ಕೊಡಗು ಪ್ರವಾಹ ಸಂತ್ರಸ್ತರಿಗೆ ಸರಕಾರಿ ನೌಕರರ ಸಂಘದಿಂದ 102 ಕೋಟಿ ರೂ.ದೇಣಿಗೆ: ಜಿ.ಟಿ.ದೇವೇಗೌಡ

Update: 2018-08-24 14:15 GMT

ಬೆಂಗಳೂರು, ಆ.24: ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ 5.25 ಲಕ್ಷ ಉದ್ಯೋಗಿಗಳ ಒಂದು ದಿನದ ವೇತನ ಸುಮಾರು 102 ಕೋಟಿ ರೂ.ಗಳನ್ನು ಕೊಡಗು ಜಿಲ್ಲೆಯಲ್ಲಿನ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಮುಖ್ಯಮಂತ್ರಿಯ ಪ್ರಕೃತಿ ವಿಕೋಪ ನಿಧಿಗೆ ಹಸ್ತಾಂತರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ಶುಕ್ರವಾರ ಮುಖ್ಯಮಂತ್ರಿಯ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲ ಸರಕಾರಿ ನೌಕರರು ಒಂದು ದಿನದ ವೇತನವನ್ನು ನೀಡುವುದಾಗಿ ಹೇಳಿದ್ದರು. ಅದರಂತೆ, ಇಂದು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮುಖ್ಯಮಂತ್ರಿಯ ಪ್ರಕೃತಿ ವಿಕೋಪ ನಿಧಿಗೆ ಹಸ್ತಾಂತರಿಸಲಾಗಿದೆ ಎಂದರು.

ಕೊಡಗು ಜಿಲ್ಲೆಯಲ್ಲಿ ಪರಿಹಾರ ಕಾರ್ಯಗಳು ತ್ವರಿತವಾಗಿ ನಡೆಯಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರಕಾರವು ಕೊಡಗು ಜಿಲ್ಲೆಯ ಜನರ ಜೊತೆಯಿದೆ. ವಸತಿ ಸಚಿವ ಯು.ಟಿ.ಖಾದರ್ ಕೊಡಗು ಜಿಲ್ಲೆಯಲ್ಲೆ ಉಳಿದುಕೊಂಡು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಈ ಮಾತು ಹೇಳಿರಬಹುದು ಎಂದರು.

ಸಿದ್ದರಾಮಯ್ಯ 40 ವರ್ಷಗಳ ಅನುಭವ ಇರುವ ರಾಜಕಾರಣಿ. ಹಾಸನದಲ್ಲಿ ಅವರು ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅವರು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿರಬಹುದು. ಆದುದರಿಂದ, ಕಾಲಚಕ್ರದ ಬಗ್ಗೆ ಮಾತನಾಡಿದ್ದಾರೆ. ಅದನ್ನೆ ದೊಡ್ಡದಾಗಿ ಬಿಂಬಿಸುವ ಅಗತ್ಯವಿಲ್ಲ ಎಂದು ಜಿ.ಟಿ.ದೇವೇಗೌಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News