ನಿಸರ್ಗದ ಕರೆ ಅಗೇಡಿ

Update: 2018-08-26 18:31 GMT

ನೆಲದ ಎದೆಬಡಿತವನ್ನು ಆಲಿಸಿ ಬರೆಯುವವರಲ್ಲಿ ಪ್ರಮುಖರು ಕೆ. ಪಿ. ಸುರೇಶ್. ಅಭಿವೃದ್ಧಿಯ ಅವಸರಕ್ಕೆ ಸಿಕ್ಕಿಕೊಂಡ ವರ್ತಮಾನ ತನ್ನ ಕಾಲ ಬುಡದ ನೆಲವನ್ನು ಮರೆತ ಪರಿಣಾಮವನ್ನು ತಮ್ಮ ಬರಹಗಳಲ್ಲಿ ಮನ ಮುಟ್ಟುವಂತೆ ಕಟ್ಟಿಕೊಡುತ್ತಾ ಬಂದವರು. ಮನುಕುಲದ ಅಳಿವುಉಳಿವಿನಲ್ಲಿ ಪ್ರಮುಖ ಪಾತ್ರವಹಿಸುವ ಜೀವವೈವಿಧ್ಯ ಸರಪಣಿ ದುರ್ಬಲಗೊಳ್ಳುತ್ತಿರುವುದನ್ನು ಬೇರೆ ಬೇರೆ ವಿಷಯಗಳ ಮೂಲಕ ಅವರು ವಿವಿಧ ಪತ್ರಿಕೆಗಳಲ್ಲಿ ಪ್ರಸ್ತಾಪಿಸುತ್ತಾ ಬಂದಿದ್ದಾರೆ. ಇಲ್ಲಿ, ಅವರ ಅಂಕಣ ಬರಹಗಳ ಸಂಕಲನ ‘ಅಗೇಡಿ’ ಇದೀಗ ಹೊರಬಂದಿದ್ದು, ಪರಿಸರ ಮತ್ತು ಸಾಹಿತ್ಯವಲಯದಲ್ಲಿ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದೆ.
  ಅಗೇಡಿಯ ಕೇಂದ್ರ ವಸ್ತು ಕೃಷಿಯೇ ಆಗಿದ್ದರೂ, ಅದು ಸಹಜವಾಗಿಯೇ ನೆಲ, ಜಲ, ಗಾಳಿ, ಪರಿಸರ ಹೀಗೆ ದಾಟಿಕೊಂಡು ಮನುಷ್ಯನನ್ನು ತಲುಪುತ್ತದೆ. ಕೃಷಿಯೆಂಬ ಸೃಜನಶೀಲ ಚಟುವಟಿಕೆಯನ್ನು ಆಹುತಿ ತೆಗೆದುಕೊಳ್ಳುತ್ತಿರುವ ಸಂವೇದನಾಹೀನವಾದ ಅಭಿವೃದ್ಧಿ ಮತ್ತು ಮಾನವ ಸ್ವಾರ್ಥದ ದುಷ್ಪರಿಣಾಮಗಳ ಕಡೆಗೆ ಈ ಕೃತಿ ಪದೇ ಪದೇ ಬೆಟ್ಟು ಮಾಡಿ ತೋರಿಸುತ್ತದೆ. ಇಲ್ಲಿ ಒಟ್ಟು ನಲವತ್ತೈದು ಬರಹಗಳಿವೆ. ಲಾಭಬಡುಕತನ ಮತ್ತು ಲಾಲಸೆಯ ಬಲೆಗೆ ಸಿಲುಕಿಕೊಂಡ ಮನುಷ್ಯ ಹೇಗೆ ತಾನೇ ಹೆಣೆದ ಬಲೆಗೆ ಸಿಲುಕಿಕೊಂಡು ನರಳುತ್ತಿದ್ದಾನೆ ಎನ್ನುವುದರೊಂದಿಗೆ ಅವರು ತಮ್ಮ ಬರಹವನ್ನು ಆರಂಭಿಸುತ್ತಾರೆ. ಇತ್ತೀಚೆಗೆ ಕರ್ನಾಟಕದಲ್ಲಿ ಪ್ರಸನ್ನ ನೇತೃತ್ವದಲ್ಲಿ ಆರಂಭವಾಗಿರುವ ಬದನವಾಳುವನ್ನು ಪ್ರಸ್ತಾಪಿಸುತ್ತಾ, ನಮ್ಮ ಹಳ್ಳಿಗಳು ಗಾರೆದ್ದು ಹೋಗಿರುವ ರೂಪಕ ಬದನವಾಳು ಎಂದು ಕರೆಯುತ್ತಾರೆ. ದೇಶ ಅಭಿವೃದ್ಧಿಯ ಕುರಿತಂತೆ ಮಾತನಾಡುತ್ತಿರುವ ಹೊತ್ತಿನಲ್ಲಿ, ‘ದುರ್ಭರಗೊಳ್ಳುತ್ತಿರುವ ಹಳ್ಳಿಗಲು- ಕಲುಷಿತಗೊಳ್ಳುತ್ತಿರುವ ನಗರಗಳು ಅಭಿವೃದ್ಧಿಯ ಲಕ್ಷಣವಾಗುವುದು ಸಾಧ್ಯವಿಲ್ಲ’’ ಎಂದು ಲೇಖಕರು ಅಭಿಪ್ರಾಯ ಪಡುತ್ತಾರೆ. ಟಾಗೋರರ ಶ್ರೀನಿಕೇತನ, ಗಾಂಧೀಜಿಯ ಗ್ರಾಮ ಸ್ವರಾಜ್ಯದ ಬೆಳಕಿನಲ್ಲೇ ಅವರ ಹೆಚ್ಚಿನ ಲೇಖನಗಳು ಅರಳಿವೆ. ವರ್ತಮಾನದ ರೈತರ ಸಮಸ್ಯೆಗಳನ್ನು ಎತ್ತಿ ತೋರಿಸುವ ಕೆಲಸವನ್ನಷ್ಟೇ ಅಲ್ಲ, ಅದಕ್ಕೆ ಕಂಡು ಕೊಳ್ಳಬಹುದಾದ ಪರಿಹಾರವನ್ನೂ ಅವರು ಗುರುತಿಸುತ್ತಾರೆ. ‘ನಾವು ಮರೆತ ಶ್ರೀನಿಕೇತನ ಪ್ರಯೋಗ’ ಲೇಖನದಲ್ಲಿ, ಮರಳಿ ಬಾರದಷ್ಟು ನಮ್ಮ ಗ್ರಾಮಗಳು ಆಧುನಿಕ ಜಗತ್ತಿಗೆ ತೆರೆದು ಬದಲಾಗುತ್ತಿರುವ ಈ ದಿನಗಳಲ್ಲಿ ಥಾಕೂರ್ ಅಥವಾ ಗಾಂಧಿಯ ಸ್ವಾಯತ್ತ ಉದಾತ್ತ ಗ್ರಾಮ ಸಮುದಾಯ ಹೇಗೆ ಪರಿಹಾರವಾಗಬಹುದಿತ್ತು ಎಂದು ಅವರು ಕೊರಗುತ್ತಾರೆ. ಸರಕಾರ ಏದುಸಿರು ಬಿಟ್ಟುಕೊಂಡು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅನುಷ್ಠಾನಗೊಳಿಸುತ್ತಿರುವ ಎಲ್ಲ ಕಾರ್ಯಕ್ರಮಗಳೂ ಉಕ್ಕುವ ಹಾಲಿಗೆ ನೀರು ಸಿಂಪಡಿಸಿದಂತಥಾ ತಾತ್ಕಾಲಿಕ ಸಮಾಧಾನ ನೀಡುತ್ತಾ, ಪರಾವಲಂಬಿತನವನ್ನು ಹೆಚ್ಚಿಸಿವೆ ಎಂದು ಅಭಿಪ್ರಾಯ ಪಡುತ್ತಾರೆ. ರೈತ ಮಾತ್ರವಲ್ಲ, ಇಡೀ ಜೀವನ ಶೈಲಿಯೇ ನಿಸರ್ಗದೆಡೆಗೆ ಮರಳುವ ಅನಿವಾರ್ಯತೆಯನ್ನು ಈ ಕೃತಿ ಒತ್ತಿ ಹೇಳುತ್ತದೆ.
 ಸದ್ಯ ಚರ್ಚಿಸಲ್ಪಡುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸವಾಲುಗಳಿಗೆ ಉತ್ತರ ಕಂಡುಕೊಳ್ಳಲು ಯತ್ನಿಸುವ ಅಪರೂಪದ ಕೃತಿ ಅಗೇಡಿ. ರೂಪ ಹಾಸನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 236. ಮುಖಬೆಲೆ 180. ಆಸಕ್ತರು 93422 74331 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News