ಮಲೆನಾಡಿನಲ್ಲಿ ಭಾರೀ ಸದ್ದಿನೊಂದಿಗೆ ಮತ್ತೆ ಕಂಪಿಸಿದ ಭೂಮಿ

Update: 2018-08-25 11:30 GMT

ಚಿಕ್ಕಮಗಳೂರು, ಆ.25: ಜಿಲ್ಲೆಯ ಜಯಪುರ ಹೋಬಳಿ ವ್ಯಾಪ್ತಿಯ ಕೆಲ ಗ್ರಾಮಗಳ ನಿದ್ದೆಗೆಡಿಸಿರುವ ಭಾರೀ ಸದ್ದು ಹಾಗೂ ಭೂ ಕಂಪನ ಘಟನೆ ಮುಂದುವರಿದಿದ್ದು, ಶುಕ್ರವಾರ ಮಧ್ಯರಾತ್ರಿ ಭಾರೀ ಸದ್ದಿನೊಂದಿಗೆ ಭೂಮಿಯು ಕಂಪಿಸಿತೆಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದು, ನಿರಂತರವಾಗಿ ಸಂಭವಿಸುತ್ತಿರುವ ಈ ಪ್ರಾಕೃತಿಕ ಅಸಹಜ ಘಟನೆಗೆ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ನಿವಾಸಿಗಳು ಆತಂಕದಲ್ಲಿ ದಿನ ಕಳೆಯುವಂತೆ ಮಾಡಿದೆ.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಕಳೆದ ಎರಡು ದಶಕಗಳ ಬಳಿಕ ಇಡೀ ಮಲೆನಾಡಿನ ಜನಜೀವನವೇ ಅಸ್ತವ್ಯಸ್ತಗೊಳ್ಳವಂತಹ ಮಳೆಯಾಗಿದೆ. ಭಾರೀ ಮಳೆಗೆ ಮಲೆನಾಡಿನಾದ್ಯಂತ ಭೂ ಕುಸಿತ, ಮನೆಗಳ ಗೋಡೆಗಳಲ್ಲಿ ಬಿರುಕು ಸಾಮಾನ್ಯವಾಗಿದೆ. ಈ ಮಳೆ ಸುರಿದ ಬಳಿಕ ಜಿಲ್ಲೆಯ ಕೊಪ್ಪ ತಾಲೂಕಿನ ಜಜಯಪುರ ಹೋಬಳಿ ವ್ಯಾಪ್ತಿಯ ಅತ್ತಿಕುಡಿಗೆ, ಭೈರೇದೇವರು, ಅಬ್ಬಿಕಲ್ಲು, ಗುಡ್ಡೆತೋಟ, ಕೊಗ್ರೆ ಗ್ರಾಮಗಳ ವ್ಯಾಪ್ತಿಯಲ್ಲಿ ಆಗಾಗ್ಗೆ ಭಾರೀ ಸದ್ದಿನೊಂದಿಗೆ ಭೂಮಿಯು ಕಂಪಿಸಿದ ಅನುಭವ ಜನರ ನಿದ್ದೆ ಗೆಡಿಸಿತ್ತು. 

ಶುಕ್ರವಾರ ಮಧ್ಯರಾತ್ರಿಯೂ ಈ ಘಟನೆ ಮರುಕಳಿಸಿದ್ದು, ಭಾರೀ ಸದ್ದಿನೊಂದಿಗೆ ಭೂಮಿಯು ಕಂಪಿಸಿದೆ. ಸದ್ದಿನೊಂದಿಗೆ ಮನೆಯಲ್ಲಿದ್ದ ಪಾತ್ರೆ ಸೇರಿದಂತೆ ಸಾಮಾನು ಸರಂಜಾಮಗಳು ನೆಲಕ್ಕುರುಳಿವೆ. ಕೆಲ ಸೆಕೆಂಡ್‍ಗಳ ಕಾಲ ಭೂಮಿ ಕಂಪಿಸಿದೆ. ಕಂಪನಕ್ಕೆ ಕೆಲ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ ಎಂದು ನಿವಾಸಿಗಳು ವಾರ್ತಾಭಾರತಿ ಬಳಿ ಅಳಲು ತೋಡಿಕೊಂಡಿದ್ದಾರೆ. 

ಈ ಘಟನೆಯಿಂದಾಗಿ ಈ ಗ್ರಾಮಗಳ ವ್ಯಾಪ್ತಿಯ ಜನರಲ್ಲಿ ಆತಂಕ ಮನೆ ಮಾಡಿದ್ದು, ಘಟನೆಗೆ ಕಾರಣ ತಿಳಿಯಲು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರಿಂದ ಬೆಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಭೂಮಿಯೊಳಗಿನ ಈ ಅಸಹಜ ಪ್ರಕ್ರಿಯೆಗೆ ಭೂ ಗರ್ಭದಲ್ಲಿ ಬಂಡೆಗಳ ಚಲನೆ, ಪದರಗಳ ಅದರುವಿಕೆ ಕಾರಣವೇ ಹೊರತು ಭೂ ಕಂಪನವಲ್ಲ, ಇದರಿಂದ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. 

ಅಧಿಕಾರಿಗಳ ತಂಡದ ಪರಿಶೀಲನೆ ಬಳಿಕವೂ ಭಾರೀ ಸದ್ದು, ಕಂಪನ ಮುಂದುವರಿದಿರುವುದರಿಂದ ಜಯಪುರ ಹೋಬಳಿ ವ್ಯಾಪ್ತಿಯ ಗ್ರಾಮಸ್ಥರು ಮತ್ತಷ್ಟು ಆತಂಕಕ್ಕೀಡಾಗಿದ್ದು, ಎಲ್ಲಿ ಅನಾಹುತಗಳು ಸಂಭವಿಸುತ್ತದೆಯೋ ಎಂಬ ಭೀತಿಯಲ್ಲಿದ್ದಾರೆ.

ಗ್ರಾಮಸ್ಥರು ಭಯ ಪಡುವ ಅಗತ್ಯವಿಲ್ಲ: ಡಿಸಿ
ಜಯಪುರ ಹೋಬಳಿ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಭೂಮಿಯೊಳಗೆ ಭಾರೀ ಸದ್ದಿನೊಂದಿಗೆ ಭೂಮಿಯು ಕಂಪಿಸುತ್ತಿರುವುದು ನಿಜ. ಆದರೆ ಇದಕ್ಕೆ ಗ್ರಾಮಸ್ಥರು ಭಯಪಡುವ ಅಗತ್ಯವಿಲ್ಲ ಎಂಬುದನ್ನು ವಿಜ್ಞಾನಿಗಳೇ ಸ್ಪಷ್ಟ ಪಡಿಸಿದ್ದಾರೆಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದ್ದಾರೆ.

ಶನಿವಾರ ಭೂ ಕಂಪನ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರಂತರ ಮಳೆಯಿಂದಾಗಿ ಭೂಮಿಯೊಳಗೆ ಗಾಳಿಯ ಒತ್ತಡದಿಂದ ಭೂ ಪದರಗಳ ಚಲನೆಯಾದಾಗ ಹೀಗೆ ಶಬ್ದ ಬರುವುದು ಸಾಮಾನ್ಯ ಎಂಬುದನ್ನು ವಿಜ್ಞಾನಿಗಳು ತಿಳಿಸಿದ್ದಾರೆ, ಶಬ್ದಬಂದಾಗ ಭೂಮಿ ಕಂಪಿಸುವುದು ಸಹಜ ಪ್ರಕ್ರಿಯೆಯಾಗಿದೆ. ಶಬ್ದದಿಂದ ಕೆಲ ಹಳೆಯ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆಯಷ್ಟೆ. ಇದಕ್ಕೆ ನಿವಾಸಿಗಳು ಆತಂಕಪಡುವ ಅಗತ್ಯವಿಲ್ಲ. ಭೂ ಕಂಪನ ಸಂಬಂಧ ರಿಕ್ಟರ್ ಮಾಪನ ಕೇಂದ್ರಗಳಲ್ಲೂ ಈ ಬಗ್ಗೆ ಯಾವುದೇ ಮಾಹಿತಿ ದಾಖಲಾಗಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News