ರಸ್ತೆಗಳ ಪುನರ್ ನಿರ್ಮಾಣಕ್ಕೆ ಸೇನೆಯಿಂದ ಮಾಸ್ಟರ್ ಪ್ಲಾನ್: ಸದ್ದುಗದ್ದಲವಿಲ್ಲದೆ ನಡೆಯುತ್ತಿದೆ ಚಿಂತನೆ

Update: 2018-08-27 16:19 GMT

ಮಡಿಕೇರಿ, ಆ.27: ಮಹಾಮಳೆ ಮತ್ತು ಗುಡ್ಡ ಕುಸಿತದಿಂದ ಕೊಡಗಿನ ಬಹಳಷ್ಟು ವಿಭಾಗಗಳಲ್ಲಿ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿ ಕುಸಿದು ಹೋಗಿರುವ ರಸ್ತೆ ಹಾಗೂ  ಸೇತುವೆಗಳನ್ನು ಪುನರ್ ನಿರ್ಮಿಸಿ ಊರಿಂದ ಊರಿಗೆ ಸಂಪರ್ಕ ಕಲ್ಪಿಸಲು ಭಾರತೀಯ ಸೇನೆಯ ನೆರವು ಪಡೆಯುವ ಪ್ರಯತ್ನಗಳು ಸದ್ದುಗದ್ದಲವಿಲ್ಲದೆ ನಡೆಯುತ್ತಿದೆ ಎನ್ನಲಾಗಿದೆ.

ಕೊಡಗು ಜಿಲ್ಲೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕಿನ 32 ಪಂಚಾಯತ್ ಗಳ ಹಲವಾರು ಗ್ರಾಮಗಳ ಸಂಪರ್ಕ ರಸ್ತೆಗಳು ಬಹುತೇಕ ಕಡಿತಗೊಂಡಿವೆ. ಹಲವೆಡೆಗಳಲ್ಲಿ ಸೇತುವೆಗಳು ಭಗ್ನಗೊಂಡು ಗ್ರಾಮಗಳಿಗೆ ತೆರಳಲಾಗದ ಕಠಿಣ ಪರಿಸ್ಥಿತಿ ನಿರ್ಮಾಣವಾಗಿದೆ.

ರಸ್ತೆ ಮರು ಸಂಪರ್ಕದ ದೊಡ್ಡ ಸವಾಲನ್ನು ಸರ್ಕಾರದ ಲೋಕೋಪಯೋಗಿ ಸೇರಿದಂತೆ ಇನ್ನಿತರ ಇಲಾಖೆಗಳಿಂದ ಸ್ವತಂತ್ರವಾಗಿ ನಿರ್ವಹಿಸಿ ನಿಭಾಯಿಸುವುದು ಸುಲಭದ ವಿಚಾರವಲ್ಲ. ಹಾನಿಯ ತೀವ್ರತೆಯನ್ನು ಗಮನಿಸಿದ ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಈ ಹಿನ್ನೆಲೆಯಲ್ಲೆ ರಸ್ತೆ ಸಂಪರ್ಕ ಮೊದಲಾದವುಗಳಿಗೆ ವರ್ಷಗಟ್ಟಲೆ ಸಮಯ ತಗುಲಬಹುದೆನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅತಿವೃಷ್ಟಿ ಪೀಡಿತ ಪ್ರದೇಶಗಳಲ್ಲಿ ಮತ್ತೆ ಜನ ಜೀವನ ಆರಂಭಗೊಂಡು, ಅಲ್ಲಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕಾಗಿದ್ದಲ್ಲಿ ಮೊಟ್ಟ ಮೊದಲು ನಡೆಯಬೇಕಾಗಿರುವುದು ಸಂಪರ್ಕ ವ್ಯವಸ್ಥೆಯ ಮರು ಸ್ಥಾಪನೆ. 

ಸೇನೆಗೆ ಮೊರೆ
ಭಾರತೀಯ ಸೇನೆಯಲ್ಲಿನ ಸೇವಾನುಭದಲ್ಲಿ ಕಂಡುಕೊಂಡಿರುವ ಜಿಲ್ಲೆಯ ಮಾಜಿ ಸೈನ್ಯಾಧಿಕಾರಿಗಳು, ಸೈನ್ಯದಲ್ಲಿನ ಅಧಿಕಾರಿಗಳೊಂದಿಗಿನ ತಮ್ಮ ಸಂಪರ್ಕವನ್ನು ಬಳಸಿ ಇದೀಗ ಕೊಡಗಿನ ಸಂಪರ್ಕ ರಸ್ತೆಗಳ ಮರು ನಿರ್ಮಾಣಕ್ಕೆ ಸೈನ್ಯ ಮತ್ತು ರಕ್ಷಣಾ ಇಲಾಖೆಯ ತಂತ್ರಜ್ಞರನ್ನು ಬಳಸಿಕೊಳ್ಳುವ ಮಹತ್ವದ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಂಪರ್ಕದಲ್ಲೂ ನಿವೃತ್ತ ಸೇನಾಧಿಕಾರಿಗಳಿದ್ದಾರೆ.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂನ ಕರ್ನಲ್ ಕೆ.ಸಿ. ಸುಬ್ಬಯ್ಯ, ಸಂಚಾಲಕ ಮೇ. ಬಿ.ಎ. ನಂಜಪ್ಪ ಮತ್ತು ಪದಾಧಿಕಾರಿಗಳು, ಸಂಘಟನೆಯ ಗೌರವ ಸಲಹೆಗಾರರಾದ ಲೆ.ಜ.ಸಿ.ಎನ್. ಸೋಮಣ್ಣ, ಲೆ.ಜ. ಬಿ.ಸಿ. ನಂದ, ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ ಅವರುಗಳ ಸಲಹೆ ಮತ್ತು ಮಾರ್ಗದರ್ಶನದ ಮೂಲಕ ರಕ್ಷಣಾ ಇಲಾಖೆಯ ‘ಗ್ರಿಫ್’ ವಿಭಾಗದ ತಂತ್ರಜ್ಞ ಕರ್ನಲ್ ಮೂರ್ತಿಯವರನ್ನು ಸಂಪರ್ಕಿಸಲಾಗಿದೆ. ಅವರು ಎರಡು ದಿನಗಳಲ್ಲಿ ಜಿಲ್ಲೆಗಾಗಮಿಸಿ ಇಲ್ಲಿನ ಸಂಪರ್ಕ ವ್ಯವಸ್ಥೆಗಳ ಪುನರ್ ಸ್ಥಾಪನೆಯ ಬಗ್ಗೆ ಮಹತ್ವದ ಸಲಹೆ ಮತ್ತು ಮಾರ್ಗದರ್ಶನಗಳನ್ನು ನೀಡಲಿದ್ದಾರೆ ಎನ್ನಲಾಗಿದೆ.

ಜಮ್ಮು ಕಾಶ್ಮೀರ, ಅರುಣಾಚಲ ಪ್ರದೇಶ ಸೇರಿದಂತೆ ರಾಷ್ಟ್ರದ ಗಡಿ ಭಾಗಗಳಲ್ಲಿನ ಕಾರ್ಯಾಚರಣೆಯ ಹಂತಗಳಲ್ಲಿ ಕಡಿದಾದ ಪರ್ವತ, ಆಳವಾದ ಕಮರಿ, ಹುಚ್ಚೆದ್ದು ಹರಿಯುವ ಹಿಮ ನದಿಗಳನ್ನು ದಾಟಲು ಸೈನ್ಯದ ಗ್ರಿಫ್ ವಿಭಾಗ ಅತ್ಯಂತ ಕ್ಷಿಪ್ರ ಗತಿಯಲ್ಲಿ ಸೇತುವೆಗಳನ್ನು ನಿರ್ಮಿಸುತ್ತದೆ ಮತ್ತು ಕಾರ್ಯಾಚರಣೆಯ ಬಳಿಕ ಅಷ್ಟೇ ವೇಗವಾಗಿ ಅದನ್ನು ಕಳಚುತ್ತದೆ. ಕಠಿಣ ಪರಿಸ್ಥಿತಿಗಳ ನಡುವೆ ಸದೃಢವಾದ ಸೇತುವೆ, ರಸ್ತೆಗಳ ನಿರ್ಮಾಣದ ಬಗ್ಗೆ ಗ್ರಿಫ್ ವಿಭಾಗದ ನೆರವನ್ನು ಇದೀಗ ಪಡೆಯಲು ಫೋರಂ ಆಸಕ್ತವಾಗಿದೆ.

ಫೋರಂ ಸಂಚಾಲಕ ಮೇಜರ್ ಬಿ.ಎ.ನಂಜಪ್ಪ ಹೇಳುವಂತೆ, ಕೊಡಗಿನಲ್ಲಿ ಅತಿವೃಷ್ಟಿಯಿಂದ ಹಲವೆಡೆಗಳಲ್ಲಿ  ರಸ್ತೆ ಕುಸಿದು ಹೋಗಿದ್ದು, ಗ್ರಾಮೀಣ ಭಾಗದ ಸೇತುವೆಗಳು ಹಾಳಾಗಿದೆ. ಇಂತಹ ಕಡೆಗಳಲ್ಲಿ ರಕ್ಷಣಾ ಇಲಾಖೆಯ ಗ್ರಿಫ್ ವಿಭಾಗ ರಸ್ತೆ ಮತ್ತು ಸೇತುವೆ ನಿರ್ಮಿಸಲು ಸಮರ್ಥವಾಗಿದೆ. ಕೆಲವೇ ತಿಂಗಳ ಅವಧಿಯಲ್ಲಿ ನಿರ್ಮಾಣ ಕಾರ್ಯ ಮಾಡುವ ಸಾಮಥ್ರ್ಯವನ್ನು ಗ್ರಿಫ್ ತಂಡ ಹೊಂದಿದೆಯೆಂದು ತಿಳಿಸಿ, ಅವರ ನೆರವನ್ನು ಪಡೆದು ಸೇತುವೆ, ರಸ್ತೆ ನಿರ್ಮಾಣ ಮಾಡುವ ಮೂಲಕ, ಅದಕ್ಕೆ ತಗಲುವ ವೆಚ್ಚವನ್ನು ಸರ್ಕಾರ ಭರಿಸಬೇಕಾಗುತ್ತದೆ ಎಂದು ಹೇಳಿದರು.

ಕೊಡಗಿನಲ್ಲಿ ಸಂಪೂರ್ಣವಾಗಿ ಹಾನಿಗೊಳಗಾಗಿರುವ ರಸ್ತೆ ಹಾಗೂ ಸೇತುವೆ ದುರಸ್ತಿಗೆ ಸೇನಾ ನೆರವು ಫಲಪ್ರದವಾಗಿ ಜಾರಿಯಾದಲ್ಲಿ ನಿರೀಕ್ಷೆಗೂ ಮೊದಲು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಎಲ್ಲಾ ಊರುಗಳ ಸಂಪರ್ಕ ಸುಲಭ ಸಾಧ್ಯವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News