ವಾಯುಭಾರ ಕುಸಿತ: ಮಲೆನಾಡಿನ ಹಲವೆಡೆ ಮಳೆ ಚುರುಕು

Update: 2018-08-27 13:18 GMT

ಶಿವಮೊಗ್ಗ, ಆ. 27: ಬಂಗಾಳಕೊಲ್ಲಿಯ ಬಡಿಶಾ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮದಿಂದ ಮಲೆನಾಡಿನಲ್ಲಿ ಕಡಿಮೆಯಾಗಿದ್ದ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದೆ. ಜಿಲ್ಲೆಯ ಹಲವೆಡೆ ಸಾಧಾರಣ ಹಾಗೂ ಕೆಲವೆಡೆ ಧಾರಾಕಾರ ವರ್ಷಧಾರೆಯಾಗಿರುವ ಬಗ್ಗೆ ವರದಿಯಾಗಿದೆ.

ಸೋಮವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಯ ಅವಧಿಯಲ್ಲಿ ಜಿಲ್ಲೆಯ ಏಳು ತಾಲೂಕು ಕೇಂದ್ರ ವ್ಯಾಪ್ತಿಯಲ್ಲಿ ಬಿದ್ದ ಒಟ್ಟಾರೆ ಸರಾಸರಿ ಮಳೆಯ ಪ್ರಮಾಣ, 7.37 ಮಿಲಿ ಮೀಟರ್ (ಮಿ.ಮೀ.) ವರ್ಷಧಾರೆಯಾಗಿದೆ. ಶಿವಮೊಗ್ಗದಲ್ಲಿ 3.80 ಮಿ.ಮೀ., ಭದ್ರಾವತಿಯಲ್ಲಿ 0.40 ಮಿ.ಮೀ., ತೀರ್ಥಹಳ್ಳಿಯಲ್ಲಿ 6.40 ಮಿ.ಮೀ., ಸಾಗರದಲ್ಲಿ 11.40 ಮಿ.ಮೀ., ಶಿಕಾರಿಪುರ 2.40 ಮಿ.ಮೀ., ಸೊರಬ 8 ಮಿ.ಮೀ., ಹೊಸನಗರದಲ್ಲಿ 19.29 ಮಿ.ಮೀ. ಮಳೆಯಾಗಿದೆ. ಉಳಿದಂತೆ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಾದ ಮಾಣಿಯಲ್ಲಿ 26 ಮಿ.ಮೀ., ಯಡೂರಿನಲ್ಲಿ 14 ಮಿ.ಮೀ., ಹುಲಿಕಲ್‍ನಲ್ಲಿ 41 ಮಿ.ಮೀ., ಮಾಸ್ತಿಕಟ್ಟೆಯಲ್ಲಿ 33 ಮಿ.ಮೀ. ವರ್ಷಧಾರೆಯಾಗಿದೆ. 

ಡ್ಯಾಂ ವಿವರ: ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂನ ಒಳಹರಿವು 11,403 ಕ್ಯೂಸೆಕ್ ಇದ್ದು, 11,170 ಕ್ಯೂಸೆಕ್ ಹೊರಹರಿವಿದೆ. ಡ್ಯಾಂನ ನೀರಿನ ಮಟ್ಟ 1818.20 (ಗರಿಷ್ಠ ಮಟ್ಟ : 1819) ಅಡಿಯಿದೆ. ಭದ್ರಾ ಡ್ಯಾಂನ ಒಳಹರಿವು 8326 ಕ್ಯೂಸೆಕ್ ಇದ್ದು, 8026 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. 13,975 ಕ್ಯೂಸೆಕ್ ಒಳಹರಿವಿದ್ದು, 12,136 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. 

ಸೂಚನೆ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಜಿಲ್ಲೆಯ ಹಲವೆಡೆ ಆ. 28 ರವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಸೋಮವಾರ ಕೂಡ ಜಿಲ್ಲೆಯ ಕೆಲವೆಡೆ ಮಳೆಯಾಗಿದೆ. ಶಿವಮೊಗ್ಗ ನಗರದಲ್ಲಿ ಬಿಸಿಲಿನ ನಡುವೆಯೇ ಆಗಾಗ್ಗೆ ಮಳೆ ಸುರಿಯುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News