ರಾಜ್ಯದಲ್ಲಿ ಸನಾತನ ಸಂಸ್ಥೆ ನಿಷೇಧವಾಗಬೇಕು: ಕೆ.ಎಲ್ ಅಶೋಕ್

Update: 2018-08-25 13:27 GMT

ಚಿಕ್ಕಮಗಳೂರು, ಆ.25: ಪ್ರಜಾತಂತ್ರದ ಮೌಲ್ಯಗಳಿಗೆ ಧನಿಯಾಗಿದ್ದ ಗೌರಿ ಲಂಕೇಶ್ ಹತ್ಯೆಯಾಗಿ ಸೆ.5ಕ್ಕೆ ಒಂದು ವರ್ಷವಾಗುತ್ತಿದ್ದು, ಸಂಶೋಧಕ ಎಂ.ಎಂ.ಕಲಬುರಗಿ ಹತ್ಯೆಯಾಗಿ ಆ.30ಕ್ಕೆ 3 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಆ.30ರಿಂದ ಸೆ.5ರವರೆಗೆ ರಾಜ್ಯಾದ್ಯಂತ ಗೌರಿ ಲಂಕೇಶ್ ಬಳಗ ಹಾಗೂ ಗೌರಿ ಸ್ಮಾರಕ ಟ್ರಸ್ಟ್ ವತಿಯಿಂದ ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹವನ್ನು ಆಚರಿಸಲಾಗುವುದು ಎಂದು ಪ್ರಗತಿಪರ ಚಿಂತಕ ಹಾಗೂ ಗೌರಿ ಲಂಕೇಶ್ ಬಳಗದ ಕೆ.ಎಲ್.ಅಶೋಕ್ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಪ್ರಜಾಪ್ರಭುತ್ವದ ಆಶೋತ್ತರಗಳ ವಾಹಕಶಕ್ತಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಚಿಂತಕರು, ವಿಚಾರವಾದಿಗಳು, ಬುದ್ಧಿಜೀವಿಗಳು, ಪತ್ರಕರ್ತರು, ಲೇಖಕರನ್ನು ಗನ್ ಮೂಲಕ ಹೆದರಿಸುವ, ಹತ್ಯೆ ಮಾಡುವ ಸಂಸ್ಕೃತಿ ದೇಶಾದ್ಯಂತ ಹೆಚ್ಚುತ್ತಿದೆ. ಇದರ ಹಿಂದೆ ದೇಶದ್ರೋಹಿ ಸಂಘಟನೆಗಳ ಜಾಲ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿರುವುದು ಎಸ್‍ಐಟಿ ತನಿಖೆಯಿಂದಲೇ ರುಜುವಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಜಾತಂತ್ರದ ಮೌಲ್ಯಗಳನ್ನು ಕಾಪಾಡಲು ಹಾಗೂ ನಿರ್ಭೀತ ವಾತಾವರಣ ಸೃಷ್ಟಿಸಿ, ಸಮಾನತೆ, ಸೌಹಾರ್ದಕ್ಕಾಗಿ ದನಿ ಎತ್ತಲು ಸಹಕಾರಿಯಾಗುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಅಭಿವ್ಯಕ್ತಿ ಹತ್ಯೆ ಸಪ್ತಾಹ ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹದ ಉದ್ಘಾಟನೆ ಆ.30ರಂದು ಕಲಬುರಗಿಯಲ್ಲಿ ನಡೆಯಲಿದ್ದು, ಅಂದು ಕಲಬುರ್ಗಿ ದಿನ ಎಂಬ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದ ಅವರು, ಸೆ.5ರಂದು ಗೌರಿ ದಿನದ ಅಂಗವಾಗಿ ಬೆಂಗಳೂರಿನಲ್ಲಿ ಗೌರಿ ಲಂಕೇಶ್ ಸಮಾಧಿ ಬಳಿ ಬೆಳಗೆ 8ಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು, ಬುದ್ಧಿಜೀವಿಗಳು, ಕಲಾವಿದರು ಶ್ರದ್ಧಾಂಜಲಿ ಅರ್ಪಣೆ ಕಾರ್ಯಕ್ರಮ ನಡೆಸಲಿದ್ದಾರೆ. ಸಪ್ತಾಹದ ಅಂಗವಾಗಿ ಪ್ರತೀ ಜಿಲ್ಲೆಗಳಲ್ಲಿ ವಿವಿಧ ದಲಿತ, ಪ್ರಗತಿಪರ, ರೈತ ಸಂಘಟನೆಗಳ ಸದಸ್ಯರು ವಿವಿಧ ವಿಚಾರ ಸಂಕಿರಣ, ಸಮಾವೇಶ, ಮಾನವ ಸರಪಳಿಯಂತಹ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದಾರೆಂದು ಅವರು ಮಾಹಿತಿ ನೀಡಿದರು.

ಸಪ್ತಾಹದ ಅಂಗವಾಗಿ ಸೆ.5ರಂದು ಬೆಳಗೆ 10:30ಕ್ಕೆ ಬೆಂಗಳೂರಿನಲ್ಲಿ "ಮೋದಿ..ಮೋದಿ.. ಮಂದಿನ ಹತ್ಯೆ ಯಾರದ್ದು?" ಎಂಬ ಘೋಷಣೆಯೊಂದಿಗೆ ರಾಜಭವನ ಚಲೋ ಜಾಥಾದ ಭಾಗವಾಗಿ ಪ್ರತಿರೋಧದ ನಡಿಗೆ ನಡೆಯಲಿದ್ದು, ಮಧ್ಯಾಹ್ನ 2:30ಕ್ಕೆ ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಆಡಿಟೋರಿಯಮ್‍ನಲ್ಲಿ ಸಾಂಸ್ಕೃತಿಕ ಪ್ರತಿರೋಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದ ಅವರು, ಈ ಕಾರ್ಯಕ್ರಮದಲ್ಲಿ ಸ್ವಾಮಿ ಅಗ್ನಿವೇಶ್, ಜಿಗ್ನೇಶ್ ಮೆವಾನಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ಉಮರ್ ಖಾಲಿದ್, ತೀಸ್ತಾ ಸೆಟಲ್ವಾಡ್, ಪ್ರಕಾಶ್ ರೈ, ಯೋಗೇಶ್ ಮಾಸ್ಟರ್, ಮುಕ್ತ ದಾಬೋಲ್ಕರ್, ಭಗವಾನ್, ಉಮಾದೇವಿ ಕಲಬುರಗಿ, ಕವಿತಾ ಲಂಕೇಶ್, ನರೇಂದ್ರನಾಯಕ್, ಮೇಘನಾ ಪನ್ಸಾರ್ ಸೇರಿದಂತೆ ಕನ್ನಡ ಚಲನಚಿತ್ರ ರಂಗದ ಗೌರಿ ಆಪ್ತರು ಭಾಗವಹಿಸಲಿದ್ದಾರೆ.

ಸಾಂಸ್ಕೃತಿಕ ಪ್ರತಿರೋಧ ಕಾರ್ಯಕ್ರಮದಲ್ಲಿ ಎಂ.ಡಿ.ಪಲ್ಲವಿ, ಪಿಚ್ಚಳ್ಳಿ ಶ್ರೀನಿವಾಸ್, ಜೆನ್ನಿ, ಶಿವಪ್ರಸಾದ್, ಬಿ.ಜಯಶ್ರೀ, ಮಣಿ ನಾಲ್ಕೂರು ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ನಾಡಿನ ಪ್ರಗತಿಪರರು, ಸಾರ್ವಜನಿಕರು, ಗೌರಿ ಅಭಿಮಾನಿಗಳು, ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಬೇಕೆಂದು ಅಶೋಕ್ ಮನವಿ ಮಾಡಿದರು.

ಸದ್ಯ ದೇಶದಲ್ಲಿ ಕೇಸರಿ ಭಯೋತ್ಪಾದನೆ ತ್ರಿಶೂಲದಿಂದ ಗನ್‍ಗೆ ತಿರುಗಿದೆ. ಗೌರಿ ಹತ್ಯೆ ಮಾಡಿದವನು ಶ್ರೀರಾಮ ಸೇನೆಯ ಪರಶುರಾಮ್ ವಾಗ್ಮೋರೆ ಎಂಬುದು ಸಾಭೀತಾಗಿದೆ. ಗೌರಿ ಸೇರಿದಂತೆ ವಿಚಾರವಾದಿಗಳ ಹತ್ಯೆಯ ಹಿಟ್‍ಲಿಸ್ಟ್ ನ ಮಾಸ್ಟರ್ ಮೈಂಡ್ ಅಮೂಲ್‍ ಕಾಳೆಯಾಗಿದ್ದಾನೆ. ಹತ್ಯೆಗೆಸಂಚು ರೂಪಿಸಿದ ಬಹತೇಕರು ಸನಾತನ ಸಂಸ್ಥೆಯ ಸದಸ್ಯರಾಗಿದ್ದಾರೆ. ಈ ಗುಂಪಿನ ಸದಸ್ಯರನ್ನು ಬಂಧಿಸುವುದರೊಂದಿಗೆ ಇವರಿಗೆ ರಾಜಕೀಯವಾಗಿ ನೆರವು ನೀಡಿ, ಆಶ್ರಯ, ಆರ್ಥಿಕ ನೆರವು ನೀಡಿದವರನ್ನೂ ಕೂಡಲೇ ಬಂಧಿಸಬೇಕೆಂದು ಇದೇ ವೇಳೆ ಕೆ.ಎಲ್.ಅಶೋಕ್ ಸರಕಾರವನ್ನು ಒತ್ತಾಯಿಸಿದರು.

ಬಳಗದ ಸಂಚಾಲಕ ಗೌಸ್ ಮೊಹಿದ್ದೀನ್ ಮಾತನಾಡಿ, ಸಪ್ತಾಹದ ಅಂಗವಾಗಿ ಸೆ.3ರಂದು ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್‍ನಲ್ಲಿ ಬೆಳಗ್ಗೆ ವಿವಿಧ ದಲಿತ, ರೈತ, ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಚಿಂತಕಿ ಗೌರಿಯನ್ನು ಮತಿಗೇಡಿಗಳು ಕೊಂದಿರಬಹುದು, ಆದರೆ ಅವರ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲ ಎಂಬುದನ್ನು ಈ ಕಾರ್ಯಕ್ರಮದ ಮೂಲಕ ವ್ಯಕ್ತಪಡಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಸಂಚಾಲಕರಾದ ರಾಜರತ್ನಂ, ಹಸನಬ್ಬ, ಕೃಷ್ಣಮೂರ್ತಿ, ಹಾಂದಿ ಲಕ್ಷ್ಣಣ್ ಮತ್ತಿತರರು ಉಪಸ್ಥಿತರಿದ್ದರು.

ಸನಾತನ ಸಂಸ್ಥೆ ಭಯೋತ್ಪದನಾ ಸಂಸ್ಥೆಯೆಂದು ಘೋಷಿಸಿ ನಿಷೇಧ ಹೇರಬೇಕು:
ಗೌರಿ ಹತ್ಯೆಯ ಹಿಂದೆ ಸನಾತನ ಸಂಸ್ಥೆಗಳ ಕೈವಾಡವಿದೆ ಎಂದು ಈ ಹಿಂದೆ ನಾಡಿನ ಪ್ರಜ್ಞಾವಂತರು ಶಂಕೆ ವ್ಯಕ್ತಪಡಿಸಿದ್ದರು. ಆಗ ಇದಕ್ಕೆ ಸಂಘಪರಿವಾರ ವಿರೋಧ ವ್ಯಕ್ತಪಡಿಸಿತ್ತು. ಪ್ರಸಕ್ತ ಗೌರಿ ಹತ್ಯೆಯ ತನಿಖೆ ಕೈಗೊಂಡಿರುವ ಎಸ್‍ಐಟಿ ಹತ್ಯೆಯ ಹಿಂದೆ ಸನಾತನ ಸಂಸ್ಥೆ ಇರುವುದನ್ನು ರುಜುವಾತು ಪಡಿಸುತ್ತಿದೆ. ಗೌರಿ ಮಾತ್ರವಲ್ಲದೇ ಎಲ್ಲ ವಿಚಾರವಾದಿಗಳ ಹತ್ಯೆಯಲ್ಲೂ ಈ ಸಂಸ್ಥೆಯ ಕೈವಾಡ ಇರುವುದು ಬೆಳಕಿಗೆ ಬರುತ್ತಿದೆ. ರಾಜ್ಯ ಹಾಗೂ ದೇಶದಲ್ಲಿ ಕೋಮುವಾದ ಹಾಗೂ ಪ್ರಜಾತಂತ್ರದ ಪರವಾಗಿ ಧನಿ ಎತ್ತುವವರನ್ನು ಪಟ್ಟಿ ಮಾಡಿಕೊಂಡು ಗನ್ ಮೂಲಕ ಬಗ್ಗು ಬಡಿಯಲು ಈ ಸಂಸ್ಥೆ ಸಂಚು ರೂಪಿಸಿರುವುದು ತನಿಖೆಯಿಂದಲೇ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಸನಾತನ ಸಂಸ್ಥೆಗೆ ರಾಜ್ಯದಲ್ಲಿ ನಿಷೇಧ ಹೇರಬೇಕು. ಈ ಸಂಬಂಧ ಶೀಘ್ರ ಸಿಎಂ ಹಾಗೂ ಗೃಹಮಂತ್ರಿ ಭೇಟಿಯಾಗಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು.

- ಕೆ.ಎಲ್.ಅಶೋಕ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News