ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸನ್ನು ಬೆಂಬಲಿಸಿ: ಸಚಿವ ದೇಶಪಾಂಡೆ

Update: 2018-08-28 13:50 GMT

ಹಳಿಯಾಳ ಆ.28: ರಾಜ್ಯದ ಪಟ್ಟಣ ಹಾಗೂ ನಗರ ಪ್ರದೇಶಗಳ ಸರ್ವತೋಮುಖ ಹಾಗೂ ರಚನಾತ್ಮಕ ಅಭಿವೃದ್ಧಿಗಾಗಿ ಮತದಾರರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಮನವಿ ಮಾಡಿದ್ದಾರೆ.

ನಗರದಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ಸಾಮಾಜಿಕ ನ್ಯಾಯ ಮತ್ತು ಸರ್ವತೋಮುಖ ವಿಕಾಸದಲ್ಲಿ ನಂಬಿಕೆ ಇಟ್ಟುಕೊಂಡಿದೆ. ಪಕ್ಷವು ಎಲ್ಲ ಜನಾಂಗಗಳನ್ನೂ ಉದಾರವಾದ ದೃಷ್ಟಿಯಿಂದ ನೋಡುತ್ತದಲ್ಲದೆ, ಸಮಾನ ಅವಕಾಶ ಮತ್ತು ಸೌಲಭ್ಯಗಳನ್ನು ಒದಗಿಸಲು ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು.

ಕಾಂಗ್ರೆಸ್ ಈ ದೇಶದ ವಿಕಾಸಕ್ಕೆ ಕೊಟ್ಟಿರುವ ಕೊಡುಗೆ ಅಪಾರ. ಸ್ಥಳೀಯ ಮಟ್ಟದಲ್ಲೇ ಆಡಳಿತ ವ್ಯವಸ್ಥೆ ರೂಪುಗೊಳ್ಳಬೇಕು. ಇದರಿಂದಾಗಿ ಸಾರ್ವಜನಿಕ ವ್ಯವಸ್ಥೆಯಲ್ಲಿ ಪಾರದರ್ಶಕತೆ ಬರಲಿದೆ ಎನ್ನುವುದು ಕಾಂಗ್ರೆಸ್ಸಿನ ನಂಬಿಕೆಯಾಗಿದೆ. ಸ್ಥಳೀಯ ಸಂಸ್ಥೆಗಳು ಸುಗಮ ಮತ್ತು ವಿಶ್ವಾಸಾರ್ಹವಾಗಿ ನಡೆಯಬೇಕು. ಇದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವೆಂದು ಅವರು ಅಭಿಪ್ರಾಯಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ರಾಜ್ಯದ ಸರ್ವತೋಮುಖ ಏಳ್ಗೆಗಾಗಿ ಅಭಿವದ್ಧಿ ಯೋಜನೆಗಳನ್ನು ಜಾರಿ ಮಾಡಿದರು. ಅದರಲ್ಲೂ ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆಗೆ ಹಲವು ಮಹತ್ವದ ಯೋಜನೆಗಳನ್ನು ಮಂಜೂರು ಮಾಡಿ, ಇವುಗಳ ಅನುಷ್ಠಾನಕ್ಕಾಗಿ ನೂರಾರು ಕೋಟಿ ರೂ.ಗಳ ಅನುದಾನವನ್ನು ಜಿಲ್ಲೆಗೆ ನೀಡಿರುವುದನ್ನು ಜಿಲ್ಲೆಯ ಜನ ಮರೆತಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಸದಾ ಆದ್ಯತೆ ನೀಡುತ್ತಾ ಬಂದಿದೆ. ಹೀಗಾಗಿ, ಜಿಲ್ಲೆಯಲ್ಲಿ ಸರ್ವಾಂಗೀಣ ಪ್ರಗತಿಯ ಹೊಸ ಹಾದಿಯೇ ನಿರ್ಮಾಣವಾಗಿದೆ. ಉತ್ತರಕನ್ನಡ ಜಿಲ್ಲೆಯ ಸ್ಥಳೀಯ ಎಂಟು ಸಂಸ್ಥೆಗಳಿಗೆ ಸಹ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News