ಮಡಿಕೇರಿ: ಪ್ರಕೃತಿ ವಿಕೋಪಕ್ಕೆ ತುತ್ತಾದ ಜಾನುವಾರುಗಳ ಸಂರಕ್ಷಣೆ

Update: 2018-08-27 13:11 GMT

ಮಡಿಕೇರಿ, ಆ.27: ಪ್ರಕೃತಿ ವಿಕೋಪಕ್ಕೆ ತುತ್ತಾದ ಜಾನುವಾರುಗಳ ಸಂರಕ್ಷಣೆ ಮತ್ತು ಪಾಲನೆಗಾಗಿ ಕೂಡಿಗೆಯ ಜರ್ಸಿ ತಳಿ ಸಂವರ್ಧನಾ ಕೇಂದ್ರದಲ್ಲಿ  ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಜಾನುವಾರು ಸಂರಕ್ಷಣಾ ಮತ್ತು ಪಾಲನಾ ಕೇಂದ್ರವನ್ನು ಆರಂಭಿಸಲಾಗಿದೆ.

ಈಗಾಗಲೇ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಹಾಗೂ ಪ್ರಕೃತಿ ವಿಕೋಪದಿಂದ ನಿರಾಶ್ರಿತರಾಗಿರುವ ಗ್ರಾಮಸ್ಥರ ಹಸುಗಳನ್ನು ಸಂರಕ್ಷಿಸಿ, ಪಾಲನೆ ಮಾಡಲು ಜಿಲ್ಲಾಧಿಕಾರಿಗಳ ಆದೇಶದನ್ವಯ ಪಶುಪಾಲನಾ ಇಲಾಖೆ ಮುಂದಾಗಿದೆ. ಪ್ರಕೃತಿ ವಿಕೋಪಕ್ಕೆ ಈಡಾದ ಗ್ರಾಮಗಳಲ್ಲಿ ಸಾಕಿದ್ದ ಹಸುಗಳನ್ನು ಅಲ್ಲಿನ ಇಲಾಖೆಯ ಸಿಬ್ಬಂದಿಗಳ ಸಹಕಾರದೊಂದಿಗೆ ಕೂಡಿಗೆಯ ಜರ್ಸಿತಳಿ ಸಂವರ್ಧನಾ ಕೇಂದ್ರಕ್ಕೆ ತಂದು ಸಂರಕ್ಷಣೆ ಮಾಡಲಾಗುತ್ತಿದೆ. ಈಗಾಗಲೇ ಕೇಂದ್ರದಲ್ಲಿ 30 ಹಸುಗಳನ್ನು ಪಾಲನೆ ಮಾಡಲಾಗುತ್ತಿದೆ. ಅಲ್ಲದೆ, ಹಂದಿಗಳಿಗೆ ಬೇಕಾಗುವ ಆಹಾರವನ್ನು ನಿರಾಶ್ರಿತರ ಗ್ರಾಮಗಳಿಗೆ ತೆರಳಿ ಇಲಾಖೆಯ ಮೂಲಕ ವಿತರಿಸಲಾಗುತ್ತಿದೆ.

ಕೂಡಿಗೆ ಕೇಂದ್ರದಲ್ಲಿ 3 ತಿಂಗಳವರೆಗೆ ಹಸುಗಳನ್ನು ಪಾಲನೆ ಮಾಡಲು ಸಿದ್ಧತೆ ಮಾಡಲಾಗಿದ್ದು, ಹಸುಗಳಿಗೆ ಬೇಕಾಗುವ ಆಹಾರವನ್ನು ಹಾಸನ ಹಾಲು ಒಕ್ಕೂಟದ ಕೆಎಂಎಫ್ 10 ಟನ್ ಆಹಾರವನ್ನು ಉಚಿತವಾಗಿ ನೀಡಿದೆ.

ಮೈಸೂರಿನ ಖಾಸಗಿ ಪಶು ಆಹಾರ ಸಂಸ್ಥೆಯವರು ಆಹಾರವನ್ನು ನೀಡಿದ್ದಾರೆ. ಇದರೊಂದಿಗೆ ಹಸುಗಳಿಗೆ ಬೇಕಾಗುವ ಒಣಹುಲ್ಲನ್ನು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಫಾರಂನಿಂದ ತರಿಸಲಾಗುತ್ತಿದೆ. ಇನ್ನುಳಿದ ಹಸಿಹುಲ್ಲು ಮತ್ತು ಔಷಧಿಗಳು ಜರ್ಸಿ ಕೇಂದ್ರದಲ್ಲಿ ಇರುವುದರಿಂದ ಹಸುಗಳನ್ನು ಪಾಲನೆ ಮಾಡಲಾಗುತ್ತಿದೆ ಎಂದು ಜರ್ಸಿ ತಳಿ ಸಂವರ್ಧನಾ ಕೇಂದ್ರದ ರಾಜ್ಯ ವಲಯ ಜಂಟಿ ನಿರ್ದೇಶಕ ಡಾ.ದೇವದಾಸ್ ತಿಳಿಸಿದ್ದಾರೆ.

ಇದರೊಂದಿಗೆ ಜಿಲ್ಲಾ ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಮತ್ತು ಮೂರು ತಾಲೂಕಿನ ಸಹಾಯಕ ನಿರ್ದೇಶಕರು, ಕೇಂದ್ರದ ತಾಂತ್ರಿಕ ಸಿಬ್ಬಂದಿಗಳು ಹಸುಗಳ ಪಾಲನೆ ಮತ್ತು ಸಂರಕ್ಷಣೆಯಲ್ಲಿ ತೊಡಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News