ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ 95 ಕೋಟಿ ರೂ. ನಷ್ಟ: ಡಿಸಿ ಶ್ರೀರಂಗಯ್ಯ

Update: 2018-08-25 18:37 GMT

ಚಿಕ್ಕಮಗಳೂರು, ಆ.25: ಜಿಲ್ಲೆಯಲ್ಲಿ ಇದುವರೆಗೂ 95 ಕೋಟಿ ರೂ. ಮಳೆಹಾನಿಯಾಗಿರುವ ವರದಿ ಸರಕಾರಕ್ಕೆ ಸಲ್ಲಿಸಲಾಗಿದೆ. ಆದರೆ ಇನ್ನೂ ಸಂಪೂರ್ಣ ನಷ್ಟದ ವರದಿ ಸಿದ್ಧವಾಗಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ತಿಳಿಸಿದರು.

ಶನಿವಾರ ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳ ತಂಡ ರಚಿಸಲಾಗಿದೆ. ಕಾಫಿ ಬೆಳೆ ಹಾನಿ ಸಮೀಕ್ಷೆಗೆ ಕಾಫಿಮಂಡಳಿ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿಗಳ ಜಂಟಿ ತಂಡ ರಚಿಸಲಾಗಿದೆ ಎಂದು ತಿಳಿಸಿದರು 

ಕಾಫಿ ಮಂಡಳಿಯ ಉಪನಿರ್ದೇಶಕರನ್ನು ಕೊಡಗು ಜಿಲ್ಲೆಗೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾಫಿ ಮಂಡಳಿಯ ಕೆಳಗಿನ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಿದ್ದೇನೆ. ಅವರು ಈಗ ತಾತ್ಕಾಲಿಕವಾಗಿ ನಷ್ಟದ ಕುರಿತು ವರದಿ ನೀಡಿದ್ದಾರೆ. ಅವರು ಬೇರೆ ಬೇರೆ ಪ್ರದೇಶಗಳನ್ನು ವರ್ಗೀಕರಿಸಿ ನಷ್ಟದ ವರದಿ ಸಲ್ಲಿಸಿದ್ದಾರೆ. ವರದಿ ಅಪೂರ್ಣವಾಗಿರುವುದರಿಂದ ಸಮಗ್ರ ಸಮೀಕ್ಷೆ ನಡೆಸಿ ಸಂಪೂರ್ಣ ವರದಿ ಸಲ್ಲಿಸುವಂತೆ ಸೂಚಿಸಿರುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದೆ. ಆದರೆ ಗುಡ್ಡ ಕುಸಿತ ಮನೆಗೋಡೆ ಬಿರುಕು ಕಾಣಿಸಿಕೊಳ್ಳುತ್ತಿದೆ. ಮಳೆ ಹೆಚ್ಚು ಆಗಿದ್ದರಿಂದ ಸಮೀಕ್ಷೆ ನಡೆಸಲು ವಿಳಂಬವಾಗಿದೆ. ಸದ್ಯದಲ್ಲಿಯೇ ಸಮಗ್ರ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. 

ಜಿಲ್ಲಾದ್ಯಂತ ಸತತ ಮಳೆ ಆಗುತ್ತಿದ್ದ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿತ್ತು. ಆದರೆ ಹರಿಹರಪುರ ಕಂದಾಯ ನಿರೀಕ್ಷಕ ತಫ್ತೀಕ್ ರನ್ನು ಕರ್ತವ್ಯ ಲೋಪದಿಂದ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು.

ಶುಕ್ರವಾರ ಕೊಪ್ಪ ತಾಲೂಕಿನ ಜಯಪುರ ಹೋಬಳಿಗೆ ತೆರಳಿದ್ದ ಸಂದರ್ಭದಲ್ಲಿ ಮಳೆಹಾನಿ ಮಳೆಹಾನಿಗೆ ಸೂಕ್ತ ಪರಿಹಾರ ದೊರಕುತ್ತಿಲ್ಲ ಎಂದು ದೂರುಗಳು ಬಂದಿದ್ದು, ತಾವು ಭೇಟಿ ನೀಡಿದ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ತಫ್ತೀಕ್ ಇರಲಿಲ್ಲ. ರಜೆ ಹಾಕದೆ ತೆರಳಿದ್ದಾರೆ ಎಂಬ ಮಾಹಿತಿ ತಹಶೀಲ್ದಾರರಿಂದ ದೊರೆಯಿತು. ಅನುಮತಿ ಪಡೆಯದೆ ಕರ್ತವ್ಯಕ್ಕೆ ಗೈರು ಹಾಜರಾಗಿದ್ದ ಹಿನ್ನೆಲೆ ಕಂದಾಯ ನಿರೀಕ್ಷಕರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
- ಶ್ರೀರಂಗಯ್ಯ, ಡಿಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News