ಆರ್‌ಜೆಡಿ ಜತೆ ಮೈತ್ರಿಗೆ ಮುಂದಾದ ಬಿಜೆಪಿ ಮಿತ್ರಪಕ್ಷಗಳು !

Update: 2018-08-26 03:59 GMT

ಪಾಟ್ನಾ, ಆ. 26: ಬಿಹಾರದಲ್ಲಿ ಎನ್‌ಡಿಎಗೆ ಆಘಾತ ನೀಡಲು ಬಿಜೆಪಿ ಮಿತ್ರಪಕ್ಷಗಳು ಮುಂದಾಗಿದ್ದು, ರಾಷ್ಟ್ರೀಯ ಜನತಾದಳ ಜತೆ ಮೈತ್ರಿ ಮಾಡಿಕೊಳ್ಳುವ ಸುಳಿವನ್ನು ಕೇಂದ್ರ ಸಚಿವ ಮತ್ತು ರಾಷ್ಟ್ರೀಯ ಲೋಕಸಮತಾ ಪಕ್ಷ (ಆರ್‌ಎಲ್‌ಎಸ್‌ಪಿ) ಮುಖಂಡ ಉಪೇಂದ್ರ ಕುಶ್ವಾಹ ನೀಡಿದ್ದಾರೆ.

2019ರ ಚುನಾವಣೆಗೆ ಮುನ್ನ ರಾಜಕೀಯ ಮರುಹೊಂದಾಣಿಕೆಯ ಸುಳಿವು ನೀಡಿರುವ ಅವರು, "ಯಾದವರ ಹಾಲು ಮತ್ತು ಕುಶ್ವಾಹರ ಅಕ್ಕಿ ಸೇರಿದರೆ ಒಳ್ಳೆಯ ಖೀರು ತಯಾರಿಸಬಹುದು" ಎಂದು ಸೂಚ್ಯವಾಗಿ ಹೇಳಿದ್ದಾರೆ.

ಯಾದವರು ಸಾಂಪ್ರದಾಯಿಕವಾಗಿ ಗೋಪಾಲನೆ ಮಾಡುವವರಾಗಿದ್ದು, ಬಹುತೇಕ ಮಂದಿ ಆರ್‌ಜೆಡಿ ಬೆಂಬಲಿಗರಾದರೆ, ಕೃಷಿಕ ಸಮುದಾಯದ ಕುಶ್ವಾಹರು ಇತರ ಹಿಂದುಳಿದ ವರ್ಗಕ್ಕೆ ಸೇರುತ್ತಾರೆ. ಬಹುತೇಕ ಇವರು ಆರ್‌ಎಲ್‌ಎಸ್‌ಪಿ ಬೆಂಬಲಿಗರು. ಎನ್‌ಡಿಎ ಜತೆ ಮುನಿಸಿಕೊಂಡಿರುವ ಉಪೇಂದ್ರ ಅವರ ಇತ್ತೀಚಿನ ಹೇಳಿಕೆಗಳು ಆರ್‌ಜೆಡಿ ಜತೆ ಸಾಮೀಪ್ಯ ಬೆಳೆಸುವುದನ್ನು ಖಾತ್ರಿಪಡಿಸಿವೆ.

ಇತರ ಹಿಂದುಳಿದ ವರ್ಗಗಳಿಗೆ ಶೇಕಡ 27ರಷ್ಟು ಮೀಸಲಾತಿ ನೀಡುವ ಶಿಫಾರಸ್ಸು ಮಾಡಿದ ಬಿ.ಪಿ.ಮಂಡಲ್ ಅವರ ಜನ್ಮಶತಮನೋತ್ಸವ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಕುಶ್ವಾಹ ಈ ಸುಳಿವು ನೀಡಿದರು.

"ಸಾಕಷ್ಟು ಯಾದವರು ಈ ಸಮಾರಂಭಕ್ಕೆ ಬಂದಿದ್ದಾರೆ. ಯಾದವರ ಹಾಲು ಮತ್ತು ಕುಶ್ವಾಹರ ಅಕ್ಕಿಯಿಂದ ಒಳ್ಳೆಯ ಖೀರು ಮಾಡಬಹುದು. ಆದರೆ ಇದಕ್ಕೆ ಅಲ್ಪಸಂಖ್ಯಾತರು ಹಾಗೂ ದಲಿತರ ಮೂಲಕ "ಡ್ರೈಫ್ರೂಟ್ಸ್" ಬೇಕು ಎಂದು ಹೇಳಿದರು.

ಎನ್‌ಡಿಎ ತೆಕ್ಕೆಯಲ್ಲಿದ್ದರೂ, ಜೆಡಿಯು ಆಡಳಿತವನ್ನು ಕುಶ್ವಾಹ ಕಟುವಾಗಿ ಟೀಕಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಾಮೈತ್ರಿ ಸೇರುವಂತೆ ಆರ್‌ಜೆಡಿ ಆಹ್ವಾನ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News