ಪ್ರವಾಹಪೀಡಿತ ಜೋಡುಪಾಲದಲ್ಲಿ ಸ್ಮಶಾನ ಮೌನ: ಆಹಾರಕ್ಕಾಗಿ ಮೂಕ ಪ್ರಾಣಿಗಳ ಆರ್ತನಾದ

Update: 2018-08-25 11:17 GMT

ಮಡಿಕೇರಿ, ಆ.25: ಇತ್ತೀಚೆಗೆ ಸುರಿವ ಮಹಾಮಳೆಗೆ ಪ್ರವಾಹ, ಭೂಕುಸಿತದಿಂದ ನಲುಗಿ ಹೋಗಿರುವ ತಾಲೂಕಿನ ಜೋಡುಪಾಲ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸ್ಮಶಾನ ಮೌನ ಆವರಿಸಿದೆ. ಸುಳ್ಯ-ಮಡಿಕೇರಿ ರಸ್ತೆ ಬದಿಯಿರುವ ಎಲ್ಲಾ ಅಂಗಡಿಗಳು ಬಾಗಿಲು ಮುಚ್ಚಿದ್ದು, ವ್ಯಾಪಾರ ವಹಿವಾಟು ಸಂಪೂರ್ಣ ಸ್ತಬ್ಧಗೊಂಡಿದೆ. ಆಹಾರ ಇಲ್ಲದೆ ಮೂಕ ಪ್ರಾಣಿಗಳ ಆರ್ತನಾದನ ಮುಗಿಲು ಮುಟ್ಟಿದೆ. 

ಜೋಡುಪಾಲದಲ್ಲಿ ಉಂಟಾದ ಪ್ರವಾಹ, ಭಾರೀ ಭೂ ಕುಸಿತದಿಂದ ಗ್ರಾಮದ ಜನರು ಮನೆಗಳನ್ನು ಖಾಲಿ ಮಾಡಿದ್ದು ನಿರಾಶ್ರಿತ ಶಿಬಿರ, ಸಂಬಂಧಿಕರ ಮನೆಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಹೀಗಾಗಿ ಜೋಡುಪಾಲ ಗ್ರಾಮದ ಒಂದೇ ಒಂದು ಮನೆಯಲ್ಲಿ ಜನರಿಲ್ಲ. ಎಲ್ಲಾ ಮನೆಗಳು ಖಾಲಿಯಾಗಿವೆ. ಭೂ ಕುಸಿತದಿಂದ ಮಂಗಳೂರು- ಮಡಿಕೇರಿ ರಸ್ತೆ ಸಂಪೂರ್ಣ ಬಂದ್ ಆಗಿರುವುದರಿಂದ ವಾಹನ ಸಂಚಾರವೂ ಇಲ್ಲ. ಹೀಗಾಗಿ ಊರಿಗೆ ಊರೇ ಸ್ಮಶಾನ ಮೌನ ಆವರಿಸಿದೆ.

ಜೋಡುಪಾಲ ಮತ್ತು ಎರಡನೇ ಮೊಣ್ಣಂಗೇರಿ ಗ್ರಾಮದ ಜನರನ್ನು ಹೊರತುಪಡಿಸಿ ಉಳಿದ ಗ್ರಾಮದ ಕೆಲವರು ತಮ್ಮ ಮನೆಗಳಿಗೆ ಹಿಂದಿರುಗಿದ್ದಾರೆ. ಜೋಡುಪಾಲ ಮತ್ತು ಎರಡನೇ ಮೊಣ್ಣಂಗೇರಿಯಲ್ಲಿ ಭಾರೀ ಗುಡ್ಡ ಕುಸಿತ ಹಾಗೂ ಪ್ರವಾಹ ಉಂಟಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ಸ್ಥಳ ಪರಿಶೀಲನೆ ನಡೆಸಿ ಆದೇಶ ಹೊರಡಿಸಿದ ಬಳಿಕವಷ್ಟೇ ಗ್ರಾಮದ ಜನರು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಬಹುದು. ಆದರೆ ಗ್ರಾಮಗಳಲ್ಲಿ ಹೆಚ್ಚಿನ ಮನೆಗಳು ಕುಸಿದಿವೆ ಮತ್ತು ಬಿರುಕು ಬಿಟ್ಟಿರುವುದರಿಂದ ಸದ್ಯಕಂತೂ ಜೋಡುಪಾಲದ ಗ್ರಾಮಸ್ಥರಿಗೆ ತಮ್ಮ ಮನೆಗಳಿಗೆ ಹಿಂದಿರುವುದು ಕಷ್ಟಕರವಾಗಬಹುದು.

ಸ್ಥಬ್ದಗೊಂಡ ವ್ಯಾಪಾರ:

ಭೂ ಕುಸಿತದಿಂದ ಜೋಡುಪಾಲದಲ್ಲಿ ಸುಳ್ಯ - ಮಡಿಕೇರಿ ರಸ್ತೆ ಸಂಪೂರ್ಣ ಕಡಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಸಂಪಾಜೆಯ ಬಳಿಕ ಕೊಯನಾಡು, ದೇವರಕೊಲ್ಲಿಯಿಂದ ಜೋಡುಪಾಲದವರೆಗೆ ಪೊಲೀಸರು, ಅಧಿಕಾರಿಗಳ ವಾಹನಗಳನ್ನು ಹೊರತುಪಡಿಸಿ ಇತರ ವಾಹನಗಳ ಸಂಚಾರವನ್ನು ತಡೆಹಿಡಿಯಲಾಗುತ್ತಿದೆ. ಹೀಗಾಗಿ ವಾಹನಗಳ ಸಂಚಾರ ಇಲ್ಲದೆ ಈ ಭಾಗದಲ್ಲಿ ರಸ್ತೆಬದಿಯಲ್ಲಿರುವ ಎಲ್ಲ ಅಂಗಡಿಗಳು ಬಾಗಿಲು ಮುಚ್ಚಿದ್ದು ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.

ಮೂಕ ಪ್ರಾಣಿಗಳ ಆರ್ತನಾದನ:

ಒಂದೆಡೆ ಜನರಿಲ್ಲದ ಜೋಡುಪಾಲ ಮತ್ತು ಎರಡನೇ ಮೊಣ್ಣಂಗೇರಿ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದ್ದರೆ, ಇನ್ನೊಂದೆಡೆ ಈ ಗ್ರಾಮಗಳಲ್ಲಿ ಅಳಿದು ಉಳಿದಿರುವ ಮೂಕ ಪ್ರಾಣಿಗಳು ಆಹಾರಕ್ಕಾಗಿ ಕಂಡ ಕಂಡವರ ಹಿಂದೆ ಹೋಗುತ್ತಿವೆ. ದನ-ಕರುಗಳು ಹಸಿ ಹುಲ್ಲು ತಿಂದು ಹೊಟ್ಟೆ ತುಂಬಿಸುತ್ತಿವೆಯಾದರೂ ನಾಯಿಗಳು ಆಹಾರ ಇಲ್ಲದೆ ಈ ಪ್ರದೇಶದಲ್ಲಿ ಓಡಾಡುವ ಅಧಿಕಾರಿಗಳು, ರಸ್ತೆ ದುರಸ್ತಿಯಲ್ಲಿ ತೊಡಗಿರುವ ಕಾರ್ಮಿಕರ ಹಿಂದೆ ಮುಂದೆ ಮಾಡುತ್ತಿವೆ.


ಸುಮಾರು 40 ವರ್ಷಗಳಿಂದ ಇಲ್ಲಿ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿದ್ದೇನೆ. ಮೊನ್ನೆ ಸುರಿದ ಮಳೆ ಹಾಗೂ ಭೂ ಕುಸಿತದಿಂದ ಇಲ್ಲಿನ ಜನರನ್ನು ಸ್ಥಳಾಂತರಿಸಲಾಗಿದೆ. ರಸ್ತೆ ಬಂದ್ ಆಗಿರುವುದರಿಂದ ಪ್ರವಾಸಿಗರ ಪ್ರವೇಶವೂ ಇಲ್ಲವಾಗಿದೆ. ಈ ಅಂಗಡಿಯಿಂದ ಬರುವ ಆದಾಯದಿಂದ ಕುಟುಂಬ ನಿರ್ವಹಣೆ ಮಾಡಬೇಕು. ಒಂದು ವಾರದಿಂದ ಅಂಗಡಿ ಬಂದ್ ಆಗಿದ್ದು ಸದ್ಯಕ್ಕಂತೂ ಇಲ್ಲಿನ ಪರಿಸ್ಥಿತಿ ಬದಲಾಗುವ ಲಕ್ಷಣ ಕಾಣುತ್ತಿಲ್ಲ.

- ಕೆ.ಎಂ.ಹನೀಫ್, ದೇವರಕೊಲ್ಲಿ


ಮಡಿಕೇರಿ- ಮಂಗಳೂರು ರಸ್ತೆಯಲ್ಲಿ ಸಂಚರಿಸುವ ಪ್ರವಾಸಿಗರನ್ನು ನೆಚ್ಚಿಕೊಂಡು ಸಣ್ಣ ಕ್ಯಾಂಟೀನ್ ಒಂದನ್ನು ನಡೆಸುತ್ತಿದ್ದೇನೆ. ಪ್ರವಾಹ ಮತ್ತು ಭೂಕುಸಿತದಿಂದ ಕ್ಯಾಂಟಿನ್ ಬಂದ್ ಆಗಿದ್ದು, ನಮ್ಮ ಬದುಕು ಕೂಡಾ ಬಂದ್ ಆದಂತಾಗಿದೆ. ಕ್ಯಾಂಟೀನ್‌ನಿಂದ ಬರುವ ಆದಾಯವೇ ಕುಟುಂಬಕ್ಕೆ ಆಧಾರ. ನಾವು ಹುಟ್ಟಿ ಬೆಳೆದ ಊರು ಇದೇ ಆಗಿದೆ. ಈ ಹಿಂದೆ ನಮಗೆ ಇಂತಹ ಪರಿಸ್ಥಿತಿ ಎದುರಾಗಿಲ್ಲ. ಈ ನಡುವೆ ಕ್ಯಾಂಟಿನ್‌ನಲ್ಲಿದ್ದ ಸಾಮಗ್ರಿಗಳನ್ನೆಲ್ಲ ಯಾರೋ ಕಳವುಗೈದಿದ್ದಾರೆ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.

- ಗಪ್ಪು ಮಾದೆನಾಡು, ಜೋಡುಪಾಲ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News