ಜಾರ್ಖಂಡ್‌ನಲ್ಲಿ ಸಂಘಟನೆಯ ನಿಷೇಧವನ್ನು ರದ್ದುಗೊಳಿಸಿದ ನ್ಯಾಯಾಲಯದ ತೀರ್ಪನ್ನು ಶ್ಲಾಘಿಸಿದ ಪಿಎಫ್‌ಐ

Update: 2018-08-27 14:24 GMT

ಹೊಸದಿಲ್ಲಿ, ಆ. 27: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ದ ಮೇಲೆ ಜಾರ್ಖಂಡ್ ಸರಕಾರ ವಿಧಿಸಿದ್ದ ನಿಷೇಧವನ್ನು ತೆರವುಗೊಳಿಸಿದ ಜಾರ್ಖಂಡ್ ಉಚ್ಚ ನ್ಯಾಯಾಲಯದ ಆದೇಶವನ್ನು ಪಿಎಫ್‌ಐ ಮುಖ್ಯಸ್ಥ ಇ. ಅಬೂಬಕರ್ ಸ್ವಾಗತಿಸಿದ್ದಾರೆ.

ನ್ಯಾಯಾಲಯವು ನೀಡಿದ ತೀರ್ಪು ರಾಜ್ಯದಲ್ಲಿರುವ ಬಿಜೆಪಿ ಸರಕಾರದ ಕೋಮುವಾದ ಮತ್ತು ಮತಾಂಧ ಸಿದ್ಧಾಂತವನ್ನು ಬಯಲುಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ.

ಒಂದು ಸಂಘಟನೆಯನ್ನು ನಿಷೇಧಿಸುವಾಗ ಸಿಎಲ್‌ಎ ಕಾಯ್ದೆಯ ವಿಧಿ 16ನ್ನು ರಾಜ್ಯ ಸರಕಾರ ಅನುಸರಿಸಿಲ್ಲ ಎಂಬುದನ್ನು ನ್ಯಾಯಾಲಯ ಬೆಳಕಿಗೆ ತರುವ ಮೂಲಕ ರಾಜ್ಯ ಸರಕಾರದ ಅಪ್ರಜಾಸತಾತ್ಮಕ ಉದ್ದೇಶವನ್ನು ಬಹಿರಂಗಪಡಿಸಿದೆ. ಜೊತೆಗೆ ಈ ನಿಷೇಧವು ಸ್ವಾಭಾವಿಕ ನ್ಯಾಯದ ಮತ್ತು ಭಾರತೀಯ ಸಂವಿಧಾನದ ವಿಧಿ 19ರ ಉಲ್ಲಂಘನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ತನ್ನ ನಿರ್ಧಾರವನ್ನು ಸಮರ್ಥಿಸಲು ಸರಕಾರ ಯಾವುದೇ ಪುರಾವೆಯನ್ನು ಒದಗಿಸಲು ವಿಫಲವಾಗಿದೆ ಎಂದು ನ್ಯಾಯಾಲಯ ಬೆಟ್ಟು ಮಾಡಿರುವುದಾಗಿ ಅಬೂಬಕರ್ ಹೇಳಿದರು. ಜನರ ಚಳುವಳಿಗಳು ಮತ್ತು ಅಸಮಾಧಾನದ ಧ್ವನಿಗಳ ವಿರುದ್ಧ ರಾಜ್ಯ ಸರಕಾರ ಅಳವಡಿಸಿಕೊಂಡಿರುವ ಸರ್ವಾಧಿಕಾರಿ ಧೋರಣೆಗೆ ನ್ಯಾಯಾಲಯದ ಈ ತೀರ್ಪು ಹಿನ್ನಡೆಯನ್ನುಂಟು ಮಾಡಿದೆ. ನ್ಯಾಯಾಧೀಶ ರೊಂಗೊನ್ ಮುಖ್ಯೋಪಾಧ್ಯಾಯ್ ನೇತೃತ್ವದ ಪೀಠ ನೀಡಿರುವ ಈ ತೀರ್ಪು ಸಂವಿಧಾನದ ಆಶಯವನ್ನು ಎತ್ತಿಹಿಡಿಯುತ್ತದೆ ಮತ್ತು ಪ್ರಜಾಸತಾತ್ಮಕ ಮೌಲ್ಯಗಳನ್ನು ಕಡೆಗಣಿಸಲು ನಡೆಸುವ ಪ್ರಯತ್ನಗಳಿಗೆ ನೀಡಿದ ಎಚ್ಚರಿಕೆಯಾಗಿದೆ ಎಂದು ಅಬೂಬಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News