ಗುರುದ್ವಾರದಲ್ಲಿ ನಮಾಝ್ ಮಾಡಿದ ಮುಸ್ಲಿಂ ವ್ಯಕ್ತಿ: ವೀಡಿಯೋ ವೈರಲ್

Update: 2018-08-25 09:12 GMT

ಹೊಸದಿಲ್ಲಿ, ಆ.25: ಮಲೇಷ್ಯಾದ ಗುರುದ್ವಾರವೊಂದರಲ್ಲಿ ಗುರ್ಬಾನಿ  ಹಾಡಲಾಗುತ್ತಿದ್ದ ಸಂದರ್ಭ ಮುಸ್ಲಿಂ ವ್ಯಕ್ತಿಯೊಬ್ಬರು  ಅಲ್ಲಿ ನಮಾಝ್ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಿಖ್ ಇನ್‍ಸೈಡ್ ಎಂಬ ಫೇಸ್ ಬುಕ್ ಪುಟದಲ್ಲಿ ಈ ವೀಡಿಯೋ ಪೋಸ್ಟ್ ಮಾಡಲಾಗಿದೆ. ಈ ಪುಟದಲ್ಲಿ  ಜಗತ್ತಿನಾದ್ಯಂತದ ಗುರುದ್ವಾರಗಳ ಕಾರ್ಯಚಟುವಟಿಕೆಗಳ ಬಗ್ಗೆ ಸುದ್ದಿ ಹಾಗೂ ವೀಡಿಯೋ  ಪೋಸ್ಟ್ ಮಾಡಲಾಗುತ್ತಿದ್ದು, ಮುಸ್ಲಿಂ ವ್ಯಕ್ತಿ ನಮಾಝ್ ಸಲ್ಲಿಸುತ್ತಿರುವುದಕ್ಕೆ ಈ ಪುಟದಲ್ಲಿ ಬೆಂಬಲ ವ್ಯಕ್ತವಾಗಿದೆಯಲ್ಲದೆ `ದೇವರೊಬ್ಬನೇ' ಎಂದೂ ಅದು ತನ್ನ ಪೋಸ್ಟ್ ನಲ್ಲಿ ಹೇಳಿದೆ.

ಈ ವೀಡಿಯೋವನ್ನು ಐಪೋಹ್ ಎಂಬಲ್ಲಿನ ಗುರುದ್ವಾರ ಸಾಹಿಬ್ ಬೆರ್ಚಮ್ ನಲ್ಲಿ ಸ್ಥಳೀಯರೊಬ್ಬರು ರೆಕಾರ್ಡ್ ಮಾಡಿದ್ದು ಮುಸ್ಲಿಂ ವ್ಯಕ್ತಿ ಎರಡು ನಿಮಿಷಗಳ ಕಾಲ ಪ್ರಾರ್ಥನೆ ಸಲ್ಲಿಸಿ ನಂತರ ಅಲ್ಲಿಂದ ನಿರ್ಗಮಿಸುವುದು ಕಾಣಿಸುತ್ತದೆ. ``ನಿನ್ನೆ (ಆಗಸ್ಟ್ 20) ಒಬ್ಬ ಮುಸ್ಲಿಂ ಸೋದರ ನಮಾಜ್ ಮಾಡುತ್ತಿರುವುದು ಕಂಡು ಬಂತು. ಪ್ರಾಯಶಃ ಆತನಿಗೆ  ಮಸೀದಿ ಸಿಗಲಿಲ್ಲವೆಂದು ಕಾಣಿಸುತ್ತದೆ. ಇದೇ ಕಾರಣಕ್ಕೆ ಆತ ಗುರುದ್ವಾರದಲ್ಲಿ ನಮಾಝ್ ಸಲ್ಲಿಸಿದ್ದಾನೆ,'' ಎಂದು  ಸಿಖ್ ಇನ್‍ಸೈಡ್ ಪೋಸ್ಟ್ ತಿಳಿಸಿದೆ.

ಈ ವೀಡಿಯೋ ಇದೀಗ ಸಾವಿರಾರು ಜನರ ಮನಸ್ಸನ್ನೂ ಗೆದ್ದಿದೆ. ಕೆಲವರು ಆಕ್ಷೇಪ ಸೂಚಿಸಿದ್ದರೂ ಹೆಚ್ಚಿನವರಿಗೆ ಈ ವೀಡಿಯೋ ಖುಷಿ ನೀಡಿದ್ದು ಜಗತ್ತಿನಲ್ಲಿ ಧಾರ್ಮಿಕ ಸೌಹಾರ್ದತೆ ಈಗಲೂ ಇದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಹಲವರು ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News