ಮಡಿಕೇರಿಯಲ್ಲಿ ಶಾಲೆ, ಕಾಲೇಜು ಪುನರಾರಂಭ

Update: 2018-08-27 10:44 GMT

ಮಡಿಕೇರಿ, ಆ.27: ಭಾರೀ ಮಳೆ, ಪ್ರವಾಹ ಹಾಗೂ ಭೂಕುಸಿತದಿಂದ ನಲುಗಿರುವ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಬಾಗಿಲು ಮುಚ್ಚಿದ್ದ ಶಾಲಾ ಕಾಲೇಜುಗಳು ಮತ್ತು ಅಂಗನವಾಡಿಗಳು ಸೋಮವಾರ ಪುನರಾಂಭಗೊಂಡಿದೆ.

ವಿದ್ಯಾರ್ಥಿಗಳ ಸುರಕ್ಷಾ ದೃಷ್ಟಿಯಿಂದ ನಗರದ ಶಾಲಾ ಕಾಲೇಜುಗಳಿಗೆ ಆ.25ರವರೆಗೆ ರಜೆ ನೀಡಲಾಗಿತ್ತು. ಮಳೆ ಕಡಿಮೆಯಾಗಿರುವುದರಿಂದ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಮಡಿಕೇರಿ ನಗರದ ಪುನರ್ ವಸತಿ ಕೇಂದ್ರಗಳನ್ನು ಹೊರತುಪಡಿಸಿ ಸುಮಾರು 20 ದಿನಗಳಿಂದ ಬಾಗಿಲು ಮುಚ್ಚಿದ್ದ ಶಾಲಾ ಕಾಲೇಜುಗಳು ಹಾಗೂ ಅಂಗನವಾಡಿಗಳು ಇಂದಿನಿಂದ ಆರಂಭಗೊಂಡಿದೆ.

ಪುನರ್ ವಸತಿ ಕೇಂದ್ರಗಳಲ್ಲಿರುವ ಮಕ್ಕಳನ್ನು ಹತ್ತಿರದಲ್ಲಿರುವ ಶಾಲೆಗಳಿಗೆ ಸೇರಿಸುವಂತೆ ಶಿಕ್ಷಣ ಇಲಾಖೆಗೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಸೂಚನೆ ನೀಡಿದ್ದಾರೆ. ಅಲ್ಲದೆ ಪುನರ್ ವಸತಿ ಕೇಂದ್ರಗಳಲ್ಲಿರುವ ವಿದ್ಯಾರ್ಥಿಗಳಿಗೆ ಎಲ್ಲೆಲ್ಲಿ ವಸತಿ ಸೌಲಭ್ಯ ಸಾಧ್ಯವಿದೆಯೋ ಅಂತಹ ಶಾಲೆಗಳಿಗೆ ದಾಖಲಿಸಿಕೊಂಡು ಪಾಠಪ್ರವಚನದ ಜೊತೆಗೆ ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ವಸತಿ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ವಹಿಸುವಂತೆಯೂ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಹಲವು ದಿನಗಳಿಂದ ಬಿಕೋ ಎನ್ನುತ್ತಿದ್ದ ಮಡಿಕೇರಿ ನಗರದಲ್ಲಿ ಇಂದು ಬೆಳಗ್ಗೆಯಿಂದ ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳುತ್ತಿರುವುದು ಕಂಡು ಬಂತು. ಈ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ಮಡಿಕೇರಿ ಕಾಲೇಜೊಂದರ ವಿದ್ಯಾರ್ಥಿ ಜಗನ್ನಾಥ್, ರಸ್ತೆ ಕುಸಿತದಿಂದ ಗ್ರಾಮೀಣ ಭಾಗಗಳಿಗೆ ಬಸ್ ವ್ಯವಸ್ಥೆ ಸ್ಥಗಿತಗೊಂಡಿದೆ. ಭಾಗಮಂಡಲ ಭಾಗಕ್ಕೆ ಹೆಚ್ಚಿನ ಸರಕಾರಿ ಬಸ್ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News