ರಾಜಸ್ಥಾನ ಪತ್ರಕರ್ತನ ಬಂಧನ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶ

Update: 2018-08-24 14:42 GMT

ಪಾಟ್ನಾ,ಆ.24: ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಇಲ್ಲಿಯ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಬಾರ್ಮೇರ್ ನಿವಾಸಿಯಾಗಿರುವ ಪತ್ರಕರ್ತ ದುರ್ಗ ಸಿಂಗ್ ರಾಜಪುರೋಹಿತ ಅವರನ್ನು ತಪ್ಪಾಗಿ ಬಂಧಿಸಲಾಗಿದೆಯೆಂಬ ಮಾಧ್ಯಮಗಳಲ್ಲಿಯ ವರದಿಗಳ ಕುರಿತು ಪೊಲೀಸ್ ಮುಖ್ಯ ಕಚೇರಿಯು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು,ಪಾಟ್ನಾ ವಲಯದ ಐಜಿಪಿ ನೈಯಾರ್ ಹಸನೈನ್ ಖಾನ್ ಅವರು ಈ ತನಿಖೆಯನ್ನು ನಡೆಸಲಿದ್ದಾರೆ.

ರಾಜಪುರೋಹಿತ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಾಗಿದ್ದು, ನ್ಯಾಯಾಲಯವು ಹೊರಡಿಸಿದ್ದ ಆದೇಶದ ಮೇರೆಗೆ ಅವರನ್ನು ಬಂಧಿಸಲಾಗಿದೆ. ವಾಸ್ತವದಲ್ಲಿ ವಿಷಯವು ಬಿಹಾರ ಪೊಲೀಸರಿಗೆ ಸಂಬಂಧಿಸಿದ್ದಲ್ಲ,ಹೀಗಾಗಿ ವಿಚಾರಣೆಯು ಆಡಳಿತಾತ್ಮಕ ಸ್ವರೂಪದ್ದಾಗಿರುತ್ತದೆ ಎಂದು ಖಾನ್ ಸುದ್ದಿಗಾರರಿಗೆ ತಿಳಿಸಿದರು.

ಜಿಲ್ಲೆಯ ದಿಘಾ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ರಾಕೇಶ ಪಾಸ್ವಾನ್ ರಾಜಪುರೋಹಿತ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಮೇ 31ರಂದು ದೂರು ದಾಖಲಿಸಿದ್ದರು. ತಾನು ರಾಜಪುರೋಹಿತಗಾಗಿ ಕೆಲಸ ಮಾಡುತ್ತಿದ್ದು,ಅವರು ನಿಯಮಿತವಾಗಿ ವೇತನ ನೀಡುತ್ತಿರಲಿಲ್ಲ ಮತ್ತು ಆಗಾಗ್ಗೆ ತನ್ನನ್ನು ಥಳಿಸುತ್ತಿದ್ದರು. ಮೇ 7ರಂದು ತನ್ನ ಕೆಲವು ಸಹಚರರೊಂದಿಗೆ ತನ್ನ ಮನೆಗೆ ಬಂದು ತನ್ನನ್ನು ಥಳಿಸಿ ಅವಾಚ್ಯಶಬ್ದಗಳಿಂದ ನಿಂದಿಸಿದ್ದರು ಎಂದು ಪಾಸ್ವಾನ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News