2022ರಲ್ಲಿ ಸಿದ್ದರಾಮಯ್ಯರನ್ನು ಸಿಎಂ ಮಾಡುವುದು ನಮ್ಮ ಗುರಿ: ಝಮೀರ್‌ ಅಹ್ಮದ್‌ ಖಾನ್

Update: 2018-08-28 14:11 GMT

ಹಾವೇರಿ, ಆ.28: 2022ರಲ್ಲಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಸಿದ್ದರಾಮಯ್ಯರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದು ನಮ್ಮೆಲ್ಲರ ಗುರಿಯಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಬಿ.ಝೆಡ್.ಝಮೀರ್‌ ಅಹ್ಮದ್‌ ಖಾನ್ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರವು ಸುಭದ್ರವಾಗಿದ್ದು, ಐದು ವರ್ಷಗಳ ಕಾಲ ಆಡಳಿತವನ್ನು ಪೂರೈಸಲಿದೆ. ಈ ಸರಕಾರವನ್ನು ಬೀಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಸಿದ್ದರಾಮಯ್ಯನವರು ಮುಂದಿನ ಚುನಾವಣೆಯಲ್ಲಿ ಜನ ನನಗೆ ಆಶೀರ್ವಾದ ಮಾಡಿದರೆ ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿದ್ದಾರೆಯೇ ಹೊರತು, ಕುಮಾರಸ್ವಾಮಿಯನ್ನು ಅಧಿಕಾರದಿಂದ ಇಳಿಸಿ ಮುಖ್ಯಮಂತ್ರಿಯಾಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ ಎಂದು ಅವರು ತಿಳಿಸಿದರು.

ನಮ್ಮದು ಹೈಕಮಾಂಡ್ ಪಕ್ಷ. ಕುಮಾರಸ್ವಾಮಿ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಆದೇಶ ನೀಡಿದ್ದಾರೆ. ಅದರಂತೆ, ಈ ಸರಕಾರದ ನೇತೃತ್ವವನ್ನು ಕುಮಾರಸ್ವಾಮಿಯೆ ವಹಿಸಲಿದ್ದಾರೆ ಎಂದು ಝಮೀರ್‌ ಅಹ್ಮದ್‌ ಖಾನ್ ಹೇಳಿದರು.

ಸಿದ್ದರಾಮಯ್ಯ ನಮ್ಮ ನಾಯಕರು, ಯಾವತ್ತಿದ್ದರೂ ಅವರೇ ನಮ್ಮ ನಾಯಕರು. ನಾವು ಅವರ ಬೆಂಬಲಿಗರು. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕೆಂದು ನಮಗಿಂತ ಹೆಚ್ಚಾಗಿ ರಾಜ್ಯದ ಜನ ಬಯಸುತ್ತಿದ್ದಾರೆ. ಅವರ ತೀರ್ಪಿಗೆ ನಾವು ತಲೆ ಬಾಗಲೇಬೇಕು. ನಮ್ಮ ಗುರಿ ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡುವುದು ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯನವರು ಮುಂದಿನ ವಾರ ಯುರೋಪ್ ಪ್ರವಾಸ ಕೈಗೊಳ್ಳುತ್ತಿರುವುದು ಪೂರ್ವ ನಿಗದಿತವಾದದ್ದು. ಅದರಲ್ಲಿ ವಿಶೇಷ ಏನು ಇಲ್ಲ. ನನ್ನನ್ನು ಆಹ್ವಾನಿಸಿದ್ದರೆ ನಾನು ಅವರೊಂದಿಗೆ ಪ್ರವಾಸಕ್ಕೆ ಹೋಗುತ್ತಿದ್ದೆ. ಆದರೆ, ನನಗೆ ಕರೆದಿಲ್ಲ. ಆದುದರಿಂದ, ಹೋಗುತ್ತಿಲ್ಲ ಎಂದು ಅವರು ತಿಳಿಸಿದರು.

ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವನಾಗಿರುವುದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಜಿಲ್ಲೆಗೆ ಆಗಮಿಸಿದ್ದೇನೆ ಎಂದು ಝಮೀರ್‌ ಅಹ್ಮದ್‌ ಖಾನ್ ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News