ಕೊಡಗು ಪ್ರವಾಹದಿಂದಾಗಿ ನಿಲ್ಲುವ ಭೀತಿಯಲ್ಲಿದ್ದ ವಿವಾಹ: ನಿಗದಿಯಂತೆ ನಡೆಯಲಿದೆ ಶುಭ ಕಾರ್ಯ

Update: 2018-08-24 15:11 GMT

ಮಡಿಕೇರಿ, ಆ.24: ತಾಲೂಕಿನ ಮಕ್ಕಂದೂರಿನ ನಿವಾಸಿ ರಾಣಿ ಮನೆ ಪೈಸಾರಿಯಲ್ಲಿ ವಾಸವಿರುವ ಬೇಬಿ ಹಾಗೂ ದಿವಂಗತ ರವಿಯವರ ಪುತ್ರಿ ಮಂಜುಳಾರವರ ವಿವಾಹವು ಇದೇ ಆಗಸ್ಟ್ 26 ರಂದು ಮಕ್ಕಂದೂರಿನ ವಿ.ಎಸ್.ಎಸ್.ಎಲ್ ಹಾಲ್‍ನಲ್ಲಿ ನಡೆಸಲು ನಿಶ್ಚಯವಾಗಿತ್ತು, ಇನ್ನೇನು ಕೆಲವೇ ದಿನಗಳು ಇದೆ ಎನ್ನುವಾಗ ಯಾರೂ ಕಂಡರಿಯದ ಕೊಡಗಿನ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡು ನಗರದ ಬ್ರಾಹ್ಮಣರ ಕಲ್ಯಾಣ ಮಂಟಪದಲ್ಲಿನ ನಿರಾಶ್ರಿತರ ಕೇಂದ್ರವಾದ ಸೇವಾ ಭಾರತಿಯಲ್ಲಿ ಕುಟುಂಬ ಆಶ್ರಯ ಪಡೆಯವಂತಾಯಿತು.

ಮದುವೆಯನ್ನು ನಿಲ್ಲಿಸಬೇಕೆಂದಿರುವಾಗ ಲಯನ್ಸ್ ಕ್ಲಬ್ ಮಡಿಕೇರಿಯ ಸದಸ್ಯರು ಹಾಗೂ ಸೇವಾ ಭಾರತಿಯ ಸದಸ್ಯರು ಪೂರ್ವ ನಿಗದಿಯಾದಂತೆ ಅದೇ ಮುಹೂರ್ತದಲ್ಲಿ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಸ್ಥಾನದಲ್ಲಿ ಆ.26ನೇ ಭಾನುವಾರ 10.30 ಗಂಟೆಗೆ ಸರಿಯಾಗಿ ವಿವಾಹವನ್ನು ಏರ್ಪಡಿಸಲು ನಿಶ್ಚಯಿಸಿದ್ದಾರೆ. ಅಲ್ಲದೆ 12 ಗಂಟೆಗೆ ಗೆಜ್ಜೆ ಸಂಗಪ್ಪ ಕಲ್ಯಾಣ ಮಂಟಪದಲ್ಲಿ ನವ ದಂಪತಿಗಳಿಗೆ ಶುಭಾಶಯ ಕೋರುವ ಕಾರ್ಯಕ್ರಮ ನಡೆಸಲು ಲಯನ್ ಕೆ.ಟಿ ಬೇಬಿ ಮ್ಯಾಥ್ಯುರವರ ಅಧ್ಯಕ್ಷತೆಯಲ್ಲಿ ನಡೆದ ಮದುವೆಯ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಸಭೆಯಲ್ಲಿ ಲಯನ್ಸ್ ಕ್ಲಬ್‍ನ ಅಧ್ಯಕ್ಷರಾದ ಕೆ.ಕೆ.ದಾಮೋದರ್, ಖಜಾಂಚಿ ಬಿ.ಸಿ ನಂಜಪ್ಪ, ಕಾರ್ಯದರ್ಶಿ ಸೋಮಣ್ಣನವರು ಸದಸ್ಯರಾದ ಮದುಕರ್, ಉಳ್ಳಾಗಡ್ಡಿ, ಮೋಹನ್ ದಾಸ್, ಲಯನ್ನೆಸ್ ಪ್ರೇಮ ಅಲ್ಲದೇ ಸೇವಾ ಭಾರತಿಯ ರಾಕೇಶ್, ರಾಜೇಶ್, ಸವಿತಾ ರಾಕೇಶ್, ಅಜಯ್, ರಂಜಿತ್, ವಿ.ವಿ ಅರವಿಂದ್, ಬಿ.ವಿ ಹರೀಶ್ ಇನ್ನಿತರರು ಉಪಸ್ಥಿತರಿದ್ದರು. 

ಕಳೆದ 7 ದಿನಗಳ ಹಿಂದೆ ಸುರಿದ ಮರಣ ಮಳೆಗೆ ಇಡೀ ಮಕ್ಕಂದೂರು ಗ್ರಾಮವೇ ತತ್ತರಿಸಿ ಹೋಗಿತ್ತು. ಈ ಭಾಗದ ಮೇಘತ್ತಾಳು ಮತ್ತು ಹೆಮ್ಮೆತ್ತಾಳು ಗ್ರಾಮಗಳು ಭೂಕುಸಿತದಿಂದ ನಾಮಾವಶೇಷಗೊಂಡವು. ಕ್ಷಣಕ್ಷಣಕ್ಕೂ ಬೆಟ್ಟ ಕುಸಿಯುತ್ತಿದ್ದುದರಿಂದ ಊರಿಗೆ ಊರೇ ಸ್ಥಳಾಂತರಗೊಂಡಿತು. ಈ  ಪೈಕಿ ಮಕ್ಕಂದೂರು ರಾಟೆಮನೆ ಪೈಸಾರಿ ನಿವಾಸಿಗಳದ ಸುಮಿತ್ರ - ಸಂಜೀವ ದಂಪತಿ ಕುಟುಂಬ ಹಾಗೂ ಬೇಬಿ ಮತ್ತು ಮಕ್ಕಳ ಕುಟುಂಬವೂ ಸೇರಿತ್ತು. ವಿಪರ್ಯಾಸವೆಂದರೆ ಈ ಎರಡು ಬಡ ಕುಟುಂಬಗಳು ತಮ್ಮ ಮನೆಗಳ ಹೆಣ್ಣು ಮಕ್ಕಳ ವಿವಾಹಕ್ಕೆ ದಿನವನ್ನು ಕೂಡ ಗೊತ್ತು ಮಾಡಿದ್ದರು. ಈ ಪೈಕಿ ಬೇಬಿ ಅವರ ಮಗಳು ಮಂಜುಳಾ ಅವರ ವಿವಾಹ ಆಗಸ್ಟ್ 26 ರ ಭಾನುವಾರ ನಿಗದಿಯಾಗಿತ್ತಲ್ಲದೆ, ಮಕ್ಕಂದೂರು ವಿಎಸ್‍ಎಸ್‍ಎನ್ ಸಭಾಂಗಣದಲ್ಲಿ ಮದುವೆ ನಡೆಯಬೇಕಿತ್ತು.

ಆದರೆ ಭೂ ಕುಸಿತದಿಂದ ಮನೆ, ಮದುವೆಗೆ ಮಾಡಿಟ್ಟ ಚಿನ್ನ, ಬಟ್ಟೆ ಎಲ್ಲವೂ ಭೂ ಸಮಾಧಿಯಾಗಿತ್ತು. ಉಟ್ಟ ಬಟ್ಟೆಯಲ್ಲೇ ಬಡ ಕುಟುಂಬ ಎಲ್ಲವನ್ನು ಕಳೆದುಕೊಂಡು ನಿರಾಶ್ರಿತರ ಶಿಬಿರ ಸೇರಿತ್ತು. ತಂಗಿಯ ಮದುವೆಯನ್ನು ಅದ್ದೂರಿಯಾಗಿ ಮಾಡುವ ಕನಸು ಕಂಡಿದ್ದ ಅಣ್ಣ ಕುಸಿದು ಹೋಗಿದ್ದ. ದಾಂಪತ್ಯ ಬದುಕಿಗೆ ದಿನ ಎಣಿಸುತ್ತಿದ್ದ ಮಧುಮಗಳು ಮಂಜುಳಾ ನಿರಾಶ್ರಿತರ ಕೇಂದ್ರದಲ್ಲಿ ತನ್ನ ಬದುಕು ಹೀಗಾಯಿತಲ್ಲಾ ಎಂದು ಕೊರಗುತ್ತಾ ದಿನ ದೂಡುತ್ತಿದ್ದಳು.

ಇತ್ತ ಕಡೆ ಸೆಪ್ಟೆಂಬರ್ 12 ರಂದು ನಿಗಧಿಯಾಗಿದ್ದ ಸುಮಿತ್ರ-ಸಂಜೀವಾ ದಂಪತಿಗಳ ಪುತ್ರಿಯ ವಿವಾಹವೂ ಅತಂತ್ರವಾಯಿತು. ಭೂ ಸಮಾಧಿಯಾದ ಮನೆಯೊಳಗೆ ಮಧುಮಗಳು ರಂಜಿತಾಳ ವಿವಾಹದ ಕನಸುಗಳು ಕೂಡ ನುಚ್ಚುನೂರಾಗಿತ್ತು. ಬಡ ಕುಟುಂಬಗಳು ತುತ್ತು ಅನ್ನಕ್ಕೂ ಪರಿತಪಿಸುತ್ತಾ ರಾತ್ರಿ ಬೆಳಗಾಗುವುದರೊಳಗೆ ನಿರ್ಗತಿಕರಾಗಿ ನಿರಾಶ್ರಿತರ ಕೇಂದ್ರ ಸೇರಿದವು. ಹೀಗೆ ಬಂದ ಕುಟುಂಬಗಳಿಗೆ ಸೇವಾಭಾರತಿ ಸಂಸ್ಥೆ ಆಶ್ರಯ ನೀಡಿತು.
ಆ ಬಳಿಕ ಹಲವು ಸಂಘ ಸಂಸ್ಥೆಗಳು ನೆರವು ನೀಡಲು ಮುಂದಾದವು. ಸೇವಾ ಭಾರತಿ ಸಂಸ್ಥೆಯು ಈ ಬಡ ಹೆಣ್ಣು ಮಕ್ಕಳ ವಿವಾಹವನ್ನು ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ನಿಗದಿಪಡಿಸಿದ ದಿನದಲ್ಲೇ ನಡೆಸಲು ತೀರ್ಮಾನಿಸಿತು. ಇದಕ್ಕಾಗಿ ಸಚಿವ ಸಾ.ರಾ.ಮಹೇಶ್ ಆರ್ಥಿಕ ಸಹಾಯ ನೀಡಿದ್ದಾರೆ. ಓಂಕಾರೇಶ್ವರ ಸನ್ನಿಧಿಯಲ್ಲಿ ಈ ಹೆಣ್ಣು ಮಕ್ಕಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಮಕ್ಕಂದೂರು ರಾಟೆಮನೆ ಪೈಸಾರಿ ನಿವಾಸಿ ಬೇಬಿ ಅದರ ಪುತ್ರಿ ಮಂಜುಳಾ ಅವರ ವಿವಾಹ ಆ.26ರ ಭಾನುವಾರ ಬೆಳಿಗ್ಗೆ ಮಡಿಕೇರಿಯ ಓಂಕಾರೇಶ್ವರ ಸನ್ನಿಧಿಯಲ್ಲಿ ನಡೆಯಲಿದೆ. ನಗರದ ಗೆಜ್ಜೆಸಂಗಪ್ಪ ಕಲ್ಯಾಣ ಮಂಟಪದಲ್ಲಿ ಊಟೋಪಚಾರದ ವ್ಯವಸ್ಥೆ ಏರ್ಪಡಿಸಲಾಗಿದೆ. ಮಂಜುಳಾ ಕೇರಳ ಕೂತುಪರುಂಬು ನಿವಾಸಿ ರಜೀಶ್ ಅವರನ್ನು ವರಿಸಲಿದ್ದಾರೆ.

ಸುಮಿತ್ರಾ -ಸಂಜೀವಾ ದಂಪತಿಗಳು ಪುತ್ರಿ ರಂಜಿತಾಳ ವಿವಾಹ ಸೆಪ್ಟೆಂಬರ್ 12 ರಂದು ಓಂಕಾರೇಶ್ವರ ದೇವಾಲಯದಲ್ಲಿ ನೆರವೇರಲಿದೆ. ಕೇರಳ ಕಣ್ಣೂರು ಜಿಲ್ಲೆಯ ರಂಜಿತ್ ಎಂಬವರನ್ನು ವರಿಸಲಿದ್ದಾರೆ. ಈ ಎರಡು ಬಡ ಕುಟುಂಬಗಳ ಹೆಣ್ಣು ಮಕ್ಕಳಿಗೆ ಸೇವಾ ಭಾರತಿ ಆಸರೆಯಾಗಿ ನಿಂತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News