮರೆತಿದೆ. ನಾವಿಂದು ಯುವಕರನ್ನು ನಿರ್ಲಕ್ಷಿಸಿ ಆ ಫಲವನ್ನು ಉಣ್ಣುತ್ತಿದ್ದೇವೆ. ಹೀಗಾಗಿ, ಅವರನ್ನು ಹೆಚ್ಚೆಚ್ಚು ಎನ್ನೆಸೆಸ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು’

-ಡಾ.ಜಿ.ಪರಮೇಶ್ವರ್ ಉಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News