ಸಕ್ರಿಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ ?

Update: 2018-08-24 14:03 GMT

ಬೆಂಗಳೂರು, ಆ.24: ಕಳೆದ ಐದು ದಶಕಗಳಿಂದ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ, ಸ್ಪೀಕರ್, ರಾಜ್ಯಪಾಲ, ಕೇಂದ್ರ ಸಚಿವ ಹೇಗೆ ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದ ಹಿರಿಯ ರಾಜಕೀಯ ಮುಖಂಡ ಎಸ್.ಎಂ.ಕೃಷ್ಣ ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸೆಪ್ಟಂಬರ್ ವೇಳೆಗೆ ಎಸ್.ಎಂ.ಕೃಷ್ಣ ಅವರ ಆತ್ಮ ಚರಿತ್ರೆ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಆನಂತರ ಸಕ್ರಿಯ ರಾಜಕಾರಣಕ್ಕೆ ಅಧಿಕೃತವಾಗಿ ವಿದಾಯ ಹೇಳಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಐದು ದಶಕಗಳ ಕಾಲ ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಿದ್ದ ಎಸ್.ಎಂ.ಕೃಷ್ಣ, ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.

ಬಿಜೆಪಿಯಲ್ಲಿ ಎಸ್.ಎಂ.ಕೃಷ್ಣಗೆ ಸೂಕ್ತ ಸ್ಥಾನಮಾನ ನೀಡಿ, ಅವರ ರಾಜಕೀಯ ಅನುಭವವನ್ನು ಪಕ್ಷ ಸಂಘಟನೆಗಾಗಿ ಬಳಸಿಕೊಳ್ಳುವುದಾಗಿ ಆ ಪಕ್ಷದ ಮುಖಂಡರು ಹೇಳಿಕೆಗಳನ್ನು ನೀಡುತ್ತಲೆ ಬಂದಿದ್ದಾರೆಯೆ ಹೊರತು, ಈವರೆಗೆ ಎಸ್.ಎಂ.ಕೃಷ್ಣಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡಲಾಗಿಲ್ಲ. ಈ ಹಿನ್ನೆಲೆಯಲ್ಲಿ ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿ, ವಿಶ್ರಾಂತ ಜೀವನ ನಡೆಸಲು ಎಸ್.ಎಂ.ಕೃಷ್ಣ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಎಸ್.ಎಂ.ಕೃಷ್ಣ ಬಿಜೆಪಿ ಸೇರ್ಪಡೆಯಾದ ಸಂದರ್ಭದಲ್ಲಿ ಅವರಿಗೆ ಉಪರಾಷ್ಟ್ರಪತಿ ಅಥವಾ ಕೇಂದ್ರ ಸರಕಾರದಲ್ಲಿ ಸಚಿವ ಸ್ಥಾನ ಸಿಗಬಹುದು ಎಂದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗಳು ನಡೆದಿದ್ದವು. ಆದರೆ, ಈವರೆಗೆ ಅಂತಹ ಯಾವುದೆ ಸ್ಥಾನಮಾನ ಅವರಿಗೆ ಸಿಕ್ಕಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News