ಕೇರಳ ಪ್ರವಾಹಕ್ಕೆ ಬಹಿರಂಗ ಗೋಹತ್ಯೆಯೇ ಕಾರಣ ಎಂದ ಬಿಜೆಪಿ ಶಾಸಕ ಯತ್ನಾಳ್

Update: 2018-08-25 13:13 GMT

ಬೆಂಗಳೂರು, ಆ. 25: ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ಧಿಯಾಗಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇದೀಗ ಕೇರಳ ಅತಿವೃಷ್ಟಿಗೆ ಬಹಿರಂಗ ಗೋಹತ್ಯೆ ಮಾಡಿದ್ದೇ ಕಾರಣ ಎಂದು ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ.

ಶನಿವಾರ ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇರಳದಲ್ಲಿ ಇತ್ತೀಚೆಗೆ ನಡುರಸ್ತೆಯಲ್ಲಿಯೇ ಬಹಿರಂಗವಾಗಿ ಗೋವುವನ್ನು ಕಡಿಯಲಾಗಿತ್ತು. ಈ ಘಟನೆ ನಡೆದು ಒಂದು ವರ್ಷ ಕಳೆದಿಲ್ಲ. ಆಗಲೇ ಪ್ರವಾಹ ಬಂದು ಅವರು ಸಂಕಷ್ಟಕ್ಕೆ ಸಿಲುಕಬೇಕಾಯಿತು ಎಂದು ಹೇಳಿದರು.

ಗೋಹತ್ಯೆ ಮಾಡಿದ ಕೇರಳ ಜನತೆ ಹಿಂದೂಧರ್ಮದ ಭಾವನೆಗೆ ಧಕ್ಕೆ ತಂದಿದ್ದರು. ಹೀಗಾಗಿ ಅವರಿಗೆ ತಕ್ಕ ಶಾಸ್ತಿಯಾಯಿತು. ಯಾರು ಹಿಂದೂಧರ್ಮವನ್ನು ಅವಮಾನಿಸುತ್ತಾರೆ ಅವರಿಗೆ ತಕ್ಕ ಶಿಕ್ಷೆ ಆಗುತ್ತದೆ ಎನ್ನುವುದಕ್ಕೆ ಇದು ನಿದರ್ಶನ ಎಂದು ಯತ್ನಾಳ್ ಇದೇ ವೇಳೆ ಲೇವಡಿ ಮಾಡಿದರು.

ಬಿಜೆಪಿ ಶಾಸಕನೊಬ್ಬ ವಿಜಯಪುರಲ್ಲಿದ್ದಾನೆಂದು ಜಿಲ್ಲೆಯಲ್ಲಿ ಗೋಹತ್ಯೆ ಕಡಿಮೆಯಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಕೇವಲ ಶೇ.10ರಷ್ಟು ಮಾತ್ರ ಗೋವು ಹತ್ಯೆಯಾಗಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಸಂಪೂರ್ಣವಾಗಿ ಗೋವು ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಿದೆ ಎಂದು ಯತ್ನಾಳ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News