ಕೊಡಗು: ಮಣ್ಣಿನಡಿಯಲ್ಲಿ ಸಿಲುಕಿದ್ದ ಮೂರು ಮೃತದೇಹಗಳು ಪತ್ತೆ

Update: 2018-08-25 13:23 GMT

ಮಡಿಕೇರಿ, ಆ.25: ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಬಲಿಯಾದವರ ಸಂಖ್ಯೆ ದಿನೇದಿನೇ ಏರಿಕೆಯಾಗುತ್ತಿದ್ದು, ಶನಿವಾರ ಮತ್ತೆ ಮೂರು ಮೃತದೇಹಗಳು ಪತ್ತೆಯಾಗುವುದರೊಂದಿಗೆ ಮೃತರ ಸಂಖ್ಯೆ 14ಕ್ಕೇರಿದೆ.

ಹೆಬ್ಬೆಟ್ಟಗೇರಿ ಗ್ರಾಮದಿಂದ ಕಳೆದ ಭಾನುವಾರ ನಾಪತ್ತೆಯಾಗಿದ್ದ ಬಿಲ್ಲವರ ಚಂದ್ರಪ್ಪ (58), ಮಕ್ಕಂದೂರಿನ ಉದಯಗಿರಿಯಿಂದ ನಾಪತ್ತೆಯಾಗಿದ್ದ ಒ.ಕೆ. ಬಾಬು (56) ಹಾಗೂ ಸೋಮವಾರಪೇಟೆ ತಾಲೂಕಿನ ಹಾಡಗೇರಿಯಿಂದ ನಾಪತ್ತೆಯಾಗಿದ್ದ ಫ್ರಾನ್ಸಿಸ್ ಮೊಂತೆರೋ ಅಲಿಯಾಸ್ ಅಪ್ಪು(47) ಎಂಬವರ ಮೃತದೇಹಗಳನ್ನು ಶನಿವಾರ ಪತ್ತೆ ಮಾಡುವಲ್ಲಿ ರಕ್ಷಣಾ ತಂಡಗಳು ಯಶಸ್ವಿಯಾಗಿವೆ. 

ಈ ಮೂವರು ಭೂಕುಸಿತ ಸಂದರ್ಭ ಮಣ್ಣಿನಡಿಯಲ್ಲಿ ಸಿಲುಕಿ ಸಾವಿಗೀಡಾಗಿದ್ದು, ಚಂದ್ರಪ್ಪ ಅವರ ಮೃತದೇಹವನ್ನು ಎನ್‍ಡಿಆರ್‍ಎಫ್ ತಂಡ ಹಾಗೂ ಬಾಬು ಅವರ ಮೃತದೇಹವನ್ನು ಗರುಡ ತಂಡಗಳು ಶನಿವಾರ ಮಧ್ಯಾಹ್ನದ ವೇಳೆ ಪತ್ತೆ ಮಾಡಿವೆ. ಫ್ರಾನ್ಸಿಸ್ ಅವರ ಮೃತದೇಹವನ್ನು ಗರುಡ, ನೌಕಾದಳ ಹಾಗೂ ಪೊಲೀಸ್ ತಂಡಗಳು ಸಂಜೆ ವೇಳೆಗೆ ಪತ್ತೆ ಮಾಡಿ ಹೊರ ತೆಗೆದರು.

ಮೃತರ ಪೈಕಿ ಚಂದ್ರಪ್ಪ ಅವರು ಕಾಫಿ ತೋಟದಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದರೆ, ಬಾಬು ಅವರು ಕೂಲಿ ಕಾರ್ಮಿಕರಾಗಿದ್ದರು. ಫ್ರಾನ್ಸಿಸ್ ಚಾಲಕರಾಗಿದ್ದರು. ಚಂದ್ರಪ್ಪ ಹಾಗೂ ಬಾಬು ನಾಪತ್ತೆಯಾಗಿರುವ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಹಾಗೂ ಫ್ರಾನ್ಸಿಸ್ ನಾಪತ್ತೆಯಾಗಿರುವ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಉಳಿದಂತೆ ನಾಪತ್ತೆಯಾಗಿರುವ ಗಿಲ್ಬರ್ಟ್ ಮೆಂಡೋನ್ಸ, ಹೆಬ್ಬಾಲೆಯ ನಿವೃತ್ತ ಸೈನಿಕ ಹರೀಶ್ ಕುಮಾರ್, ಜೋಡುಪಾಲದ ನಿವಾಸಿ ಸೋಮಣ್ಣ ಎಂಬವರ ಪುತ್ರಿ ಮಂಜುಳಾ(15) ಹಾಗೂ ಹೆಬ್ಬೆಟ್ಟಗೇರಿ ಗ್ರಾಮದಲ್ಲಿ ನೀರು ಪಾಲಾದ ಏಳು ವರ್ಷದ ಬಾಲಕ ಗಗನ್ ಮೃತ ದೇಹಕ್ಕಾಗಿ ಕಳೆದ ಒಂಭತ್ತು ದಿನಗಳಿಂದ ಆತನ ಕುಟುಂಬಸ್ಥರು ಕಾಯುತ್ತಿದ್ದಾರೆ. ರಕ್ಷಣಾ ತಂಡಗಳಿಂದ ಶೋಧ ಕಾರ್ಯ ಮುಂದುವರಿದಿದ್ದು, ಡ್ರೋನ್ ಬಳಸಿ ಮೃತ ದೇಹಗಳ ಹುಡುಕಾಟ ನಡೆಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News