ಜಯಲಲಿತಾ ಜೀವನ ಚರಿತ್ರೆಯನ್ನು ಆಧರಿಸಿ ಬರಲಿವೆ ಮೂರು ಸಿನೆಮಾಗಳು

Update: 2018-08-25 11:07 GMT

ಒಬ್ಬ ವ್ಯಕ್ತಿಯ ಜೀವನವನ್ನಾಧರಿಸಿ ಒಂದು ಸಿನೆಮಾ ನಿರ್ಮಾಣವಾಗುವುದು ಸಹಜ. ಆದರೆ ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನವನ್ನಾಧರಿಸಿ ಬರೋಬ್ಬರಿ ಮೂರು ಸಿನೆಮಾಗಳು ಸೆಟ್ಟೇರಲಿವೆ. ಕೆಲದಿನಗಳ ಹಿಂದೆ ನಿರ್ದೇಶಕ ಎ.ಎಲ್ ವಿಜಯ್, ಜಯಲಲಿತಾ ಕುರಿತ ಸಿನೆಮಾ ನಿರ್ದೇಶಿಸುವುದಾಗಿ ತಿಳಿಸಿದ್ದರು.

ವಿಬ್ರಿ ಮೀಡಿಯ ನಿರ್ಮಿಸುತ್ತಿರುವ ಈ ಚಿತ್ರ ಜಯಲಲಿತಾ ಅವರ ಜನ್ಮದಿನವಾದ ಫೆಬ್ರವರಿ 24ರಂದು ಸೆಟ್ಟೇರಲಿದೆ ಎಂದೂ ಅವರು ತಿಳಿಸಿದ್ದರು. ಇದಾದ ಕೆಲವೇ ದಿನಗಳ ನಂತರ ನಿರ್ದೇಶಕ ಪ್ರಿಯದರ್ಶಿಣ, ಎಐಎಡಿಎಂಕೆಯ ಅಧಿನಾಯಕಿಯ ಕುರಿತು ಚಿತ್ರ ನಿರ್ದೇಶಿಸುವುದಾಗಿ ಘೋಷಣೆ ಮಾಡಿದರು. ಸದ್ಯ ‘ಶಕ್ತಿ’ ಎಂಬ ಸಿನೆಮಾದ ಚಿತ್ರೀಕರಣದಲ್ಲಿ ವ್ಯಸ್ತವಾಗಿರುವ ಪ್ರಿಯದರ್ಶಿನಿ ಕೂಡಾ ತನ್ನ ಸಿನೆಮಾ ಜಯಲಲಿತಾ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಫೆಬ್ರವರಿ 24ರಂದು ಚಿತ್ರೀಕರಣ ಆರಂಭಿಸಲಿದೆ ಎಂದು ಮಾಹಿತಿ ನೀಡಿದ್ದರು. ಇದೀಗ ತಮಿಳಿನ ಹಿರಿಯ ನಿರ್ದೇಶಕ ಭಾರತಿ ರಾಜ ಕೂಡಾ ಕಣಕ್ಕಿಳಿದಿದ್ದು ತಾನೂ ಜಯಲಲಿತಾ ಜೀವನದ ಕುರಿತು ಸಿನೆಮಾ ನಿರ್ದೇಶಿಸುವುದಾಗಿ ಹೇಳಿಕೆ ನೀಡಿದ್ದಾರೆ.

ತನ್ನ ಚಿತ್ರಕ್ಕೆ ‘ಅಮ್ಮಾ: ಪುರಚ್ಚಿ ತಲೈವಿ’ ಎಂದು ಹೆಸರಿಟ್ಟಿರುವ ಭಾರತಿರಾಜ, ಜಯಲಿಲಿತಾ ಪಾತ್ರಕ್ಕೆ ಐಶ್ವರ್ಯಾ ರೈ ಅಥವಾ ಅನುಷ್ಕಾ ಶೆಟ್ಟಿಯನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ. ಆದಿತ್ಯ ಭಾರದ್ವಾಜ್ ಈ ಚಿತ್ರಕ್ಕೆ ಹಣ ಹೂಡುತ್ತಿದ್ದು ಡಿಸೆಂಬರ್‌ನಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ. ಜಯಲಲಿತಾ ರಾಜಕೀಯ ಪ್ರವೇಶಕ್ಕೂ ಮುನ್ನ ಸಾಕಷ್ಟು ಜನಪ್ರಿಯ ರಾಗಿದ್ದರು. ನಂತರ ರಾಜಕೀಯದಲ್ಲೂ ಬಿರುಗಾಳಿ ಎಬ್ಬಿಸಿದ ಆಕೆ ಇದೀಗ ಸಾವಿನ ನಂತರವೂ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ ಎಂಬುದಕ್ಕೆ ಅವರ ಜೀವನವನ್ನಾಧರಿಸಿ ಬರುತ್ತಿರುವ ಸಾಲುಸಾಲು ಸಿನೆಮಾಗಳೇ ಸಾಕ್ಷಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News