ದಾವಣಗೆರೆ, ಹರಿಹರ ನಗರವನ್ನು ರಾಜ್ಯದ 2ನೇ ರಾಜಧಾನಿಯನ್ನಾಗಿಸಬೇಕು: ಹೋರಾಟಗಾರ ಎಂಎಸ್‍ಕೆ ಶಾಸ್ತ್ರಿ

Update: 2018-08-24 18:34 GMT

ದಾವಣಗೆರೆ,ಆ.24: ದಾವಣಗೆರೆ ಹಾಗೂ ಹರಿಹರ ನಗರವನ್ನು ರಾಜ್ಯ ಸರ್ಕಾರ 2ನೇ ರಾಜಧಾನಿಯನ್ನಾಗಿಸಬೇಕು ಎಂದು ಹೋರಾಟಗಾರ ಎಂಎಸ್‍ಕೆ ಶಾಸ್ತ್ರಿ ಆಗ್ರಹಿಸಿದ್ದಾರೆ. 

ಇಲ್ಲಿನ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಮಧ್ಯಕರ್ನಾಟಕ ದಾವಣಗೆರೆ ಹಾಗೂ ಹರಿಹರವನ್ನು 2ನೇ ರಾಜಧಾನಿಯನ್ನಾಗಿಸುವ ಕುರಿತು ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ಕೇಂದ್ರಬಿಂದುವಾದ ದಾವಣಗೆರೆ, ಹರಿಹರ ನಗರ ಈ ಹಿಂದೆಯೇ ರಾಜಧಾನಿಯಾಗಬೇಕಿತ್ತು. 1950ರ ಸುಮಾರಿನಲ್ಲೇ ರಾಷ್ಟ್ರನಾಯಕ ಎಸ್. ನಿಜಲಿಂಗಪ್ಪ, ಪಾಟೀಲಪುಟ್ಟಪ್ಪ, ಮುಂಡಾಸ ವೀರಭದ್ರಪ್ಪ, ಕೆ.ಟಿ. ಜಂಬಣ್ಣ, ಶಿವಳ್ಳಿ ಸಿದ್ದಪ್ಪ ಮತ್ತಿತರರು ಆ ಸಮಯದಲ್ಲಿ 2ನೇ ರಾಜಧಾನಿಗಾಗಿ ಹೋರಾಟ ನಡೆಸಿದ್ದರು. ಆದರೆ, ಅವರ ಹೋರಾಟ ಅತ್ಯಂತ ಕಡಿಮೆ ಇದ್ದ ಕಾರಣ, ಇದರ ದುರ್ಲಾಭವನ್ನು ಗೌಡರು ಪಡೆದು ಬೆಂಗಳೂರನ್ನು ರಾಜಧಾನಿಯನ್ನಾಗಿಸಿಕೊಂಡರು ಎಂದು ಟೀಕಿಸಿದರು.

ಬೆಂಗಳೂರಿನಲ್ಲಿ ಕುಡಿವ ನೀರನ್ನು ಸಹ ಖರೀದಿಸಬೇಕಿದೆ. ಆದರೆ, ಇಲ್ಲಿ ಪಕ್ಕದಲ್ಲಿಯೇ ತುಂಗಭದ್ರೆ ನದಿ ಇದೆ. ನಗರದ ಎನ್‍ಎಚ್ 4 ರಸ್ತೆಯ ಹಾಲುವರ್ತಿ ಉಳವಿನಕಟ್ಟೆ ಬಳಿ ಸರ್ಕಾರಕ್ಕೆ ಸೇರಿದ 6494 ಎಕರೆ ಜಮೀನು, ಹರಿಹರ ತಾಲೂಕಿನ ಕೊಮಾರನಹಳ್ಳಿ ಬಳಿ 700 ಎಕರೆ ಜಮೀನಿದೆ. ಸರ್ಕಾರಕ್ಕೆ ಬೇಕಾದ ಕಟ್ಟಡ, ಕಚೇರಿ ಇಲ್ಲಿಯೇ ನಿರ್ಮಿಸಿಕೊಳ್ಳಬಹುದು ಎಂದ ಅವರು, ಮಧ್ಯಕರ್ನಾಟಕ 2ನೇ ರಾಜಧಾನಿಯಾದರೆ ಚಿತ್ರದುರ್ಗ, ಬಳ್ಳಾರಿ, ಶಿವಮೊಗ್ಗ, ಕೊಪ್ಪಳ, ಹಾವೇರಿ, ಧಾರವಾಡ, ಬಾಗಲಕೋಟೆ, ಯಾದಗಿರಿ, ಬೀದರ್ ಸೇರಿದಂತೆ ಎಲ್ಲಾ ಜಿಲ್ಲೆಗಳಿಗೂ ಇದು ಸನಿಹ ಹಾಗೂ ಎಲ್ಲಾ ಕಾರ್ಯಗಳಿಗೆ ಅನುಕೂಲವಾಗಲಿದೆ. ಆದ್ದರಿಂದ 2ನೇ ರಾಜಧಾನಿಯಾಗಲಿ ಎಂದರು.

ಮಧ್ಯಕರ್ನಾಟಕ್ಕೆ ಯಾವ ಭಾಗದಿಂದಲೂ ನೂರಿನ್ನೂರು ಕಿ. ಮೀ ಮಾತ್ರವಿದೆ. ಅಲ್ಲದೆ, ಬೆಂಗಳೂರಿನಲ್ಲಿ ವಲಸಿಗರದ್ದೇ ಕಾರುಬಾರು, ಹಾವಳಿ. ಆದರೆ, ಇಲ್ಲಿ ಅಪ್ಪಟ ಕನ್ನಡಿಗರಿದ್ದಾರೆ. ಪರಭಾಷಿಕರ ಹಾವಳಿಯಿಲ್ಲ. ಒಟ್ಟಾರೆ 2ನೇ ರಾಜಧಾನಿಯಾಗಲು ಬೇಕಾದ ಎಲ್ಲ ಅರ್ಹತೆ ದಾವಣಗೆರೆಗೆ ಇದ್ದು, ಈ ಕುರಿತು ನಮ್ಮ ಹೋರಾಟ ತೀವ್ರಗೊಳಿಸುತ್ತೇವೆ ಹಾಗೂ ಈ ಕುರಿತು ಬೆಂಗಳೂರಿನ ರವೀಂದ್ರ ಕಲಾಕೇತ್ರದಲ್ಲಿ ಹಕ್ಕೋತ್ತಾಯ ಮನವಿ ಸಲ್ಲಿಸಲಾಗುವುದೆಂದರು.

ಈ ಸಂದರ್ಭ ಭಾನುವಳ್ಳಿ ಬಸವನಗೌಡ ಜಿ.ಎಚ್., ಟಿ.ಆರ್. ಮಹೇಶ್ವರಪ್ಪ, ಎಂ. ಪ್ರೇಮಲತಾ, ಮಹದೇವಪ್ಪ, ರಕ್ತದಾನಿ ಮಹಡಿ ಶಿವಕುಮಾರ್, ಗೌಡರ ಬಸವರಾಜಪ್ಪ, ಗೌಡರ ಚೆನ್ನಬಸಪ್ಪ, ಎಚ್. ಪ್ರಶಾಂತ್‍ಕುಮಾರ್, ಸಿದ್ದಪ್ಪ, ರೇವಣಸಿದ್ದಪ್ಪ ಹರಿಹರ, ಬಸವಾನಂದ ಸ್ವಾಮಿ, ಚಂದ್ರಶೇಖರಪ್ಪ, ಸಿದ್ದಪ್ಪ ನಾಯಕ, ನಾಗಪ್ಪನಾಯಕ, ಭೀಮಸಮುದ್ರದ ಟಿ. ಬಸವರಾಜಪ್ಪ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News