ಲಾಲೂ ಜಾಮೀನು ಅವಧಿ ವಿಸ್ತರಣೆಗೆ ಹೈಕೋರ್ಟ್ ನಕಾರ

Update: 2018-08-24 16:02 GMT

ಪಾಟ್ನ, ಆ.24: ಅಸೌಖ್ಯದ ಹಿನ್ನೆಲೆಯಲ್ಲಿ ತನಗೆ ಮಂಜೂರುಗೊಳಿಸಲಾದ ತಾತ್ಕಾಲಿಕ ಜಾಮೀನು ಅವಧಿಯನ್ನು ಮತ್ತೆ ಮೂರು ತಿಂಗಳು ವಿಸ್ತರಿಸಬೇಕೆಂದು ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾದವ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಜಾರ್ಖಂಡ್ ಹೈಕೋರ್ಟ್, ಆಗಸ್ಟ್ 30ರ ಒಳಗೆ ಜೈಲಿಗೆ ಹಿಂತಿರುಗುವಂತೆ ಸೂಚಿಸಿದೆ.

1990ರಲ್ಲಿ ಬಿಹಾರದಲ್ಲಿ ನಡೆದ ಬಹುಕೋಟಿ ಮೊತ್ತದ ಮೇವು ಹಗರಣದಲ್ಲಿ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಲಾಲೂ ಜೈಲುಶಿಕ್ಷೆಗೆ ಒಳಗಾಗಿದ್ದರು. ಆದರೆ ಅಸೌಖ್ಯದ ಕಾರಣ ಮೇ 11ರಂದು 6 ವಾರಗಳ ತಾತ್ಕಾಲಿಕ ಜಾಮೀನು ಮಂಜೂರುಗೊಳಿಸಿ ಅವರನ್ನು ಮುಂಬೈಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬಳಿಕ ಜಾಮೀನು ಅವಧಿಯನ್ನು ಆಗಸ್ಟ್ 10ರವರೆಗೆ, ನಂತರ ಆಗಸ್ಟ್ 27ರವರೆಗೆ ವಿಸ್ತರಿಸಲಾಗಿದೆ. ಆದರೆ ಮತ್ತೆ ವಿಸ್ತರಿಸಬೇಕೆಂಬ ಮನವಿಯನ್ನು ತಿರಸ್ಕರಿಸಿರುವ ಜಾರ್ಖಂಡ್ ಹೈಕೋರ್ಟ್‌ನ ನ್ಯಾಯಾಧೀಶರು ಆಗಸ್ಟ್ 30ರೊಳಗೆ ಸಿಬಿಐ ನ್ಯಾಯಾಲಯದಲ್ಲಿ ಶರಣಾಗುವಂತೆ ಆದೇಶಿಸಿದ್ದಾರೆ. ಅಲ್ಲದೆ ಅಗತ್ಯಬಿದ್ದಾಗ ಸೂಕ್ತ ವೈದ್ಯಕೀಯ ಚಿಕಿತ್ಸೆ ವ್ಯವಸ್ಥೆಗೊಳಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News