ಕಾಫಿ ಮಂಡಳಿಯಿಂದ ಬೆಳೆಗಾರರ ನಿರ್ಲಕ್ಷ್ಯ: ಬೆಳೆಗಾರರ ಸಂಘ ಆರೋಪ

Update: 2018-08-25 11:34 GMT

ಚಿಕ್ಕಮಗಳೂರು, ಆ.25: ಈ ಬಾರಿ ಮಲೆನಾಡು ವ್ಯಾಪ್ತಿಯಲ್ಲಿ ವಾಡಿಕೆಗಿಂದ ಮಳೆ ಸುರಿದ ಪರಿಣಾಮ ಕಾಫಿ, ಕಾಳು ಮೆಣಸು ಬೆಳೆಗಳು ಕೊಳೆ ರೋಗಕ್ಕೆ ತುತ್ತಾಗಿದ್ದು, ಕಾಫಿ ಮಂಡಳಿ ಸೇರಿದಂತೆ ಕೇಂದ್ರ, ರಾಜ್ಯ ಸರಕಾರಗಳು ಬೆಳೆಗಾರರ ನೆರವಿಗೆ ಬರುತ್ತಿಲ್ಲ. ಇದರಿಂದ ಕಾಫಿ ಉದ್ಯಮವೇ ನಾಶವಾಗುವ ಭೀತಿ ಎದುರಾಗಿದೆ. ಸರಕಾರಗಳು ಕೂಡಲೇ ಉದ್ಯಮದ ನೆರವಿಗೆ ಧಾವಿಸಬೇಕೆಂದು ಕಾಫಿ ಮಂಡಳಿ ಮಾಜಿ ಸದಸ್ಯ ಡಿ.ಎಂ.ವಿಜಯ್ ಆಗ್ರಹಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದ್ದು, ಅತೀವೃಷ್ಟಿಯಿಂದಾಗಿ ಕಾಫಿ ತೋಟಗಳಲ್ಲಿ ಭೂ ಕುಸಿತ ಹಾಗೂ ಫಸಲುಗಳು ಕೊಳೆ ರೋಗದಂತಹ ಬಾಧೆಗಳಿಗೆ ಒಳಗಾಗಿ ಅಪಾರ ಹಾನಿ ಸಂಭವಿಸಿದೆ. ಆದರೆ ಕಾಫಿ ಮಂಡಳಿ ಬೆಳೆಗಾರರ ನೆರವು ನೀಡುವ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸುದ ಅವರು, ಸತತ ಮೂರು ತಿಂಗಳಿನಿಂದ ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಗೆ ಕಾಫಿ, ಕಾಳುಮೆಣಸು, ಅಡಿಕೆ ಬೆಳೆ ಸಂಪೂರ್ಣ ನಾಶವಾಗಿದೆ. ಬೆಳೆಗಾರರ ಬೆನ್ನಿಗೆ ನಿಲ್ಲಬೇಕಾದ ಕಾಫಿ ಮಂಡಳಿ ಹಾಗೂ ಸಂಸದರು ಮೌನಕ್ಕೆ ಶರಣಾಗಿದ್ದಾರೆಂದು ದೂರಿದರು.

ಕಾಫಿ ಉದ್ಯಮವೊಂದರಲ್ಲಿ ಲಕ್ಷಾಂತರ ಕಾರ್ಮಿಕರು ಬದುಕು ಕಟ್ಟಿಕೊಂಡಿದ್ದಾರೆ. ಅಧಿಕ ಪ್ರಮಾಣದ ವೆಚ್ಚದಿಂದ ಕಾಫಿ ಬೆಳೆ ಬೆಳೆಯುವುದೇ ಕಷ್ಟವಾಗಿದೆ. ಕಾಳು ಮೆಣಸು ದರ ಈಗಾಗಲೇ ನೆಲಕಚ್ಚಿದೆ. ಕಾಫಿ ಮಂಡಳಿಯಿಂದ ಕಾಲ ಕಾಲಕ್ಕೆ ಬೆಳೆಗಾರರಿಗೆ ಬರಬೇಕಾದ ಸಬ್ಸಿಡಿ ಬರುತ್ತಿಲ್ಲ. ಕೇಂದ್ರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ. ವಿದೇಶಿ ವಿನಿಮಯ ನೀಡುತ್ತಿರುವ ಹಾಗೂ ಲಕ್ಷಾಂತರ ಜನರ ಜೀವನಕ್ಕೆ ಆಶ್ರಯ ನೀಡಿದ ಉದ್ಯಮ ಸದ್ಯ ಅತೀವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದ್ದು, ಕಾಫಿ ಮಂಡಳಿ ಬೆಳೆಗಾರರನ್ನು ನಿರ್ಲಕ್ಷ್ಯ ಮಾಡುತ್ತಿರುವುದು ವಿಪರ್ಯಾಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಡಿಕೇರಿ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸತತ ಮಳೆಯಿಂದ ಕಾಫಿ ತೋಟಗಳು ಸಂಪೂರ್ಣ ನಾಶವಾಗಿವೆ. ಕೊಡಗಿನಲ್ಲಂತೂ ಭೂ ಕುಸಿತದಿಂದಾಗಿ ಕಾಫಿ ತೋಟಗಳೇ ಕಣ್ಮರೆಯಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಮಂಡಳಿಯ ಕಾರ್ಯದರ್ಶಿ ಬೆಳೆಗಾರರ ಸಂಘಟನೆಗಳಿಗೂ ತಿಳಿಸದೇ ನಾಮಕಾವಸ್ಥೆಗೆಂಬಂತೆ ಒಂದೆರಡು ತೋಟಗಳಿಗೆ ಭೇಟಿನೀಡಿ ಹೋಗಿದ್ದು, ಕೇಂದ್ರ ಮತ್ತು ಕಾಫಿ ಮಂಡಳಿಗೆ ಬೆಳೆನಷ್ಟದ ಸಮಗ್ರ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ. ಕೇಂದ್ರ ಸರಕಾರ ಈ ಕೂಡಲೇ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಅವರು ಒತ್ತಾಯಿಸಿದರು.

ಈ ಹಿಂದೆ ಕಾಫಿ ಬೆಳೆಗಾರರ ಫೂಲ್ ಫಂಡ್ ಹಣದಿಂದ ಬೆಂಗಳೂರಿನಲ್ಲಿರುವ ಕಾಫಿಬೋರ್ಡ್ ಸೇರಿದಂತೆ ರಾಜ್ಯದ ವಿವಿಧೆಡೆ ಕಾಫಿ ಮಂಡಳಿಗೆ ಜಾಗ, ಕಟ್ಟಡ ಸೇರಿದಂತೆ ಸಾಕಷ್ಟು ಆಸ್ತಿಗಳನ್ನು ಖರೀದಿಸಲಾಗಿತ್ತು. ಆದರೆ ಈ ಆಸ್ತಿಗಳನ್ನು ಇತ್ತೀಚಿನ ಕಾಫಿ ಮಂಡಳಿ ಸಭೆಯಲ್ಲಿ  ಬೆಂಗಳೂರಿನ ಶಿವಾಜಿನಗರ ಸೇರಿದಂತೆ  ಕೆಲವು ಆಸ್ತಿಗಳ್ನು ಅಂಡರ್‍ಸೇಲ್ ಮಾಡುವ ಪ್ರಸ್ತಾಪ ಮಾಡಿದ್ದಾರೆ. ಇದಕ್ಕೆ ಕೆಲವು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕುಮ್ಮಕ್ಕು ಇದೆ ಎಂದು ಗಂಭೀರವಾಗಿ ಆರೋಪಿಸಿದ ಅವರು, ಮಂಡಳಿಗೆ ಸೇರಿದ ಒಂದಡಿ ಜಾಗವನ್ನೂ ಮಾರಾಟ ಮಾಡಲು ಬಿಡುವುದಿಲ್ಲ, ಮಾರಾಟಕ್ಕೆ ಮುಂದಾದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಇದೇ ವೇಳೆ ಎಚ್ಚರಿಸಿದರು.

ಕೇಂದ್ರ ಸರಕಾರ ಕಾಫಿ ಉದ್ಯಮದ ಸಂಕಷ್ಟವನ್ನು ಅರಿತು. ಮಳೆಯಿಂದ ಹಾನಿಗೊಳಗಾದ ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆ ಕಾಫಿ ತೋಟಗಳಿಗೆ  ವಾಣಿಜ್ಯ ಸಚಿವಾಲಯ ಅಧಿಕಾರಿಗಳ ಮತ್ತು ಸಂಸತ್ ಸದಸ್ಯರ ತಂಡ ಪರಿಶೀಲನೆ ನಡೆಸಬೇಕೆಂಬುದೇ ಬೆಳೆಗಾರರ ಸಂಘದ ಮೊದಲ ಬೇಡಿಕೆಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾಫಿ ಉದ್ಯಮದ ಉಳಿವಿಗಾಗಿ ಶೀಘ್ರ ಅಗತ್ಯ ಕ್ರಮ ವಹಿಸಬೇಕೆಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸತ್ತಿಹಳ್ಳಿ ಬೆಳೆಗಾರರ ಸಂಘದ ನಿರ್ದೇಶಕರಾದ ಸುರೇಶ್, ಎಸ್.ಬಿ.ಅಶೋಕ್, ಸತ್ತಿಹಳ್ಳಿ ಪುಟ್ಟೇಗೌಡ, ಸುರೇಶ್, ಗುರುಮೂರ್ತಿ, ಶಿವಮೂರ್ತಿ, ಕಲ್ಲೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News