ಕರಗಡ ಯೋಜನೆ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ: ಸಮಗ್ರ ತನಿಖೆಗೆ ಶಾಸಕ ಸಿ.ಟಿ.ರವಿ ಒತ್ತಾಯ

Update: 2018-08-28 12:28 GMT

ಚಿಕ್ಕಮಗಳೂರು, ಆ.28: ಕರಗಡ ಯೋಜನೆ ಕುರಿತು ತಾವು ಸದನದಲ್ಲಿ ಕೇಳಿದ್ದ ಪ್ರಶ್ನೆಗೆ ಸಣ್ಣ ನೀರಾವರಿ ಸಚಿವರು, ಯೋಜನೆಯ ಕಾಮಗಾರಿ ಸಿ.ಬಿ.ಎಲ್. ವರೆಗೆ ಪೂರ್ಣಗೊಂಡಿದೆ ಎಂಬ ಉತ್ತರ ನೀಡಿದ್ದರು. ಆದರೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಗುತ್ತಿಗೆದಾರರಿಗೆ ವರ್ಕ್ ಸ್ಲಿಪ್ ಆಧಾರದಲ್ಲಿ 7.50 ಕೋಟಿ ರೂ. ನೀಡಲು ತೀರ್ಮಾನಿಸಲಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ವರ್ಕ್ ಸ್ಲಿಪ್ ಆಧಾರದಲ್ಲಿ ಬಿಲ್ ನೀಡಲು ಹೇಗೆ ಸಾಧ್ಯ? ಇದನ್ನು ಗಮನಿಸಿದರೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಶಂಖೆ ಮೂಡುತ್ತಿದೆ ಎಂದು ಶಾಸಕ ಸಿ.ಟಿ.ರವಿ ಆರೋಪಿಸಿದ್ದಾರೆ.

ದೇವಿಕೆರೆಯಿಂದ ಕರಗಡ ಕುಡಿಯುವ ನೀರಿನ ಯೋಜನೆಯ ನಾಲೆಗಳಿಗೆ ಇತ್ತೀಚೆಗೆ ಮೋಟರ್ ಬಳಸಿ ನೀರು ಹರಿಸುತ್ತಿರುವುದನ್ನು ಮಂಗಳವಾರ ಬೆಳಗ್ಗೆ ಪರಿಶೀಲಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಾರ್ವಜನಿಕರಿಂದ ಆರೋಪ ಕೇಳಿ ಬರುತ್ತಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಿ, ನಂತರ ಗುತ್ತಿಗೆದಾರರಿಗೆ ಬಾಕಿ ಬಿಲ್‍ನ ಮೊತ್ತವನ್ನು ಪಾವತಿಸಬೇಕೆಂದು ಸರಕಾರವನ್ನು ಆಗ್ರಹಿಸಿದರು.

ಈ ಹಿಂದೆಯೂ ಇದೇ ಯೋಜನೆಯ ಕಾಮಗಾರಿಗೆ ವರ್ಕ್ ಸ್ಲಿಪ್ ಆಧಾರದಲ್ಲಿ ಹೆಚ್ಚುವರಿ ಬಿಲ್ ಮಾಡಿಕೊಡಲಾಗಿತ್ತು. ಆಗ ನಾಲೆ ತೆರೆಯುವ ವೇಳೆ ಹೆಚ್ಚುವರಿ ಬಂಡೆಗಳು ನಾಲೆಯಲ್ಲಿ ಕಾಣಿಸಿಕೊಂಡಿದ್ದರಿಂದ ಹಾಗೂ ಭೂಸ್ವಾಧೀನ ಪ್ರಕ್ರಿಯೆಗೆ ಹೆಚ್ಚುವರಿ ಹಣ ಕೊಡಬೇಕಾಗಿ ಬಂದಿದ್ದರಿಂದ ವರ್ಕ್ ಸ್ಲಿಪ್ ಆಧಾರದಲ್ಲಿ ಬಿಲ್ ಮಾಡಿಕೊಡಲಾಗಿದೆ ಎಂದು ಅಧಿಕಾರಿಗಳು ಉತ್ತರ ನೀಡಿದ್ದರು. ಒಂದೇ ಕಾಮಗಾರಿಗೆ ಎರಡು ಬಾರಿ ವರ್ಕ್ ಸ್ಲಿಪ್ ಮಾಡಿಕೊಡಲು ಅವಕಾಶವಿಲ್ಲ. ಕಾಮಗಾರಿ ಕುರಿತು ಲೋಕಾಯುಕ್ತರಿಂದ ತನಿಖೆ ನಡೆಸುವಂತೆ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್‍ನ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ನಿರ್ಣಯ ಕೈಗೊಂಡು ಸರಕಾರಕ್ಕೆ ನಿರ್ಣಯದ ಪ್ರತಿಯನ್ನು ಕಳುಹಿಸಿಕೊಡಲಾಗಿದೆ. ಸರಕಾರ ಯಾವುದೇ ಕಾರಣಕ್ಕೂ ಕಾಮಗಾರಿಯ ಸಮಗ್ರ ತನಿಖೆ ನಡೆಸದೇ ಗುತ್ತಿಗೆದಾರರಿಗೆ ಬಿಲ್ ಪಾವತಿಸಬಾರದೆಂದು ರವಿ ಆಗ್ರಹಿಸಿದರು.

ಕಾಮಗಾರಿಯ ನಾಲೆಗಳಲ್ಲಿ ಪೂರ್ಣ ಕಾಮಗಾರಿ ಆಗದಿರುವುದು ಹಾಗೂ ನಾಲೆಯಲ್ಲಿ ಮಣ್ಣು ಬಿದ್ದಿರುವುದರಿಂದಾಗಿ ದೇವಿಕೆರೆ ತುಂಬಿದ್ದರೂ ನಾಲೆಯಲ್ಲಿ ನೀರು ನಿಧಾನವಾಗಿ ಹೋಗುತ್ತಿದೆ. ಇದನ್ನು ಮನಗಂಡು ಜೆನರೇಟರ್ ಇಟ್ಟು 50 ಎಚ್.ಪಿ.ಮೋಟಾರ್ ನಿಂದ ನಾಲೆಗೆ ನೀರು ಬಿಡಲಾಗುತ್ತಿದೆ. ಈಗ ನೀರು ಕಳಸಾಪುರ ಕೆರೆಯನ್ನು ತಲುಪುತ್ತಿದೆ ಎಂದ ಅವರು, ಹೆಚ್ಚುವರಿ ಮೋಟಾರ್ ಅಳವಡಿಸಿ ನೀರು ಹರಿಸಿದರೆ ಬೆಳವಾಡಿ ಕೆರೆಗೂ ದೇವಲಕೆರೆ ನೀರು ಹರಿಯುತ್ತದೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳು 200 ಎಚ್.ಪಿ. ಮೋಟಾರ್ ಬಳಸಿ ನಾಲೆಗೆ ನೀರು ಹರಿಸುವಂತೆ ಸೂಚನೆ ನೀಡಿದ್ದಾರೆ. ಆದರೆ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿದಾಗ ಇದು ವಿಳಂಬವಾಗುತ್ತದೆ ಎಂದು ತಿಳಿದು ಬಂದಿದೆ. 200 ಎಚ್.ಪಿ. ಮೋಟಾರ್ ಬಳಸಲು ಹೆಚ್ಚುವರಿ ಟ್ರಾನ್ಸ್ ಫಾರ್ಮರ್ ಬೇಕಾಗುತ್ತದೆ. ಜೊತೆಗೆ ಈಗ ಅಲ್ಲಿರುವ ವಿದ್ಯುತ್ ತಂತಿಯಲ್ಲಿ ಸದರಿ ಮೋಟಾರ್ ಬಳಸಲು ಸಾಧ್ಯವಿಲ್ಲ. ಹೈಟೆನ್ಷನ್ ವೈರ್ ಆವಶ್ಯಕವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇವೆಲ್ಲವೂ ಆಗುವ ವೇಳೆಗೆ ಮಳೆಗಾಲ ಮುಗಿದು ಹೋಗುತ್ತದೆ. ಈ ಬಗ್ಗೆ ಸರಕಾರ ಗಮನಹರಿಸಬೇಕು ಎಂದರು.

ಈ ವೇಳೆ ತಾಪಂ ಅಧ್ಯಕ್ಷ ಜಯಣ್ಣ, ಮಾಜಿ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್, ಜಿಪಂ ಸದಸ್ಯ ಬೆಳವಾಡಿ ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.

ಸಿಎಂ ಭೇಟಿ ಬಗ್ಗೆ ಮಾಹಿತಿ ಇರಲಿಲ್ಲ:
ಇತ್ತೀಚೆಗಷ್ಟೆ ವಿಧಾನಪರಿಷತ್ ಸದಸ್ಯರಾದ ಎಸ್.ಎಲ್.ಧರ್ಮೇಗೌಡ ಮತ್ತು ಎಸ್.ಎಲ್.ಬೋಜೇಗೌಡ ಗ್ರಾಮಸ್ಥರುಗಳೊಂದಿಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಯೋಜನೆಯ ಕುರಿತು ಚರ್ಚೆ ನಡೆಸಿದ್ದಾರೆ. ಮುಖ್ಯಮಂತ್ರಿ 200 ಎಚ್‍ಪಿ ಮೋಟಾರ್ ಮೂಲಕ ನಾಲೆಗೆ ನೀರು ಹರಿಸಲು ಇಲಾಖೆಗೆ ಸೂಚನೆ ನೀಡಿದ್ದಾರೆ ಎಂಬುದನ್ನು ಮಾಧ್ಯಮಗಳಿಂದ ತಿಳಿದುಕೊಂಡಿದ್ದೇನೆ. ಈ ಸಂಬಂಧ ಮುಖ್ಯಮಂತ್ರಿಯನ್ನು ಭೇಟಿಯಾಗಿ ಚರ್ಚಿಸಿರುವುದನ್ನು ಸ್ವಾಗತಿಸುತ್ತೇನೆ. ಮುಖ್ಯಮಂತ್ರಿ ಕಚೇರಿಯಿಂದಾಗಲೀ ಅಥವಾ ನಿಯೋಗ ಕರೆದೊಯ್ದವರಿಂದಾಗಲಿ ತನಗೆ ಈ ಬಗ್ಗೆ ಮಾಹಿತಿ ಇರಲಿಲ್ಲ. ನನ್ನನ್ನು ಕರೆದಿದ್ದರೆ ನಾನೂ ಹೋಗುತ್ತಿದ್ದೆ, ಆಗ ಮುಖ್ಯಮಂತ್ರಿಗೆ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಾಗುತ್ತಿತ್ತು.

ಯೋಜನೆ ವಿಳಂಬಕ್ಕೆ ಗುತ್ತಿಗೆದಾರ, ಅಧಿಕಾರಿಗಳು ಕಾರಣ:
ಶಾಸಕ ಸಿ.ಟಿ.ರವಿಗೆ ಈಗ ಜ್ಞಾನೋದಯವಾಗಿದೆ ಎಂದು ಕೆಲವರು ಟೀಕಿಸುತ್ತಿದ್ದಾರೆ. ಇದು ತಪ್ಪು. ಕಾಮಗಾರಿಯ ಆರಂಭದಲ್ಲಿ 3.50 ಕೋಟಿ ರೂ.ಗೆ ಯೋಜನೆ ರೂಪಿಸಲಾಗಿತ್ತು. ಕಡಿಮೆ ಮೊತ್ತ ಎಂಬ ಕಾರಣದಿಂದ ಅದಕ್ಕೆ ಒಪ್ಪಿಗೆ ನೀಡಲಾಯಿತು. ಗುತ್ತಿಗೆದಾರರ ವೈಫಲ್ಯ ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಕಾಮಗಾರಿ ವಿಳಂಬವಾಗಿದೆ. ಅಲ್ಲದೇ ಹೆಚ್ಚಿನ ಹಣವೂ ಖರ್ಚಾಗುತ್ತಿದೆ. ಮೊದಲೇ ಇಷ್ಟೊಂದು ಹಣ ಖರ್ಚಾಗುತ್ತದೆ ಎಂದು ತಿಳಿದಿದ್ದರೆ ಯಾವುದೇ ಕಾರಣಕ್ಕೂ ಈ ಯೋಜನೆಗೆ ಅನುಮತಿ ನೀಡುತ್ತಿರಲಿಲ್ಲ. ಯೋಜನೆಯ 2ನೇ ಹಂತದ ಕಾಮಗಾರಿಗೆ 16.50 ಕೋಟಿ ರೂ. ಬಿಡುಗಡೆ ಮಾಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದರೂ ಈವರೆಗೂ ಅನುಮತಿ ನೀಡಿಲ್ಲ. ಕೂಡಲೇ ಕಾಮಗಾರಿಗೆ ಅನುಮತಿ ನೀಡಿ ಅನುದಾನ ಬಿಡುಗಡೆ ಮಾಡಬೇಕು. ಈಗಿನ ಗುತ್ತಿಗೆದಾರರ ವೈಫಲ್ಯದಿಂದಾಗಿ ಯೋಜನೆಗೆ ಹಿನ್ನಡೆಯಾಗಿದೆ. ಅವರನ್ನು ಗುತ್ತಿಗೆದಾರರನ್ನಾಗಿ ಮುಂದುವರಿಸಬಾರದು
.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News