ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸಬೇಕು: ಕಾರ್ಯಕರ್ತರಿಗೆ ದಿನೇಶ್ ಗುಂಡೂರಾವ್ ಕರೆ

Update: 2018-08-24 16:03 GMT

ಮಂಡ್ಯ, ಆ.24: ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಸಾಧನೆಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವ ಮೂಲಕ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆ ಸಂಬಂಧ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಎ.ಸಿ.ಮಾದೇಗೌಡ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರಕಾರ ಎಲ್ಲಾ ವರ್ಗದವರಿಗೂ ನ್ಯಾಯ ನೀಡುವ ಮೂಲಕ ಗಮನ ಸೆಳೆದಿತ್ತು. ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿತ್ತು. ಆದರೆ, ಕಾರ್ಯಕರ್ತರು ಸರಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಸೋಲುಂಟಾಯಿತು ಎಂದು ಅವರು ವಿಷಾದಿಸಿದರು.

ಮಂಡ್ಯದ ಜನತೆಗೆ ರಾಜಕೀಯ ಚೆನ್ನಾಗಿ ಗೊತ್ತಿದೆ. ಎಲ್ಲಾ ವಿಷಯಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿ ಇದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಸಮ್ಮಿಶ್ರ ಸರಕಾರ ರಚನೆಯಾಗಿದೆ. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದರು.

ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ನಗರಸಭೆಯಲ್ಲಿ ಹೆಚ್ಚು ಬಾರಿ ಕಾಂಗ್ರೆಸ್ ಆಡಳಿತ ನಡೆಸಿದೆ. ನಾನು ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ಜೆಡಿಎಸ್ ಅಧಿಕಾರ ಪಡೆದಿತ್ತು. ಉಳಿದಂತೆ ಕಾಂಗ್ರೆಸ್ ಅಧಿಕಾರ ನಡೆಸಿದೆ. ಪಕ್ಷದ ಕಾರ್ಯಕರ್ತರು ಹಿಂದಿನ ಸರಕಾರದ ಸಾಧನೆಗಳು, ಸಿದ್ದರಾಮಯ್ಯನವರ ಅಭಿವೃದ್ಧಿ ಕೆಲಸಗಳ ಬಗ್ಗೆ ಜನತೆಗೆ ತಿಳಿಸಿ ಚುನಾವಣೆ ಎದುರಿಸಬೇಕು ಎಂದರು.

ವಿಧಾನಸಭಾ ಚುನಾವಣೆಯೇ ಬೇರೆ, ಸ್ಥಳೀಯ ಸಂಸ್ಥೆ ಚುನಾವಣೆಯೇ ಬೇರೆ. ಕಾರ್ಯಕರ್ತರು ಆತ್ಮಸ್ಥೈರ್ಯದಿಂದ ಚುನಾವಣೆ ಎದುರಿಸಿ ವಾರ್ಡ್‍ಗಳ ಸಮಸ್ಯೆಗೆ ಸ್ಪಂದಿಸುವ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು.

ಮಾಜಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಎಂ.ಎಸ್.ಆತ್ಮಾನಂದ,  ಮಲ್ಲಾಜಮ್ಮ, ಮಧು ಮಾದೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಅಮರಾವತಿ ಚಂದ್ರಶೇಖರ್, ಸಂಪಂಗಿ, ಮನ್ಸೂರ್ ಅಲಿಖಾನ್, ಸಿದ್ದರಾಜು, ಹಾಲಹಳ್ಳಿ ರಾಮಲಿಂಗಯ್ಯ, ಎಂ.ಎಸ್.ಚಿದಂಬರ್, ಜಬೀವುಲ್ಲಾ, ಕದಲೂರು ರಾಮಕೃಷ್ಣ, ಅಂಜನಾ ಶ್ರೀಕಾಂತ್, ಗಣಿಗ ರವಿಕುಮಾರ್, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News