ಆಟಲ್ ಆದರ್ಶ ಗುಣಗಳು ಯುವಜನತೆಗೆ ಪ್ರೇರಕ ಶಕ್ತಿ: ಶಾಸಕ ಸಿಟಿ ರವಿ

Update: 2018-08-27 11:47 GMT

ಚಿಕ್ಕಮಗಳೂರು, ಆ.27: ಭ್ರಷ್ಟಾಚಾರ ರಹಿತ, ಕಳಂಕ ರಹಿತ ಆಡಳಿತ ನಡೆಸಿದ ವಾಜಪೇಯಿ ಅವರನ್ನು ಬಿಜೆಪಿ ವೈಭವೀಕರಿಸಲು ಹೊರಟಿಲ್ಲ. ಅವರ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡುವ ಸಲುವಾಗಿ ದೇಶಾದ್ಯಂತ ಅವರ ಚಿತಾಭಸ್ಮದ ಯಾತ್ರೆ ನಡೆಸಲಾಗುತ್ತಿದೆ ಎಂದು ಶಾಸಕ ಸಿಟಿ ರವಿ ತಿಳಿಸಿದರು.

ನಗರದಲ್ಲಿ ಸೋಮವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮದ ಮೆರವಣಿಗೆ ನಡೆಸಿದ ಬಳಿಕ ಆಜಾದ್ ಪಾರ್ಕ್ ವೃತ್ತದಲ್ಲಿ ಚಿತಾಭಸ್ಮಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಅಟಲ್‍ ಬಿಹಾರಿ ವಾಜಪೇಯಿ ಸರ್ವಮಾನ್ಯ ವ್ಯಕ್ತಿ. ಅವರಿಗೆ ರಾಜಕೀಯ ವಿರೋಧಿಗಳಿದ್ದಿರಬಹುದು, ಆದರೆ ಅವರನ್ನು ದ್ವೇಷ ಮಾಡುವಂತ ವ್ಯಕ್ತಿ ಯಾರೂ ಇರಲಿಲ್ಲ ಎಂದರು.

ಮಾಜಿ ಪ್ರಧಾನಿ ವಾಜಪೇಯಿ ಚಿತಾಭಸ್ಮ ಅವರ ಬಯಕೆಯಂತೆ ದೇಶದ ಉದ್ದಗಲಕ್ಕೂ ಎಲ್ಲ ನದಿಗಳಲ್ಲಿ ವಿಸರ್ಜನೆಯಾಗುತ್ತಿದೆ. ಅವರ ಬದುಕು, ಭಾವ ಭಾರತಕ್ಕಾಗಿತ್ತು. ಒಬ್ಬ ದೇಶಭಕ್ತನಾಗಿ ಬದುಕಿದ ವಾಜಪೇಯಿ ಇಂದು ಕಾಲದಲ್ಲಿ ಲೀನವಾಗಿದ್ದಾರೆ. ಅವರ ಬದುಕು ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಲಿ ಎಂದರು.

ಪತ್ರಕರ್ತ, ಸಾಹಿತಿ, ಕವಿಯಾಗಿ ಕವಿಹೃದಯ ಹೊಂದಿದ್ದ ವಾಜಪೇಯಿ ಅವರು ವಜ್ರದಷ್ಟು ಕಠಿಣ, ಹೂವಿನಂತೆ ಮೃದು ಸ್ವಭಾವ ಹೊಂದಿದ್ದರು. ದೇಶದ ಭದ್ರತೆ ವಿಷಯ ಬಂದಾಗ ಪ್ರೋಕ್ರಾನ್ ಅಣು ಪರೀಕ್ಷೆ ಮಾಡಿದರು. ಕಾರ್ಗಿಲ್ ಯುದ್ದ ಸಂದರ್ಭ ಅವರ ಕಠಿಣ ನಿಲುವು ವಿರೋಧಿಗಳ ಎದೆ ನಡುಗಿಸಿತು. ಅವರ ಅಧಿಕಾರಾವಧಿ ದೇಶದ ಜನಮಾನಸದಲ್ಲಿ ಉಳಿಯುವಂತದ್ದಾಗಿದೆ. ಸುವರ್ಣ ಚತುಷ್ಪಥ ರಸ್ತೆ ನಿರ್ಮಾಣದ ಮೂಲಕ ದೇಶವನ್ನು ಜೋಡಿಸುವ ಕೆಲಸ ಮಾಡಿದರು. ಪ್ರಧಾನಿ ಗ್ರಾಮಸಡಕ್ ಯೋಜನೆಯಲ್ಲಿ ಹಳ್ಳಿ ರಸ್ತೆಗಳ ಜೋಡಣೆ ಮಾಡಿದರು. ಸರ್ವ ಶಿಕ್ಷ ಅಭಿಯಾನದಲ್ಲಿ ಶಾಲೆಗಳ ಅಭಿವೃದ್ಧಿ ಇಂತಹ ಅನೇಕ ಕಾರ್ಯಗಳ ಮೂಲಕ ಅವರನ್ನು ಗುರುತಿಸಬಹುದು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಎನ್.ಜೀವರಾಜ್ ಮಾತನಾಡಿ, 1991 ರಲ್ಲಿ ಅಟಲ್‍ಬಿಹಾರಿ ವಾಜಪೇಯಿ ಅವರು ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳಲ್ಲಿ  ಪ್ರಚಾರ ಪ್ರವಾಸ ಮಾಡಿದ್ದರು. ಇಂದು ಅವರ ಅಸ್ಥಿ ಅದೇ ಮಾರ್ಗದಲ್ಲಿ ಸಂಚರಿಸುತ್ತಾ ಅವರ ಆತ್ಮ ಅದೇ ರಸ್ತೆಯಲ್ಲಿ ಓಡಾಡುತ್ತಿದೆ. ಅವರ ಸರಳ ನಡೆನುಡಿ, ಸಜ್ಜನಿಕೆ, ದಕ್ಷ ಆಡಳಿತ ಈ ದೇಶಕ್ಕೆ ಮಾರ್ಗದರ್ಶನ ನೀಡಬೇಕು ಎಂಬ ನಂಬಿಕೆಯಲ್ಲಿ ಇಂದು ಜಿಲ್ಲೆಯ ಖಾಂಡ್ಯದಲ್ಲಿ ಅವರ ಚಿತಾಭಸ್ಮ ವಿಸರ್ಜಿಸಲಾಗುತ್ತಿದೆ ಎಂದು ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಿಂದ ಹೊರಟ ಮೆರವಣಿಗೆ ಐ.ಜಿ.ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ, ಆಜಾದ್ ಪಾರ್ಕ್ ವೃತ್ತ, ಮಾರ್ಕೆಟ್ ರಸ್ತೆಯ ಮೂಲಕ ಕಡೂರಿಗೆ ಹೊರಟಿತು.

ಜಿಲ್ಲಾ ಪಂಚಾಯತ್ ಸದಸ್ಯರಾದ ಜಸಂತಾ ಅನಿಲ್‍ಕುಮಾರ್, ಬೆಳವಾಡಿ ರವಿಚಂದ್ರ, ತಾ.ಪಂ.ಅಧ್ಯಕ್ಷ ಜಯಣ್ಣ, ಉಪಾಧ್ಯಕ್ಷ ರಮೇಶ್, ನಗರಸಭೆ ಅಧ್ಯಕ್ಷೆ ಶಿಲ್ಪಾ, ವಕ್ತಾರ ವರಸಿದ್ದಿ ವೇಣುಗೋಪಾಲ್, ಮಧುಕುಮಾರರಾಜ್ ಅರಸ್, ಬಿ.ರಾಜಪ್ಪ, ಹೆಚ್.ಡಿ.ತಮ್ಮಯ್ಯ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News