ಗೌರಿ ಲಂಕೇಶ್ ಹತ್ಯೆ ಪ್ರಕರಣದ ಬಗ್ಗೆ ಪ್ರಧಾನಿ ಮೋದಿ ಮೌನವೇಕೆ: ದಿನೇಶ್ ಗುಂಡೂರಾವ್ ಪ್ರಶ್ನೆ

Update: 2018-08-28 14:38 GMT

ಶಿವಮೊಗ್ಗ, ಆ.28: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಇಲ್ಲಿಯವರೆಗೂ ಪ್ರತಿಕ್ರಿಯೆ ನೀಡದೆ, ಮೌನಕ್ಕೆ ಶರಣಾಗಿರುವುದರ ಉದ್ದೇಶವೇನು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ. 

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. 'ಮೋದಿ ಅವರು ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಮೃದು ಧೋರಣೆ ತಾಳುವುದು ಎಷ್ಟು ಸಮಂಜಸ. ಅವರ ಈ ಜಾಣಮೌನ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ' ಎಂದು ಟೀಕಿಸಿದ್ದಾರೆ. 

ವಿಫಲ: ಬಿಜೆಪಿ ನೇತೃತ್ವದ ಕೇಂದ್ರ ಎನ್‍ಡಿಎ ಸರ್ಕಾರ ಎಲ್ಲ ರಂಗಗಳಲ್ಲಿಯೂ ವಿಫಲವಾಗಿದೆ. ದೇಶವಾಸಿಗಳು ಭ್ರಮನಿರಸನಗೊಂಡಿದ್ದಾರೆ. ಭ್ರಷ್ಟಾಚಾರ ಹೆಚ್ಚಾಗಿದೆ. ಮಹಿಳೆಯರ ಮೇಲೆ ದೌರ್ಜನ್ಯ ನಿರಂತರವಾಗಿ ಏರುಗತಿಯಲ್ಲಿ ಸಾಗಿದೆ. ಕಪ್ಪು ಹಣ ವಾಪಾಸ್ ತರುವಲ್ಲಿ ಸರ್ಕಾರ ಸೋತಿದ್ದು, ಉದ್ಯೋಗ ಸೃಷ್ಟಿಯಲ್ಲಿಯೂ ವೈಫಲ್ಯ ಸಾಧಿಸಿದೆ. ಅಗತ್ಯ ವಸ್ತುಗಳ ದರ ಹೆಚ್ಚಳದಿಂದ ಜನಸಾಮಾನ್ಯರು ತತ್ತರಿಸಿ ಹೋಗುವಂತಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಸಮಾಜವನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದೆ. ನಾವೆಲ್ಲರು ಒಂದೇ ಎಂಬ ತತ್ವದಲ್ಲಿ ಮುನ್ನಡೆಯುತ್ತಿದೆ. ಆದರೆ ಬಿಜೆಪಿಯು ಜಾತಿ-ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. 

ಇನ್ನು ಈ ಚುನಾವಣೆ ಜನರಿಗೆ ನೇರವಾಗಿ ಸ್ಪಂದಿಸುವ ಚುನಾವಣೆಯಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ. ಸಿದ್ದರಾಮಯ್ಯನವರ ಸರ್ಕಾರದ ಅವಧಿಯ ಅಭಿವೃದ್ಧಿಯನ್ನು ಈಗಲೂ ಜನ ನೆನಪು ಮಾಡಿಕೊಳ್ಳುತ್ತಿದ್ದಾರೆ. ಬಂಡವಾಳ ಹೂಡಿಕೆಯಲ್ಲಿ ರಾಜ್ಯ ದೇಶದಲ್ಲೆ ಪ್ರಥಮ ಸ್ಥಾನದಲ್ಲಿದೆ. ಸರ್ಕಾರ ಸರ್ವರಿಗೂ ಒಳ್ಳೆಯದನ್ನು ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಕೆಲ ಕಡೆ ಜೆಡಿಎಸ್ ಜೊತೆ ಪೈಪೋಟಿ ಇದೆ. ಕಾಂಗ್ರೆಸ್ ಧರ್ಮ ಹಾಗೂ ಪ್ರಚೋದನಾ ರಾಜಕಾರಣ ಮಾಡಲ್ಲ. ಬಿಜೆಪಿಯ ಬಗ್ಗೆ ತಿರಸ್ಕಾರದ ವಾತವಾರಣ ರಾಜ್ಯದಲ್ಲಿ ನಿರ್ಮಾಣವಾಗಿದೆ. ಸಿದ್ದರಾಮಯ್ಯನವರು ಭಾಷಣದಲ್ಲಿ ಸಹಜವಾಗಿಯೇ ಜನರು ಆಶೀರ್ವಾದ ಮಾಡಿದರೆ ಮತ್ತೆ ಸಿಎಂ ಆಗುತ್ತೇನೆ ಎಂದು ಹೇಳುತ್ತಾರೆ. ಆದರೆ ಅದನ್ನು ದೊಡ್ಡದಾಗಿ ಮಾಡುವುದು ಬೇಡ ಎಂದು ಹೇಳಿದರು.

ಸ್ಥಳೀಯ ಸಂಸ್ಥೆ ಚುನಾವಣೆ ಮುಂದಿನ ಲೋಕಸಭೆ ಚುನಾವಣೆಯ ದಿಕ್ಸೂಚಿ ಅಂತ ಹೇಳುವುದಕ್ಕೆ ಆಗುವುದಿಲ್ಲ. ಬಿಜೆಪಿ ಜನರ ಭಾವನೆಗಳ ಮೇಲೆ ಮತಯಾಚನೆ ಮಾಡುತ್ತಿದೆ. ಕೇಂದ್ರ ನಾಲ್ಕು ವರ್ಷಗಳಿಂದ ಆಡಳಿತ ನಡೆಸಲು ವಿಫಲವಾಗಿದೆ. ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಇದೇ ಸಂದರ್ಭದಲ್ಲಿ ದೂರಿದರು. 

ಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಮಂಜುನಾಥ ಭಂಡಾರಿ, ತೀ.ನಾ.ಶ್ರೀನಿವಾಸ್, ಕೆ.ಬಿ.ಪ್ರಸನ್ನಕುಮಾರ್, ಹೆಚ್.ಎಂ.ಚಂದ್ರಶೇಖರಪ್ಪ, ಎನ್.ರಮೇಶ್, ಇಸ್ಮಾಯಿಲ್‍ ಖಾನ್, ಹೆಚ್.ಎಸ್.ಸುಂದರೇಶ್, ಕಾಶೀ ವಿಶ್ವನಾಥ್, ವೈ.ಹೆಚ್.ನಾಗರಾಜ್ ಸೇರಿದಂತೆ ಮೊದಲಾದವರಿದ್ದರು. 

'ಯಾವುದೇ ಗೊಂದಲವಿಲ್ಲ'
ಸಮನ್ವಯ ಸಮಿತಿಯಲ್ಲಿ ಜೆಡಿಎಸ್‍ನಿಂದ ಓರ್ವರು ಇರಬೇಕೆಂಬ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಜೆಡಿಎಸ್‍ನಿಂದ ಯಾರನ್ನು ಸಮಿತಿಗೆ ಸದಸ್ಯರನ್ನಾಗಿ ನೇಮಿಸಬೇಕೆಂಬುವುದು ಆ ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ. ಸರ್ಕಾರದ ಆಡಳಿತಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಸಮನ್ವಯ ಸಮಿತಿಯಲ್ಲಿ ಚರ್ಚಿಸಿಯೇ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಸಾಲ ಮನ್ನಾ ವಿಷಯದ ಬಗ್ಗೆಯೂ ಚರ್ಚಿಸಲಾಗಿದೆ. ಕೆಲ ಸಣ್ಣಪುಟ್ಟ ಸಮಸ್ಯೆಗಳನ್ನು ಚರ್ಚಿಸಿ ಬಗೆಹರಿಸಿಕೊಳ್ಳುತ್ತೆವೆ' ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News