ಕೊಡಗಿನಲ್ಲಿ ಮತ್ತೆ ಮಳೆಯ ಅಬ್ಬರ

Update: 2018-08-27 13:50 GMT

ಮಡಿಕೇರಿ, ಆ.27: ಕೊಡಗು ಜಿಲ್ಲೆಯಲ್ಲಿ ನಡುನಡುವೆ ಬಿಡುವು ನೀಡಿ ಉತ್ತಮ ಮಳೆಯಾಗುತ್ತಿರುವುದರಿಂದ ಸಂತ್ರಸ್ತರ ಕೇಂದ್ರಗಳಲ್ಲಿರುವ ಗ್ರಾಮೀಣ ಪ್ರದೇಶ ಜನತೆ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಗ್ರಾಮಗಳಿಗೆ ತೆರಳಿ ತಮ್ಮ ವಾಸ ಸ್ಥಾನಗಳನ್ನು ನೋಡಿಕೊಂಡು ಬರುವುದಕ್ಕೆ ಮುಂದಾಗಿದ್ದವರೂ ಭಯದಿಂದ ಪರಿಹಾರ ಕೇಂದ್ರಗಳಲ್ಲೇ ಉಳಿದುಕೊಂಡಿದ್ದಾರೆ. ಈಗಾಗಲೇ ವರುಣನ ರೌದ್ರಾವತಾರವನ್ನು ಕಣ್ಣಾರೆ ಕಂಡು ಜೀವ ಕೈಯ್ಯಲ್ಲಿ ಹಿಡಿದು ಉಟ್ಟಬಟ್ಟೆಯಲ್ಲೇ ಬೀದಿಗೆ ಬಿದ್ದಿರುವ ಈ ನಿರಾಶ್ರಿತರಲ್ಲಿ ಮುಂದೇನಾಗುವುದೋ ಎಂಬ ಭಯ ಆವರಿಸಿದೆ.

ಕರಿಕೆ ಗ್ರಾಮದಲ್ಲಿ ಅಂತರ್ಜಲ ಸಂಚಾರದ ಶಬ್ಧ ಕೇಳಿ ಬಂದ ಹಿನ್ನೆಲೆಯಲ್ಲಿ ಚೆತ್ತುಕಾಯ ಸಮೀಪ ಕುಂಡತ್ತಿಕಾನ ಎಂಬಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಮುಂಜಾಗೃತಾ ಕ್ರಮವಾಗಿ ಈ ಭಾಗದ ಒಂದು ಕುಟುಂಬವನ್ನು ಸ್ಥಳಾಂತರಿಸಲಾಗಿದೆ. ಸ್ಥಳಕ್ಕೆ ಗ್ರಾ.ಪಂ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿದ್ದರು. ಮಂಜಿನ ನಗರಿ ಮಡಿಕೇರಿಯಲ್ಲಿ ಈ ಬಾರಿ ಇಡೀ ಮುಂಗಾರು ಹಂಗಾಮಿನಲ್ಲಿ ಸುರಿಯಬೇಕಾದ ಪ್ರಮಾಣಕ್ಕಿಂತ ಹೆಚ್ಚು ಮಳೆ ಕೇವಲ 25 ದಿನಗಳಲ್ಲಿ ಸುರಿದಿದ್ದು ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಅಲ್ಪಾವಧಿಯಲ್ಲಿ ಸುರಿದ ಈ ಮಳೆ ಊರಿಗೆ ಊರೇ ಕೊಚ್ಚಿಹೋಗುವಂತೆ ಮಾಡಿದ್ದು, ಈ ಹಿಂದೆ 1931ರ ಆಗಸ್ಟ್ ನಲ್ಲಿ 1,559.3 ಮಿ.ಮೀ. ಮಳೆ ಬಿದ್ದಿದ್ದು ಸಾರ್ವಕಾಲಿಕ ದಾಖಲೆಯಾಗಿತ್ತು.

ಮಡಿಕೇರಿಯಲ್ಲಿ ಮುಂಗಾರು ಹಂಗಾಮಿನಲ್ಲಿ ಅಂದರೆ ಜೂ.1ರಿಂದ ಆ.24ರವರೆಗೆ ಸುರಿಯಬೇಕಾಗಿದ್ದ ವಾಡಿಕೆ ಮಳೆ 2,007 ಮಿ.ಮೀ. ಆದರೆ ಈ ಬಾರಿ ಆಗಸ್ಟ್ ತಿಂಗಳೊಂದರಲ್ಲೇ (ಆ.25 ರವರೆಗೆ) 2060 ಮಿ.ಮೀ ಮಳೆಯಾಗಿದ್ದು, ಇದು ಹೆಚ್ಚು ಕಡಿಮೆ ವರ್ಷದ ಮಳೆಗೆ ಸರಿಸಮವಾಗಿದೆ ಎನ್ನಲಾಗುತ್ತಿದೆ.  
ಇನ್ನು 2,060 ಮಿ.ಮೀ.ನಲ್ಲಿ ಆಗಸ್ಟ್ 10ರಿಂದ 20ರ ಅವಧಿಯಲ್ಲೇ 867 ಮಿ.ಮೀ. ಮಳೆಯಾಗಿದ್ದು, ಈ ಹತ್ತು ದಿನಗಳ ವಾಡಿಕೆ ಮಳೆ 208.7 ಮಿ.ಮೀ.ನಷ್ಟಿರಬೇಕಿತ್ತು. ಅದೇ ರೀತಿ, ಜೂನ್-ಆಗಸ್ಟ್ ಅಂತ್ಯದವರೆಗೆ ಕೊಡಗಿನ ವಾಡಿಕೆ ಮಳೆ 1,909.5 ಮಿ.ಮೀ.ಗಳಾದರೆ, ಪ್ರಸಕ್ತ ಸಾಲಿನಲ್ಲಿ ಬಿದ್ದ ಮಳೆ 3,229.3 ಮಿ.ಮೀ.

ಇನ್ನು ಮಡಿಕೇರಿಯ ವಾರ್ಷಿಕ ವಾಡಿಕೆ ಮಳೆ 3,320 ಮಿ.ಮೀ. ಆಗಿದ್ದು, ಈಗಾಗಲೇ (ಆ.27ರವರೆಗೆ) 5146 ಮಿ.ಮೀ. ಮಳೆಯಾಗಿದೆ. ಈ ಮಧ್ಯೆ ಆಗಸ್ಟ್ 17ರಂದು ಒಂದೇ ದಿನದಲ್ಲಿ 300 ಮಿ.ಮೀ. ಮಳೆ ಸುರಿದಿದ್ದು, ಇದು ಸಾರ್ವಕಾಲಿಕ ದಾಖಲೆ. ಈ ಅಂಕಿ-ಸಂಖ್ಯೆಗಳು ಮಳೆಯ ತೀವ್ರತೆಗೆ ಸಾಕ್ಷಿಯಾಗಿದ್ದು, ಮಳೆಯ ಈ ತೀವ್ರತೆಯೇ ಮಡಿಕೇರಿ ಸುತ್ತಮುತ್ತ ನಡೆದ ದುರಂತಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

'ಸಾಮಾನ್ಯವಾಗಿ ವಾಯುಭಾರ ಕುಸಿತ ಮತ್ತಿತರ ಬದಲಾವಣೆಗಳಾದರೂ ಈ ಪ್ರಮಾಣದಲ್ಲಿ ಮಳೆಯಾಗುವುದಿಲ್ಲ. ಆದರೆ, ಕೊಡಗು ಜಿಲ್ಲೆಯಲ್ಲಿ ಈ ಪರಿಯ ಮಳೆ ನಮಗೂ ಅಚ್ಚರಿ ಮೂಡಿಸಿದೆ. ಸಾಮಾನ್ಯವಾದ ಬದಲಾವಣೆಗಳ ನಡುವೆ ದಾಖಲೆ ಮಳೆಯಾಗಿದ್ದು, ಇದಕ್ಕೆ ಕಾರಣಗಳು ನಿಖರವಾಗಿ ಗೊತ್ತಾಗುತ್ತಿಲ್ಲ. ಈ ಬಗ್ಗೆ ಅಧ್ಯಯನ ಮಾಡುವ ಅವಶ್ಯಕತೆ ಇದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ.ಎಸ್. ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

ಮಳೆ ವಿವರ: ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ 10.33 ಮಿ.ಮೀ.ಮಳೆ ದಾಖಲಾದೆಯಾದರೂ, ಆ ನಂತರದ ಅವಧಿಯಲ್ಲಿ ಹೆಚ್ಚಿನ ಮಳೆಯಾಗಿದೆ.

ಮಡಿಕೇರಿ ತಾಲೂಕಿನಲ್ಲಿ 18 ಮಿ.ಮೀ. ವೀರಾಜಪೇಟೆ ತಾಲೂಕಿನಲ್ಲಿ 4.43 ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 8.55 ಮಿ.ಮೀ. ಮಳೆ ದಾಖಲಾಗಿದ್ದು, ವರ್ಷಾರಂಭದಿಂದ ಇದುವರೆಗೆ ಜಿಲ್ಲೆಯಲ್ಲಿ 3638.43 ಮಿ.ಮೀ ಮಳೆಯಾದಂತಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಮಳೆಯ ಪ್ರಮಾಣ 1617.57 ಮಿ.ಮೀ.ನಷ್ಟಿತ್ತು. 

ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರದನ್ವಯ ಮಡಿಕೇರಿ ಕಸಬಾ 27.80, ನಾಪೋಕ್ಲು 8.60, ಸಂಪಾಜೆ 25, ಭಾಗಮಂಡಲ 10.60, ವೀರಾಜಪೇಟೆ ಕಸಬಾ 6.80, ಹುದಿಕೇರಿ 9, ಶ್ರೀಮಂಗಲ 2.20, ಪೊನ್ನಂಪೇಟೆ 5.60, ಅಮ್ಮತ್ತಿ 3, ಸೋಮವಾರಪೇಟೆ ಕಸಬಾ 13, ಶನಿವಾರಸಂತೆ 10.20, ಶಾಂತಳ್ಳಿ 17.60, ಕೊಡ್ಲಿಪೇಟೆ 4.20, ಕುಶಾಲನಗರ 1, ಸುಂಟಿಕೊಪ್ಪ 5.30 ಮಿ.ಮೀ. ಮಳೆಯಾಗಿದೆ.       

ಹಾರಂಗಿ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಸೋಮವಾರ ಜಲಾಶಯದ ನೀರಿನ ಮಟ್ಟ 2855.46 ಅಡಿಗಳಷ್ಟಿತ್ತು. ಕಳೆದ ವರ್ಷ ಇದೇ ದಿನ 2858.45 ಅಡಿ ನೀರು ಸಂಗ್ರಹವಾಗಿತ್ತು. ಪ್ರಸಕ್ತ ಜಲಾಶಯಕ್ಕೆ 6000 ಕ್ಯುಸೆಕ್ ನೀರು ಹರಿದು ಬರುತ್ತಿದ್ದು,  ಕಳೆದ ವರ್ಷ ಇದೇ ದಿನಾಂಕದಂದು ನೀರಿನ ಒಳಹರಿವು 6245 ಕ್ಯುಸೆಕ್‍ನಷ್ಟಿತ್ತು. ಇದೀಗ ಜಲಾಶಯದಿಂದ ನದಿಗೆ 3600 ಕ್ಯುಸೆಕ್ ಹಾಗೂ ನಾಲೆಗೆ 1600 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News