ಸನಾತನ ಸಂಸ್ಥೆ ನಿಷೇಧಕ್ಕೆ ಮತ್ತೆ ಪ್ರಸ್ತಾವ ಸಲ್ಲಿಸಲಿರುವ ಎಟಿಎಸ್

Update: 2018-08-27 11:30 GMT

ಮುಂಬೈ, ಆ.27: ಸನಾತನ ಸಂಸ್ಥೆಯನ್ನು ನಿಷೇಧಿಸಬೇಕೆಂದು ತಾನು ಮಾಡಿರುವ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ ಸರಕಾರ ಕೇಂದ್ರ ಸರಕಾರಕ್ಕೆ ಮನವಿ ಕಳುಹಿಸಿದ ಬೆನ್ನಲ್ಲೇ ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ಪಡೆ (ಎಟಿಎಸ್) ಕೂಡ ಸನಾತನ ಸಂಸ್ಥಾಕ್ಕೆ ಸಂಬಂಧಿಸಿದಂತೆ ಹೊಸ ದಾಖಲೆ ‘ಡೋಸ್ಸಿಯರ್’ ತಯಾರಿಸುತ್ತಿದೆ ಎಂದು indianexpress.com ವರದಿ ಮಾಡಿದೆ.

ಇತ್ತೀಚೆಗೆ ತಾನು ಅಕ್ರಮ ಚಟುವಟಿಕೆಗಳು ನಿಯಂತ್ರಣ ಕಾಯಿದೆಯನ್ವಯ ಬಂಧಿಸಿರುವ ಐದು ಮಂದಿಗೆ ಸಂಬಂಧಿಸಿದಂತೆಯೂ ಎಟಿಎಸ್ ಸರಕಾರಕ್ಕೆ ವರದಿ ಸಲ್ಲಿಸಿದೆ. ಇತ್ತೀಚೆಗೆ ವೈಭವ್ ರಾವತ್, ಸುಧನ್ವ ಗೊಂಧಲೇಕರ್, ಶರದ್ ಕಲಸ್ಕರ್ ಹಾಗೂ ಮಾಜಿ ಶಿವಸೇನೆ ಕಾರ್ಪೊರೇಟರ್ ಶ್ರೀಕಾಂತ್ ಪಂಗರ್ಕರ್ ಎಂಬವರನ್ನು ಬಂಧಿಸಲಾಗಿದ್ದರೆ, ಶನಿವಾರ ಅವಿನಾಶ್ ಪವಾರ್ ಎಂಬ  ಶ್ರೀ ಶಿವಪ್ರತಿಷ್ಠಾನ್ ಹಿಂದುಸ್ತಾನ್ ಜತೆ ಸಂಬಂಧ ಹೊಂದಿರುವ ವ್ಯಕ್ತಿಯ ಬಂಧನದೊಂದಿಗೆ ಒಟ್ಟು ಐದು ಮಂದಿಯನ್ನು ಬಂಧಿಸಿದಂತಾಗಿದೆ. ಈತ ಮುಂಬೈ ಉಪನಗರಿ ಘಾಟ್ಕೊಪರ್ ನಿವಾಸಿಯೆಂದು ತಿಳಿದು ಬಂದಿದೆ.

ಗೊಂಧಲೇಕರ್ ವಿಚಾರಣೆ ವೇಳೆ ಪವಾರ್ ಹೆಸರು ತಿಳಿದು ಬಂತು. ಇಬ್ಬರೂ ಒಂದೇ ಸಂಘಟನೆಗೆ ಸೇರಿದವರಾಗಿದ್ದು ಪವಾರ್ ಮಜಗಾಂವ್ ಡಾಕ್ ಯಾರ್ಡ್ ನ ಉದ್ಯೋಗಿಯಾಗಿದ್ದಾನೆ. ಆದರೆ ಆತ ಶಿವ ಭಕ್ತನಾಗಿದ್ದು ಉಗ್ರವಾದಿಯಲ್ಲ ಎಂದು ಆತನ ಕುಟುಂಬ ಹೇಳಿಕೊಂಢಿದೆ.

ಈ ಐದು ಮಂದಿಯ ಬಂಧನದೊಂದಿಗೆ ಸನಾತನ ಸಂಸ್ಥೆ ನಿಷೇಧಿಸಬೇಕೆಂಬ ತನ್ನ ಬೇಡಿಕೆಗೆ ಹೆಚ್ಚಿನ ಬಲ ಬಂದಿದೆ ಎಂದು ಎಟಿಎಸ್ ಅಂದುಕೊಂಡಿದೆ. ಹೊರನೋಟಕ್ಕೆ ಈ ಐದು ಮಂದಿಗೂ  ಸನಾತನ ಸಂಸ್ಥಾಗೂ ಯಾವುದೇ ಸಂಬಂಧವಿಲ್ಲದಂತೆ ಕಂಡು ಬಂದರೂ ಅವರ ಸಾಮಾಜಿಕ ಜಾಲತಾಣ ಖಾತೆಗಳು, ಇಮೇಲ್, ಕರೆ ಮಾಹಿತಿ ವಿವರಗಳು, ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ ಸಂಬಂಧವಿರುವಂತೆ ಕಂಡು ಬಂದಿದೆ ಎಂದೂ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಮಹಾರಾಷ್ಟ್ರ ಸರಕಾರ ಈ ಹಿಂದೆ 2011 ಹಾಗೂ 2015ರಲ್ಲಿ ಸನಾತನ ಸಂಸ್ಥೆ ಸಂಘಟನೆ ನಿಷೇಧ ಪ್ರಸ್ತಾವ ಮಾಡಿತ್ತು. 2011ರಲ್ಲಿ ಪ್ರಸ್ತಾವ ಸಲ್ಲಿಸಿದಾಗ ರಾಕೇಶ್ ಮರಿಯಾ ಅವರು ಎಟಿಎಸ್ ಮುಖ್ಯಸ್ಥರಾಗಿದ್ದರು. ಫೆಬ್ರವರಿ 20, 2009ರಲ್ಲಿ ಪನ್ವೇಲ್ ನ ಸಿನೆರಾಜ್ ಥಿಯೇಟರ್ ನಲ್ಲಿ ಜೋಧಾ ಅಕ್ಬರ್ ಪ್ರದರ್ಶನ ವೇಳೆ ನಡೆದ ಸ್ಫೋಟ, ಮೇ 31, 2008ರಂದು ವಿಷ್ಣುದಾಸ್ ಭವೆ ಸಭಾಂಗಣದತ್ತ ನಾಟಕ ಪ್ರದರ್ಶನದ ವೇಳೆ ಎಸೆದ ಬಾಂಬ್ ಹಾಗೂ ಜೂನ್ 4, 2008ರಂದು ರಾಮ್ ಗಣೇಶ್ ಗಡ್ಕರಿ ಸಭಾಂಗಣದ ಪಾರ್ಕಿಂಗ್ ಪ್ರದೇಶದಲ್ಲಿ  ನಡೆದ ಸ್ಫೋಟ ಘಟನೆಗಳ ವಿವರಗಳನ್ನು ಈ ವರದಿಯೊಂದಿಗೆ ಸಲ್ಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News