ಪಿಎಫ್‌ಐ ನಿಷೇಧ ರದ್ದುಗೊಳಿಸಿದ ಜಾರ್ಖಂಡ್ ಹೈಕೋರ್ಟ್

Update: 2018-08-27 14:37 GMT

ರಾಂಚಿ, ಆ.27: ಜಾರ್ಖಂಡ್ ಹೈಕೋರ್ಟ್ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ)ದ ಮೇಲೆ ವಿಧಿಸಿದ್ದ ನಿಷೇಧವನ್ನು ರದ್ದುಗೊಳಿಸಿದ್ದು, ಇದು ಜಾರ್ಖಂಡ್ ಬಿಜೆಪಿ ನೇತೃತ್ವದ ಸರಕಾರವನ್ನು ತೀವ್ರ ಮುಜುಗರಕ್ಕೆ ತಳ್ಳಿದೆ.

ಸಂಘಟನೆಯೊಂದನ್ನು ನಿಷೇಧಿಸಲು ಇರುವ ಪ್ರಕ್ರಿಯೆಗಳನ್ನು ಸರಕಾರ ಪಾಲಿಸಿಲ್ಲ. ಆದ್ದರಿಂದ ನಿಷೇಧ ಹಾಗೂ ನಿಷೇಧಕ್ಕೆ ಸಂಬಂಧಿಸಿ ಸಲ್ಲಿಸಿದ ಅರ್ಜಿಯನ್ನು ತಳ್ಳಿಹಾಕಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ಹೈಕೋರ್ಟ್‌ನ ತೀರ್ಪನ್ನು ಸ್ವಾಗತಿಸಿರುವ ಪಿಎಫ್‌ಐ ಅಧ್ಯಕ್ಷ ಇ.ಅಬೂಬಕ್ಕರ್, ತೀರ್ಪು ನೀಡುವ ಸಂದರ್ಭ ಹೈಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯವು ಜಾರ್ಖಂಡ್‌ನಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರದ ಕೋಮುವಾದಿ ಹಾಗೂ ಫ್ಯಾಸಿಸ್ಟ್ ಕಾರ್ಯಸೂಚಿಯನ್ನು ಬಯಲಿಗೆಳೆದಿದೆ. ನ್ಯಾಯಪೀಠ ನೀಡಿರುವ ತೀರ್ಪು ಸಂವಿಧಾನದ ಪಾವಿತ್ರ್ಯತೆಯನ್ನು ಎತ್ತಿಹಿಡಿದಿದೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಗಣ್ಯಗೊಳಿಸುವ ಪ್ರಯತ್ನಗಳಿಗೆ ಎಚ್ಚರಿಕೆಯಾಗಿದೆ ಎಂದಿದ್ದಾರೆ.

ಸಿಎಲ್‌ಎ ಕಾಯ್ದೆಯ ಸೆಕ್ಷನ್ 16ರಡಿ ಸಂಘಟನೆಗಳನ್ನು ನಿಷೇಧಿಸುವ ಮುನ್ನ ಪಾಲಿಸಬೇಕಾದ ಪ್ರಕಿಯೆಗಳನ್ನು ಸೂಚಿಸಿದ್ದು ಇದನ್ನು ಸರಕಾರ ಪಾಲಿಸಿಲ್ಲ. ಅಲ್ಲದೆ ನಿಷೇಧ ವಿಧಿಸಿ ಸರಕಾರ ಹೊರಡಿಸಿರುವ ನೋಟಿಸ್ ಸಾಮಾಜಿಕ ನ್ಯಾಯದ ನೀತಿ ಹಾಗೂ ಸಂವಿಧಾನದ 19ನೇ ವಿಧಿಯ ಉಲ್ಲಂಘನೆಯಾಗಿದೆ. ಜೊತೆಗೆ, ತನ್ನ ನಿರ್ಧಾರವನ್ನು ಸಮರ್ಥಿಸಲು ಪೂರಕ ಪುರಾವೆಗಳನ್ನು ಒದಗಿಸಲು ಸರಕಾರ ವಿಫಲವಾಗಿದೆ ಎಂದು ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News