ಅನೈತಿಕ ಸಂಬಂಧದಿಂದ ವ್ಯಕ್ತಿಯ ಹತ್ಯೆ: ಬೆಂಗಳೂರಿನಲ್ಲಿ ಹತ್ಯೆಗೈದು ಭದ್ರಾನದಿಗೆ ಶವ ಎಸೆದ ಹಂತಕರು

Update: 2018-08-28 14:20 GMT

ಚಿಕ್ಕಮಗಳೂರು, ಆ.28: ಜಿಲ್ಲೆಯ ಕಳಸ ಹೋಬಳಿ ವ್ಯಾಪ್ತಿಯ ಕುದುರೆಮುಖ ಸಮೀಪದ ಭದ್ರಾ ನದಿಯಲ್ಲಿ ಸೋಮವಾರ ಸಂಜೆ ವ್ಯಕ್ತಿಯೊಬ್ಬರ ಮೃತ ದೇಹ ಮತ್ತೆಯಾಗಿದ್ದು, ಮೃತ ವ್ಯಕ್ತಿಯನ್ನು ಬೆಂಗಳೂರಿನಲ್ಲಿ ಇತ್ತೀಚೆಗೆ ಅನೈತಿಕ ಸಂಬಂಧದ ಪ್ರಕರಣವೊಂದರಲ್ಲಿ ಪತ್ನಿಯ ಪ್ರಿಯತಮನಿಂದಲೇ ಹತ್ಯೆಗೀಡಾದ ನವಾಝ್(30) ಎಂಬುದನ್ನು ಸ್ಥಳೀಯ ಪೊಲೀಸರು ದೃಢಪಡಿಸಿದ್ದಾರೆ.

ಭದ್ರಾ ನದಿಯ ಕುದುರೆಮುಖ ಠಾಣಾ ವ್ಯಾಪ್ತಿಯ ಈಚಲು ಹೊಳೆಯಲ್ಲಿ ಸೋಮವಾರ ಅಪರಿಚಿತ ವ್ಯಕ್ತಿಯ ಶವವನ್ನು ಸ್ಥಳಿಯರು ಗಮನಿಸಿ ಕುದುರೆಮುಖ ಪೊಲೀಸ್ ಠಾಣೆಗೆ ಸುದ್ಧಿ ಮುಟ್ಟಿಸಿದ್ದರು. ಕುದುರೆಮುಖ ವೃತ್ತ ನಿರೀಕ್ಷಕ ರಾಮಚಂದ್ರ ಅವರ ಮಾರ್ಗದರ್ಶನದಲ್ಲಿ ಮೃತದೇಹವನ್ನು ಸ್ಥಳಿಯ ಮುಳುಗುತಜ್ಞ ಭಾಸ್ಕರ್ ಸುಮಾರು ಎರಡು ಕಿಮೀ ದೂರದಿಂದ ಶವವನ್ನು ನದಿಯ ದಡಕ್ಕೆ ತಂದು ಮುಟ್ಟಿಸಿದ್ದರು. ಬಳಿಕ ಪೊಲೀಸರು ಶವದ ಗುರುತು ಪತ್ತೆಗೆ ತನಿಖೆ ಆರಂಭಿಸಿದ್ದರು.

ಕಳೆದ ಎಂಟು ದಿನಗಳ ಹಿಂದೆ ಬೆಂಗಳೂರಿನ ಪೀಣ್ಯದಲ್ಲಿ ವ್ಯಕ್ತಿಯೊಬ್ಬರು ಕೊಲೆಯಾಗಿರುವ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಆ ಶವವನ್ನು ಕಳಸ ಸಮೀಪದ ಕುದುರೆಮುಖದಲ್ಲಿ ನದಿಗೆ ಎಸೆದಿರುವ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದರು. ಈ ಮಧ್ಯೆ ಭದ್ರಾನದಿಯಲ್ಲಿ ಸೋಮವಾರ ಶವ ಪತ್ತೆಯಾಗಿದ್ದರಿಂದ ಪೊಲೀಸರು ಬೆಂಗಳೂರಿನ ವರ್ತೂರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು,  ಆರೋಪಿಗಳನ್ನು ಮಂಗಳವಾರ ಸ್ಥಳಕ್ಕೆ ಕರೆದುಕೊಂಡು ಬಂದ ಬೆಂಗಳೂರು ಪೊಲೀಸರು ಕೊಲೆಯಾದ ವ್ಯಕ್ತಿಯ ಮೃತದೇಹ ನವಾಝ್ ಎಂಬುದನ್ನು ದೃಢಪಡಿಸಿದ್ದಾರೆಂದು ತಿಳಿದುಬಂದಿದೆ.

ಅನೈತಿಕ ಸಂಬಂಧದಿಂದ ಕೊಲೆ

ಈ ಮೊದಲೇ ವಿವಾಹಿತರಾಗಿದ್ದ ಆಯಿಷಾ ಮತ್ತು ನವಾಝ್ ಒಂದು ವರ್ಷದ ಹಿಂದೆ ತಮ್ಮ ಹಳೆಯ ಸಂಬಂಧ ಮುರಿದುಕೊಂಡು ಮತ್ತೆ ನವ ಜೀವನಕ್ಕೆ ಕಾಲಿಟ್ಟಿದ್ದರು. ಅವರು ಎರಡನೆಯ ಮದುವೆಯಾಗಿ ಬೆಂಗಳೂರಿನ ಪೀಣ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರೆಂದು ತಿಳಿದು ಬಂದಿದ್ದು, ಈ ನಡುವೆ ನವಾಝ್ ಪತ್ನಿ ಆಯಿಷಾಳಿಗೆ ಶಿವಕುಮಾರ್ ಎಂಬಾತ ಇತ್ತೀಚೆಗೆ ಪರಿಚಯವಾಗಿ ಅದು ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ.

ಪ್ರಾರಂಭದಲ್ಲಿ ಆಯಿಷಾಳಿಗೆ ಮದುವೆಯಾದ ವಿಚಾರ ಶಿವಕುಮಾರ್ ಗೆ ಗೊತ್ತಿರಲಿಲ್ಲ ಎನ್ನಲಾಗುತ್ತಿದ್ದು, ಮದುವೆಯಾದ ವಿಚಾರ ಗೊತ್ತಾದ ಮೇಲೆ ಆಯಿಷಾಳನ್ನು ಹೇಗಾದರೂ ಮಾಡಿ ಪಡೆಯಲೇಬೇಕೆಂಬ ಹಠಕ್ಕೆ ಬಿದ್ದ ಶಿವಕುಮಾರ ಪ್ರೇಯಸಿಯ ಪತಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ.

ಅದರಂತೆ ತನ್ನ ಸಹಚರರನ್ನು ಜೊತೆಗೂಡಿಸಿಕೊಂಡ ಶಿವಕುಮಾರ್, ಕ್ಯಾಂಟರ್ ವಾಹನದ ಚಾಲಕನಾಗಿದ್ದ ನವಾಝ್‍ನನ್ನು ಆ.20ರಂದು ನಸುಕಿನ ಜಾವ ಬಾಡಿಗೆಗೆಂದು ಕರೆ ಮಾಡಿದ್ದ. ನವಾಝ್ ಯಾರೋ ಬಾಡಿಗೆಗೆ ಕರೆ ಮಾಡಿದ್ದಾರೆಂದು ಆಯಿಷಾಳಿಗೆ ತಿಳಿಸಿ ಮನೆಯಿಂದ ಹೊರ ಬಂದಿದ್ದ. ಬಾಡಿಗೆ ನೆಪದಲ್ಲಿ ಕರೆಸಿಕೊಂಡ ಶಿವಕುಮಾರ್ ಮತ್ತು ಆತನ ಸಹಚರರು ನವಾಝ್‍ಗೆ ನಸುಕಿನಲ್ಲೇ ಮಾರಕಾಯುಧಗಳಿಂದ ಹಲ್ಲೆ ಮಾಡಿ ಕುತ್ತಿಗೆ ಕುಯ್ದು ಕೊಲೆ ಮಾಡಿದ್ದರು. ಹತ್ಯೆ ಬಳಿಕ ಕಾರಿನ ಢಿಕ್ಕಿಯಲ್ಲಿಟ್ಟು, ಅದನ್ನು ಕುದುರೆಮುಖ ಸಮೀಪಕ್ಕೆ ತಂದು ಮಧ್ಯಾಹ್ನದ ಸಮಯಕ್ಕೆ ಭದ್ರಾ ನದಿಗೆ ಎಸೆದು ಪರಾರಿಯಾಗಿದ್ದರೆಂದು ತಿಳಿದು ಬಂದಿದೆ.

ಇತ್ತ ಗಂಡ ಮನೆಗೆ ಬಾರದಿದ್ದಾಗ ಪತಿ ಮೊಬೈಲ್‍ಗೆ ಕರೆ ಮಾಡಿದ್ದಳು. ಮೊಬೈಲ್ ಸ್ವಿಚ್ ಆಫ್ ಆಗಿದ್ದ ಕಾರಣ ವರ್ತೂರ್ ಪೋಲೀಸ್ ಠಾಣೆಗೆ ಆಯಿಷಾ ದೂರು ನೀಡಿದ್ದಳು. ಎರಡು ದಿನಗಳ ನಂತರ ನವಾಝ್ ಪೋಷಕರು ಕೂಡ ದೂರು ನೀಡಿದ್ದರು. ಪ್ರತ್ಯೇಕ ಎರಡು ದೂರಗಳನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು ನವಾಝ್‍ನ ಮೊಬೈಲ್‍ನ ಪರಿಶೀಲನೆ ನಡೆಸಿದ್ದರು. ತನಿಖೆ ವೇಳೆ ಶಿವಕುಮಾರ್ ಸ್ನೇಹಿತ ಪವನ್ ಎಂಬಾತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಆತನನ್ನು ವಿಚಾರಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಪ್ರಮುಖ ಆರೋಪಿ ಶಿವಕುಮಾರ್ ನನ್ನು ಬಂಧಿಸಿದ ಪೊಲೀಸರು ಶವವನ್ನು ಕುದುರೆಮುಖದಲ್ಲಿ ನದಿಗೆ ಎಸೆದಿರುವುದನ್ನು ಬಾಯಿ ಬಿಡಿಸಿದ್ದರು ಎನ್ನಲಾಗಿದೆ.

ಬೆಂಗಳೂರು ಪೊಲೀಸರು ಸ್ಥಳಕ್ಕೆ ಆರೋಪಿಗಳೊಂದಿಗೆ ಬರುವ ಮುನ್ನವೇ ಶವ ಪತ್ತೆಯಾಗಿದ್ದು, ಸೋಮವಾರ ರಾತ್ರಿ ಕುದುರೆಮುಖ ಪೊಲೀಸರು ಬೆಂಗಳೂರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರಿಂದ ಮಂಗಳವಾರ ಆರೋಪಿಗಳೊಂದಿಗೆ ಆಗಮಿಸಿದ್ದ ಪೊಲೀಸರು ಶವ, ಕೊಲೆಯಾದ ನವಾಝ್ ಎಂಬವರದ್ದೆ ಎಂಬುದನ್ನು ದೃಢಪಡಿಸಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News