ಆಪರೇಷನ್ ಸಿದ್ದರಾಮಯ್ಯ ಮೂಲಕ ಸಮ್ಮಿಶ್ರ ಸರಕಾರ ಪತನ: ಜಗದೀಶ್ ಶೆಟ್ಟರ್

Update: 2018-08-28 14:49 GMT

ಗದಗ, ಆ.28: ರಾಜ್ಯದ ಸಮ್ಮಿಶ್ರ ಸರಕಾರದ ಪತನಕ್ಕೆ ಆಪರೇಷನ್ ಕಮಲ ಅಗತ್ಯವಿಲ್ಲ. ಆಪರೇಷನ್ ಸಿದ್ದರಾಮಯ್ಯ ಮೂಲಕವೆ ಸರಕಾರ ಉರಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಪವಿತ್ರ ಮೈತ್ರಿಯಾಗಿದ್ದು, ಸರಕಾರ ಬಹಳ ದಿನ ಇರುವುದಿಲ್ಲ. ಸಿದ್ದರಾಮಯ್ಯ ವಿದೇಶ ಪ್ರವಾಸದ ಬಳಿಕ ಎರಡು ಪಕ್ಷಗಳು ವಿಚ್ಛೇದನ ಪಡೆಯಲಿವೆ ಎಂದು ತಿಳಿಸಿದರು.

ಸರಕಾರ ಬೀಳಿಸಲಿಕ್ಕೆ ಸಿದ್ದರಾಮಯ್ಯ ಅವರು, ತಮ್ಮದೆ ಆದ ತಂತ್ರ ಹೆಣೆದು 20 ರಿಂದ 30 ಶಾಸಕರನ್ನು ಕರೆದುಕೊಂಡು ವಿದೇಶ ಪ್ರವಾಸಕ್ಕೆ ಹೊರಟಿದ್ದು, ಅವರು ಬರೋ ವೇಳೆಗೆ ಈ ಮೈತ್ರಿ ಸರಕಾರ ಬೀಳುವ ಸಂದರ್ಭಗಳೆ ಹೆಚ್ಚಿವೆ. ಹೀಗಾಗಿ ಸರಕಾರ ಪತನದಲ್ಲಿ ಬಿಜೆಪಿಯ ಯಾವುದೆ ಕೈವಾಡವಿಲ್ಲವೆಂದು ತಿಳಿಸಿದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕುರಿತು ಮಾತನಾಡುವ ಯಾವುದೆ ನೈತಿಕತೆಯಿಲ್ಲ. ಈ ದೇಶದ ಸಂಸ್ಕೃತಿ ಕುರಿತು ಏನೇನು ಗೊತ್ತಿಲ್ಲದ ಅವರು, ಅಪ್ರಬುದ್ಧತೆಯಿಂದ ಮಾತನಾಡುತ್ತಿದ್ದಾರೆ. ಇದು ಕಾಂಗ್ರೆಸ್‌ನ ವಿನಾಶದ ಮುನ್ಸೂಚನೆ ಎಂದು ಅವರು ಕಿಡಿಕಾರಿದರು.

ರಾಜ್ಯದಲ್ಲಿ ಆಡಳಿತದಲ್ಲಿರುವ ಮೈತ್ರಿ ಸರಕಾರ ಅನೈತಿಕ ಸಂಬಂಧದ ಸರಕಾರವಾಗಿದ್ದು, ಹೆಚ್ಚಿನ ದಿನ ಮುಂದುವರೆಯುವುದಿಲ್ಲವೆಂದು ಕಾಂಗ್ರೆಸ್-ಜೆಡಿಎಸ್ ಮುಖಂಡರ ನಡುವೆ ನಡೆಯುತ್ತಿರುವ ಆರೋಪ ಪ್ರತ್ಯಾರೋಪಗಳೆ ಸಾಕ್ಷಿಯೆಂದು ಮಾಜಿ ಸಚಿವ ಉಮೇಶ ಕತ್ತಿ ಅಭಿಪ್ರಾಯಿಸಿದರು.

ಒಂದು ವಾರ ಅಥವಾ 15 ದಿನದ ಒಳಗೆ ಸರಕಾರ ಬೀಳುತ್ತೆ. ಮತ್ತೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದು ಖಚಿತ. ಯಾವುದೇ ರಾಜಕೀಯ ಜ್ಞಾನ ಇಲ್ಲದ ವ್ಯಕ್ತಿಯನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿರುವುದು ಕಾಂಗ್ರೆಸ್‌ನ ದುರಾದೃಷ್ಟ ಎಂದು ಅವರು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News